ಹೆಣ್ಣು ಸಂಸಾರ, ದೇಶದ ಕಣ್ಣು: ಸಚಿವ ಶರಬಸಪ್ಪಗೌಡ ದರ್ಶನಾಪೂರ

| Published : Jan 25 2024, 02:01 AM IST

ಹೆಣ್ಣು ಸಂಸಾರ, ದೇಶದ ಕಣ್ಣು: ಸಚಿವ ಶರಬಸಪ್ಪಗೌಡ ದರ್ಶನಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಕಾರ್ಯಕ್ರಮ ಅಂಗವಾಗಿ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಸಚಿವರು ಮಾತನಾಡಿದರು. ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನರು ಎಂಬ ಮನಸ್ಥಿತಿ ಬರಬೇಕಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಹೆಣ್ಣು ಸಂಸಾರದ ಕಣ್ಣು, ದೇಶದ ಕಣ್ಣು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಹೆಣ್ಣಿನ ಬಗ್ಗೆ ಕೀಳರಿಮೆ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಶಿಶು ಅಭಿವೃದ್ಧಿ ಯೋಜನೆ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನರು ಎಂಬ ಮನಸ್ಥಿತಿ ಬರಬೇಕಾಗಿದೆ. ಹೆಣ್ಣು ಭ್ರೂಣಹತ್ಯೆ, ವರದಕ್ಷಿಣೆ, ಬಾಲ್ಯವಿವಾಹ, ಬಡತನ, ಅನಕ್ಷರತೆ, ಲಿಂಗತಾರತಮ್ಯ, ಮುಂತಾದ ಸಮಸ್ಯೆಗಳನ್ನು ಶಿಕ್ಷಣವಂತರು ಮಾತ್ರ ಹೋಗಲಾಡಿಸಲು ಸಾಧ್ಯವಾಗುತ್ತದೆ. ದೇಶದ ಭವಿಷ್ಯ ಶಿಕ್ಷಣವಂತರ ಕೈಯಲ್ಲಿದೆ. ಸಮಾಜದಲ್ಲಿ ಹೆಣ್ಣು ಎದುರಿಸುವ ಎಲ್ಲ ತಾರತಮ್ಯವನ್ನು ತೊಡೆದು ಹಾಕಿದಾಗ ಮಾತ್ರ ಸದೃಢ ಭಾರತ ನಿರ್ಮಾಣವಾಗಲು ಸಾಧ್ಯವೆಂದರು.

ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ಹೆಣ್ಣು ಮಗುವಿಗೆ ಹೆಚ್ಚಿನ ಅವಕಾಶ ಸೃಷ್ಟಿಸುವುದು ಮತ್ತು ಹೆಣ್ಣು ಮಗುವಿನತ್ತ ಸಮಾಜದ ದೃಷ್ಟಿಕೋನ ಬದಲಿಸಿಬೇಕು. ಹೆಣ್ಣು ಧೈರ್ಯವಂತಳಾಗಿ ಬಾಳಬೇಕು. ಶಾಲೆಯಲ್ಲಿ ಶಿಕ್ಷಕರು ಹೆಣ್ಣುಮಕ್ಕಳಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ನ್ಯಾ.ರವೀಂದ್ರ ಹೊನೊಲೆ ಮಾತನಾಡಿ, ಭಾರತದಲ್ಲಿ ಅಕ್ಷರಕ್ರಾಂತಿ ಮಾಡಿದ ದೇಶದ ಮೊದಲ ಮಹಿಳಾ ಶಿಕ್ಷಕಿ, ಮಹಿಳೆಯರಿಗೆ ಅಕ್ಷರ ಜ್ಞಾನ ನೀಡಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದವರು ಸಾವಿತ್ರಿಬಾಯಿ ಫುಲೆ ಎಂದ ಅವರು, ಇಂದು ಮಹಿಳೆಯರ ಸ್ಥಿತಿಯನ್ನು ಮೇಲಕ್ಕೆ ತರಲು ಹಲವು ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಮಾತನಾಡಿ, ಹೆಣ್ಣು ಮಕ್ಕಳು ಜೀವನದಲ್ಲಿ ಚೆನ್ನಾಗಿ ಓದಿ ಗುರಿ ಇಟ್ಟುಕೊಂಡು ಉನ್ನತ ಅಧಿಕಾರಿಗಳಾಗಿ ಹೊರಹೊಮ್ಮಿ, ಹೆತ್ತವರಿಗೆ ಜಿಲ್ಲೆಗೆ ಹೆಸರು ತರಬೇಕು ಎಂದರು.

ಜಿಪಂ ಸಿಇಓ ಗರಿಮಾ ಪನ್ವಾರ ಮಾತನಾಡಿ, ಮಹಿಳೆ ಯಾವುದಕ್ಕೂ ಕಡಿಮೆಯಿಲ್ಲ. ಕರುಣೆ, ತಾಳ್ಮೆ, ತ್ಯಾಗದ ಪ್ರತೀಕವೇ ಹೆಣ್ಣು ಎಂದರು.

ಡಿವೈಎಸ್ಪಿ ಬಸವೇಶ್ವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವೀರನಗೌಡ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಂಗಾಧರ ದೊಡ್ಮನಿ, ಮಹಿಳಾ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಪ್ರೇಮಮೂರ್ತಿ, ಮಕ್ಕಳ ರಕ್ಷಣಾ ಅಧಿಕಾರಿ ದಶರಥನಾಯಕ ಸೇರಿದಂತೆ ಇತರರಿದ್ದರು.