ಸಾರಾಂಶ
ಬೀದರ್ : ವಿದ್ಯಾರ್ಥಿನಿಯರು ಪದವಿ ಮುಗಿದ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಉತ್ತಮ ಗುರಿಯ ಕನಸು ಕಾಣಬೇಕು ಎಂದು ನಿವೃತ್ತ ಪ್ರಾಂಶುಪಾಲರು ಹಾಗೂ ಬೀದರ್ ವಿವಿಯ ಡಿನ್ ಪ್ರೊ.ಜಗನ್ನಾಥ ಹೆಬ್ಬಾಳೆ ಕರೆ ನೀಡಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಬುಧವಾರ ಮಹಿಳಾ ಪ್ರಥಮ ದರ್ಜೆ ಕಾಲೇಜು ವತಿಯಿಂದ 2023-24ನೇ ಶೈಕ್ಷಣಿಕ ಸಾಲಿನ ವಿವಿಧ ಘಟಕಗಳ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮ ಯುಗದಲ್ಲಿ 100 ಜನರಲ್ಲಿ ಕೇವಲ 3 ಜನರಿಗೆ ಮಾತ್ರ ಸರ್ಕಾರಿ ನೌಕರಿ ಸಿಗುತ್ತದೆ. ಹೀಗಾಗಿ ಶೇ.97ರಷ್ಟು ಜನರು ಸರ್ಕಾರಿ ನೌಕರಿಯಿಂದ ವಂಚಿತರಾಗುತಿದ್ದಾರೆ ಹೀಗಾಗಿ ಮಕ್ಕಳು ಕೌಶಲ್ಯ ತರಬೇತಿ ಪಡೆದು ಸ್ವ ಉದ್ಯೋಗ ಹಾಗೂ ಇನ್ನಿತರ ಚಟುವಟಿಕೆಗಳನ್ನು ಕೈಗೊಳ್ಳಬಹುದು ಎಂದು ತಿಳಿಸಿದರು.
ಸಹಕಾರ ಇಲಾಖೆಯ ಸಹಾಯಕ ಉಪ ನಿಬಂಧಕರಾದ ಡಾ.ನಿಲಾಂಬಿಕಾ ಅಮರಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ದೊಡ್ಡ ಹುದ್ದೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಕೇವಲ ಶೇ.17ರಷ್ಟು ಇದೆ. ಹೀಗಾಗಿ ಪದವಿಯ ನಂತರ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೆ ಬರಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮನೋಜಕುಮಾರ ಅಧ್ಯಕ್ಷತೆ ವಹಿಸಿದರು. ಸಾಂಸ್ಕೃತಿಕ ಘಟಕದ ಸಂಯೋಜಕರಾದ ವಿಜಯಲಕ್ಷ್ಮಿ ಸ್ವಾಗತಿಸಿದರು. ಡಾ. ಪಾಟೀಲ್ ಶ್ರೀಕಾಂತ ಅವರು ಕಾಲೇಜಿನ ವಾರ್ಷಿಕ ವರದಿ ವಾಚನ ಮಾಡಿದರು.
ಇದೇ ಸಂದರ್ಭದಲ್ಲಿ ಕ್ರೀಡೆ ಹಾಗೂ ವಿವಿಧ ಚಟುವಟಿಕೆಗಳಾದ ಪ್ರಬಂಧ, ರಂಗೋಲಿ, ಮೇಹಂದಿ, ನೃತ್ಯ, ಮಾಡಲಿಂಗ, ಭಾಷಣ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥನಿಯರಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.
ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ಕಾಲೇಜಿನ ಸಂಜನಾ ರಾಮದಾಸ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಕಾಲೇಜಿನ ಸಂಯೋಜಕರಾದ ಡಾ. ಸಂಜೀವಕುಮಾರ ಅಪ್ಪೆ, ಶ್ರೀನಿವಾಸರೆಡ್ಡಿ, ಡಾ. ವಿದ್ಯಾ ಪಾಟೀಲ್ ಮತ್ತಿತರು ಇದ್ದರು.