ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪದವಿ ಪ್ರದಾನ ಸಮಾರಂಭ ‘ವಿಶಿಖಾನುಪ್ರವೇಶ - 2026’ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಉದ್ಯಾವರ: ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪದವಿ ಪ್ರದಾನ ಸಮಾರಂಭ ‘ವಿಶಿಖಾನುಪ್ರವೇಶ - 2026’ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸ್ನಾತಕ ಪದವೀಧರರಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಿದ ರಾಷ್ಟ್ರೀಯ ಭಾರತೀಯ ವೈದ್ಯಕೀಯ ಪದ್ಧತಿ ಆಯೋಗದ ಅಧ್ಯಕ್ಷೆ ಡಾ. ಸುಶ್ರುತ ಕನೌಜಿಯಾ ಅವರು ಪದವೀಧರರನ್ನು ಉದ್ದೇಶಿಸಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪದವೀಧರರು ಹೊರಬರುತ್ತಿರುವುದು ಸಂತಸದ ಸಂಗತಿ, ಮಹಿಳಾ ಪದವೀಧರರು ತಮ್ಮ ವೃತ್ತಿಪರ ಜವಾಬ್ದಾರಿಗಳನ್ನು ನಿರ್ವಹಿಸುವುದರಿಂದ ಹಿಂದೆ ಸರಿಯದೆ, ವೈದ್ಯಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ದೇಶದ ಪ್ರತಿಷ್ಠಿತ ಆಯುರ್ವೇದ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ಶಿಕ್ಷಣ ಪಡೆದಿರುವ ಪದವೀಧರರು ಸಂಸ್ಥೆಯ ಶ್ರೇಷ್ಠ ಪರಂಪರೆ ಮತ್ತು ಮೌಲ್ಯಗಳನ್ನು ತಮ್ಮ ವೃತ್ತಿಜೀವನದ ಮೂಲಕ ವಿಶ್ವದಾದ್ಯಂತ ಪಸರಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ತಿಳಿಸಿದರು.ಸ್ನಾತಕೋತ್ತರ ಪದವೀಧರರಿಗೆ ಪದವಿ ಹಾಗೂ ರ‍್ಯಾಂಕ್ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಅವರು, ಆಯುರ್ವೇದ ಕಾಲೇಜು ಸ್ಥಾಪನೆಯು ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕನಸಿನ ಯೋಜನೆಯಾಗಿದೆ. ಇಲ್ಲಿನ ಪದವಿ ಪಡೆದ ವಿದ್ಯಾರ್ಥಿಗಳು, ಆಯುರ್ವೇದಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ತೊಡಗಿಸಿಕೊಂಡು, ಆಯುರ್ವೇದವನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಜಯಕೃಷ್ಣ ನಾಯಕ್, ಸ್ನಾತಕ ವಿಭಾಗದ ಡೀನ್ ಡಾ. ಪೃಥ್ವಿರಾಜ್ ಪುರಾಣಿಕ್ ಹಾಗೂ ಡೀನ್ (ಆಡಳಿತ) ಡಾ. ಪ್ರಶಾಂತ್ ಕೆ. ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಅವರು ಸ್ವಾಗತಿಸಿ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ, ಶುಭ ಹಾರೈಸಿದರು. ಡಾ. ಪ್ರಶಾಂತ್ ಕೆ. ಅವರು ಪದವೀಧರರಿಗೆ ವೈದ್ಯಕೀಯ ವೃತ್ತಿಯ ಪ್ರಮಾಣವಚನ ಬೋಧಿಸಿದರು.

ಸ್ನಾತಕೋತ್ತರ ಮತ್ತು ಪಿಎಚ್.ಡಿ. ವಿಭಾಗದ ಡೀನ್ ಡಾ. ಶ್ರೀಕಾಂತ್ ಪಿ. ಅವರು ವಂದಿಸಿದರು. ಕಾರ್ಯಕ್ರಮವನ್ನು ಡಾ. ಶುಭಾ ಪಿ.ಯು. ಮತ್ತು ಡಾ. ಮೇಘನಾ ಕೆ.ಎ. ನಿರೂಪಿಸಿದರು.