ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಮ್ಮ ಸಂಸ್ಕೃತಿ ಹಾಗೂ ನಮ್ಮತನವನ್ನು ಕಾಪಾಡಿಕೊಳ್ಳಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.ಅಮೇರಿಕಾದ ಮೆರಿಲ್ಯಾಂಡ್ನ ಜೆಎಸ್ಎಸ್ ಆಧ್ಯಾತ್ಮಿಕ ಕೇಂದ್ರದಲ್ಲಿ ಕಾವೇರಿ ಕನ್ನಡ ಸಂಘದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸ್ನೇಹ-ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಇದರ ಮಧ್ಯೆ ಸಮಾಜಕ್ಕೆ ಏನನ್ನಾದರೂ ಒಳ್ಳೆಯದನ್ನು ಮಾಡುತ್ತಿರಬೇಕು ಎಂದರು.ಸುತ್ತೂರು ಶ್ರೀಮಠ ಅಮೇರಿಕಾದಲ್ಲಿರುವ ಭಾರತೀಯರ ಕಷ್ಟ-ಸುಖಗಳಿಗೆ ಸ್ಪಂದಿಸುವುದರೊಂದಿಗೆ ನಮ್ಮ ಸಂಸ್ಕೃತಿ-ಸಂಸ್ಕಾರಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಜೆಎಸ್ಎಸ್ ಆಧ್ಯಾತ್ಮಿಕ ಕೇಂದ್ರವನ್ನು ಸ್ಥಾಪಿಸಿ ಸೇವೆಯನ್ನು ಸಲ್ಲಿಸುತ್ತಿದೆ. ಅಮೇರಿಕಾದಲ್ಲಿ ಪೂಜ್ಯರ ಸಾನ್ನಿಧ್ಯದಲ್ಲಿ ಕನ್ನಡಿಗರೆಲ್ಲರೂ ಸಮ್ಮಿಲನಗೊಂಡಿರುವುದು ನಮ್ಮೆಲ್ಲರ ಸೌಭಾಗ್ಯ. ಇದು ಭಕ್ತರು ಮತ್ತು ಭಗವಂತನ ನಡುವೆ ಅವಿನಾಭಾವ ಸಂಬಂಧವನ್ನು ಸೂಚಿಸುತ್ತದೆ ಎಂದು ಅವರು ತಿಳಿಸಿದರು.ಸುತ್ತೂರು ಶ್ರೀಮಠದ ಸೇವೆ ಅನನ್ಯವಾದುದು. ಪೂಜ್ಯರು ಅನೇಕ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಎಲ್ಲ ಮಕ್ಕಳಿಗೂ ಶಿಕ್ಷಣವನ್ನು ನೀಡುವ ಕಾಯಕವನ್ನು ಮಾಡುತ್ತಿದ್ದಾರೆ. ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಶ್ರೀಮಠ ಮಾಡುತ್ತಿದೆ. ಪೂಜ್ಯರು ಕೈಗೊಂಡಿರುವ ಕಾರ್ಯಗಳಿಗೆ ನಾವೆಲ್ಲರೂ ಕೈ ಜೋಡಿಸಬೇಕು ಎಂದು ಅವರು ಹೇಳಿದರು.ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಡಿ.ಕೆ. ಶಿವಕುಮಾರ್ ಅವರು ಉತ್ತಮ ಆಡಳಿತಗಾರರು. ಅವರು ರಾಜಕೀಯ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿರುವವರು. ಎಲ್ಲವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಮುನ್ನಡೆಸುತ್ತಿದ್ದಾರೆ. ಅತ್ಯುತ್ತಮ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ. ಸಮಸ್ಯೆಗಳನ್ನು ಅತ್ಯಂತ ಧೈರ್ಯವಾಗಿ ಎದುರಿಸುವ ಶಕ್ತಿ ಅವರಲ್ಲಿದೆ ಎಂದು ತಿಳಿಸಿದರು. ಅವರು ಆಗಮಿಸಿ ಕನ್ನಡಿಗರೊಂದಿಗೆ ಬೆರೆತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು ಎಂದರು.ಅಕ್ಕದ ಪದಾಧಿಕಾರಿಗಳಾದ ಬೆನ್ ಚಿಕ್ಕಸ್ವಾಮಿ, ರವಿಡಂಕನಕೋಟೆ, ದಯಾ ಆದಪ್ಪ, ಕಾವೇರಿ ಕನ್ನಡ ಕೂಟದ ಅಧ್ಯಕ್ಷ ಸುದರ್ಶನ್, ಅನಿವಾಸಿ ಭಾರತೀಯರು ಹಾಗೂ ಜೆಎಸ್ಎಸ್ ಮಿಷನ್ ನ ಸ್ವಯಂ ಸೇವಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ನಾಗಶಂಕರ್ ಸ್ವಾಗತಿಸಿದರು. ಮುರಳೀಧರ ಪೈ ಪ್ರಾರ್ಥಿಸಿದರು. ಶುಭಾ ಪ್ರಭು ಕಾಮತ್ ವಂದಿಸಿದರು.