ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ನಂಜೇಗೌಡರು, ಮಕ್ಕಳಲ್ಲಿ ಸರ್ಕಾರಿ ಅಥವಾ ಖಾಸಗಿ ಎಂದು ಗುರುತಿಸುವುದು ಸರಿ ಅಲ್ಲ. ಖಾಸಗಿ ಶಾಲಾ ಮಕ್ಕಳೊಂದಿಗೆ ಪೈಪೋಟಿ ನೀಡಲು ಬೇಕಾದ ಎಲ್ಲ ಸಹಕಾರವನ್ನು ಸರ್ಕಾರಿ ಶಾಲೆಗೆ ನಾನೇ ಖುದ್ದು ನೀಡುವುದಾಗಿ ತಿಳಿಸಿ, ನೃತ್ಯ ತರಬೇತಿ ಸೇರಿ ಉಡುಪುಗಳ ಬಗ್ಗೆ ಯಾವುದೇ ಬೇಡಿಕೆ ಇದ್ದರೆ ನನ್ನ ಬಳಿ ಕೇಳಿ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಮಾಲೂರು
ದೇಶದ ಸರ್ವತೋಮುಖ ಅಭಿವೃದ್ಧಿಗೆ ತನ್ನದೇ ಆದ ಕಾಣಿಕೆ ನೀಡುತ್ತಿರುವ ರೈತರು, ಕಾರ್ಮಿಕರು, ಮಹಿಳೆಯರು ಸೇರಿ ವಿವಿಧ ಸಾರ್ವಜನಿಕ ಸೇವಾ ಇಲಾಖೆ ಸಿಬ್ಬಂದಿಯನ್ನು ಸನ್ಮಾನಿಸುವ ಮೂಲಕ ಈ ಬಾರಿಯ ಸ್ವಾತಂತ್ರ್ಯುತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ತಾಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ ದಿನಾಚರಣೆ ಹಾಗೂ ದೇವರಾಜ ಅರಸು ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಹನೀಯರ ಹೋರಾಟದಿಂದ ಸ್ವತಂತ್ರ್ಯಗೊಂಡ ದೇಶವನ್ನು ಬಲಿಷ್ಠವಾಗಿ ಅಭಿವೃದ್ಧಿಪಡಿಸಬೇಕಾಗಿದ್ದು, ರೈತರು, ಕಾರ್ಮಿಕರು, ಸೈನಿಕರು, ಶಿಕ್ಷಕರು, ಸರ್ಕಾರಿ ಇಲಾಖೆ ಸಿಬ್ಬಂದಿ, ಕಾರ್ಮಿಕರು, ಮಹಿಳೆಯರನ್ನು ಗುರುತಿಸಿ ಅವರ ಸಾಧನೆಗೆ ಸಾರ್ಥಕತೆ ನೀಡಬೇಕಾಗಿದೆ, ಈ ನಿಟ್ಟಿನಲ್ಲಿ ಪ್ರತಿ ಇಲಾಖೆಯಿಂದಲೂ ಒಬ್ಬೊಬ್ಬರನ್ನು, ಕೃಷಿ ರೈತರನ್ನು ಸೇರಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡವರನ್ನು ಅಭಿನಂದಿಸುವ ಕೆಲಸವನ್ನು ಈ ಬಾರಿಯ ಸ್ವಾತಂತ್ರ್ಯ ದಿನದಂದು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಜತೆ ನೂರಷ್ಟು ಫಲಿತಾಂಶ ಪಡೆದ ತಾಲೂಕಿನ ೩೨ ಶಾಲಾ ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಗುವುದು ಎಂದರು.ಸ್ವಾತಂತ್ರ ದಿನ ಉತ್ತಮ ತಂಡ ಎಂದು ಸರ್ಕಾರಿ ಶಾಲೆಯೊಂದಿಗೆ ಖಾಸಗಿ ಶಾಲೆಯನ್ನು ಪರಿಗಣಿಸುವುದರ ಬಗ್ಗೆ ದಸಂಸ ಸಂಚಾಲಕ ಎಸ್.ಎಂ.ವೆಂಕಟೇಶ್ ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ನಂಜೇಗೌಡರು, ಮಕ್ಕಳಲ್ಲಿ ಸರ್ಕಾರಿ ಅಥವಾ ಖಾಸಗಿ ಎಂದು ಗುರುತಿಸುವುದು ಸರಿ ಅಲ್ಲ. ಖಾಸಗಿ ಶಾಲಾ ಮಕ್ಕಳೊಂದಿಗೆ ಪೈಪೋಟಿ ನೀಡಲು ಬೇಕಾದ ಎಲ್ಲ ಸಹಕಾರವನ್ನು ಸರ್ಕಾರಿ ಶಾಲೆಗೆ ನಾನೇ ಖುದ್ದು ನೀಡುವುದಾಗಿ ತಿಳಿಸಿ, ನೃತ್ಯ ತರಬೇತಿ ಸೇರಿ ಉಡುಪುಗಳ ಬಗ್ಗೆ ಯಾವುದೇ ಬೇಡಿಕೆ ಇದ್ದರೆ ನನ್ನ ಬಳಿ ಕೇಳಿ ಎಂದು ಹೇಳಿದರು.ಕೃಷಿ ಕ್ಷೇತ್ರದ ಸಾಧಕರನ್ನು ಕೋಚಿಮುಲ್ ವತಿಯಿಂದ ಸನ್ಮಾನಿಸಲಾಗುವುದು. ಪ್ರತಿ ವರ್ಷದಂತೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಯಾವುದೇ ಚ್ಯುತಿ ಬರದಂತೆ ನಡೆಸಿಕೊಂಡು ಬರಲು ಅಧಿಕಾರಿಗಳಿಗೆ ನಿರ್ದೇಶಿಸಿ, ಪಟ್ಟಣದಲ್ಲಿ ಅನಧಿಕೃತ ಫ್ಲೆಕ್ಸ್ ತೆರವು, ಸಂಚಾರ ಸುವ್ಯವಸ್ಥೆ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸ್ ಹಾಗೂ ನಗರ ಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ತಿಂಗಳ ೨೦ರಂದು ದೇವರಾಜ ಅರಸು ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದ ಶಾಸಕರು, ಎಲ್ಲ ಮಹನೀಯರ ಜಯಂತಿಗಳನ್ನು ಸರಳವಾಗಿ ಆಚರಿಸಲಾಗುವುದು ಎಂದರು.ತಹಸೀಲ್ದಾರ್ ರೂಪ, ಪ್ರಾಧಿಕಾರದ ಅಧ್ಯಕ್ಷ ವಿಜಯನರಸಿಂಹ, ಪೌರಾಯುಕ್ತ ಮಹದೇವ್, ಅಂಜನಿ ಸೋಮಣ್ಣ, ಸಂತೇಹಳ್ಳಿ ನಾರಾಯಣಸ್ವಾಮಿ, ನಾಗೇಶ್, ಬಿಇಒ ಕೆಂಪಯ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಾಳಿಗಾನಹಳ್ಳಿ ಶ್ರೀನಿವಾಸ್ , ಬೆಸ್ಕಾಂ ಎಇಇ ಬಾಷ, ಹನುಮಂತರೆಡ್ಡಿ, ನವೀನ್, ಕಾಕಪ್ಪ, ಲಕ್ಕೂರು ಬಾಬು , ರಮೇಶ್ , ಹರೀಶ್ ಗೌಡ ಇನ್ನಿತರರು ಇದ್ದರು.