ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣ ಅಕ್ಷಮ್ಯ : ಮಹಿಳೆಯರ ಸುರಕ್ಷತೆಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು

| Published : Aug 22 2024, 01:03 AM IST / Updated: Aug 22 2024, 06:01 AM IST

Kolkata rape murder case
ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣ ಅಕ್ಷಮ್ಯ : ಮಹಿಳೆಯರ ಸುರಕ್ಷತೆಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಕೆಲವು ದಿನಗಳಿಂದ ಕಲ್ಕತ್ತಾ ಮತ್ತು ಬೇರೆ ಕಡೆಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣ ಅಕ್ಷಮ್ಯ. ಇದರ ವಿರುದ್ಧ ಸರ್ಕಾರಗಳು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ ಆಗ್ರಹಿಸಿದರು.

 ಮೈಸೂರು :  ಕಳೆದ ಕೆಲವು ದಿನಗಳಿಂದ ಕಲ್ಕತ್ತಾ ಮತ್ತು ಬೇರೆ ಕಡೆಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣ ಅಕ್ಷಮ್ಯ. ಇದರ ವಿರುದ್ಧ ಸರ್ಕಾರಗಳು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ ಆಗ್ರಹಿಸಿದರು.

ನಾಗರಿಕ ಸಮಾಜ ತಲೆತಗ್ಗಿಸುವಂತಹ ಪೈಶಾಚಿಕ ಕೃತ್ಯಗಳು ನಡೆಯುತ್ತಿವೆ. ಇದನ್ನು ಅತ್ಯಂತ ಉಗ್ರ ಶಬ್ದಗಳಲ್ಲಿ ಖಂಡಿಸಬೇಕು. ಮಾತ್ರವಲ್ಲ, ಇಡೀ ದೇಶದ ಮಹಿಳೆಯರ ಸುರಕ್ಷತೆಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತ್ಯಂತ ಕಠಿಣವಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಆಗ್ರಹಿಸಿದರು.

ಮಹಿಳೆಯರ ಸುರಕ್ಷೆಗೆ ಸಂಬಂಧಿಸಿದ ಕಾನೂನು 2005ರಲ್ಲಿ ಜಾರಿಗೆ ಬಂದರೂ ಆ ಕಾನೂನಿನ ಅರಿವನ್ನು ಮೂಡಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ನಾವು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಪ್ರೌಢಶಾಲೆ ಹಂತದಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಅರಿವು ಮೂಡಿಸಬೇಕು. ಪ್ರೌಢಶಾಲೆಯಿಂದ ಪದವಿ ತರಗತಿವರೆಗೆ ಎಲ್ಲಾ ಹೆಣ್ಣು ಮಕ್ಕಳಿಗೆ ಸುರಕ್ಷತೆಗೆ ಬೇಕಾಗಿರುವ ಆತ್ಮರಕ್ಷಣೆ ಕಲೆಯ ತರಬೇತಿ ಕೊಡಬೇಕಿದೆ ಎಂದರು.

ತಾಂತ್ರಿಕತೆ ಇಷ್ಟು ಮುಂದುವರಿದ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ರಕ್ಷಣೆ ಒದಗಿಸಲು ಸರ್ಕಾರ ವಿಶೇಷ ಆಪ್ ಅಭಿವೃದ್ಧಿಪಡಿಸಿ ಜಿಪಿಎಸ್ ಟ್ಯಾಗ್ ಮೂಲಕ ಮಹಿಳೆಯರನ್ನು ಜಿಪಿಎಸ್ ಟ್ಯಾಗ್ ಗೆ ಒಳಪಡಿಸಬೇಕು. ಇದು ಕಷ್ಟಸಾಧ್ಯವೇನಲ್ಲ. ಈ ಆಪ್ ನಲ್ಲಿ ಪ್ಯಾನಿಕ್ ಬಟನ್ ಒದಗಿಸಬೇಕು. ಆಗ ತುರ್ತು ಸಂದರ್ಭದಲ್ಲಿ ಆ ಪ್ಯಾನಿಕ್ ಬಟನ್ ಒತ್ತಿ ರಕ್ಷಣೆ ಪಡೆಯಲು ಅನುಕೂಲವಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಪ್ರತಿಯೊಂದರಲ್ಲೂ ಕೂಡ ಮಹಿಳೆಯರ ಬಗೆಗಿರುವ ತಾತ್ಸಾರ ಭಾವನೆ ಹೋಗಬೇಕಿದೆ. ಸರ್ಕಾರ ಕಾನೂನು ಮಾಡುತ್ತದೆ. ಆದರೆ ಅದನ್ನು ಜಾರಿಗೆ ತರುವುದರಲ್ಲಿ ಸೋಲುತ್ತದೆ. ಪೊಲೀಸರು ಕಾನೂನನ್ನು ತಮ್ಮ ವಿವೇಚನೆಗೆ ತಕ್ಕಂತೆ ಬಳಸದೆ, ಅಕ್ಷರಶಃ ಜಾರಿಗೊಳಿಸಬೇಕು. ಉದಾಹರಣೆಗೆ ಮಹಾರಾಷ್ಟ್ರದಲ್ಲಿ ಘಟನೆ ನಡೆದ ಕೂಡಲೇ ಪ್ರಕರಣ ದಾಖಲಿಸಲು ಪೊಲೀಸರು ಸಹಕರಿಸದೆ ವಿಳಂಬಿಸಿದ್ದು, ಅದೇ ರೀತಿ ಪಶ್ಚಿಮ ಬಂಗಾಳದಲ್ಲೂ ವಿಳಂಬ ನೀತಿ ಅನುಸರಿಸಿದ್ದು, ಅಪರಾಧಿಗಳಿಗೆ ತಪ್ಪಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ ಎಂದರು.

ದೆಹಲಿಯ ನಿರ್ಭಯ ಪ್ರಕರಣದ ನಂತರ ಇನ್ಯಾವುದೋ ಘಟನೆ ಆಗುವ ತನಕ ನಾವು ಮರೆವಿಗೆ ಒಳಗಾಗುತ್ತೇವೆ. ಹಾಗೆ ಆಗಬಾರದು. ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಸದಾ ಜಾಗೃತರಾಗಿ ವರ್ತಿಸಬೇಕು. ಜನಂಖ್ಯೆಯ ಅರ್ಧ ಭಾಗ ಇರುವ ಮಹಿಳೆಯರಿಗೆ ಸುರಕ್ಷತೆ ಕೊಡಬೇಕಾದ್ದು ಎಲ್ಲರ ಆದ್ಯತೆ. ಕಾಮಪಿಪಾಸುಗಳನ್ನು ಅತ್ಯಂತ ಕಠಿಣಾತಿ ಕಠಿಣ ಶಿಕ್ಷೆಗೆ ಗುರಿಪಡಿಸುವ ಕಾನೂನು ಬರಬೇಕು ಎಂದು ಅವರು ನುಡಿದರು.

ರಾಜಕಾರಣಕ್ಕೆ ಬಂದ ಹೆಣ್ಣುಮಕ್ಕಳ ಮೇಲೆ ಗೂಬೆ ಕೂರಿಸಿ ಚಾರಿತ್ರ್ಯ ವಧೆ ಮಾಡುವುದು ಕೂಡ ನಡೆಯುತ್ತದೆ. ಇಂಥವನ್ನೆಲ್ಲ ತಡೆಯಲು ರಾಜಕೀಯ ಪಕ್ಷಗಳು ತಮ್ಮ ಸಂಘಟನೆ ಒಳಗೆ ಸೂಕ್ತ ವ್ಯವಸ್ಥೆ ಹೊಂದಿರಬೇಕು ಮತ್ತು ಅದಕ್ಕೆ ಕಾನೂನಿನ ಬಲ ಇರಬೇಕು. ಚಳವಳಿ ರೂಪದಲ್ಲಿ ಈ ಎಲ್ಲಾ ಸಂಗತಿ ಆಗಬೇಕಿದೆ. ಆಗ ಮಾತ್ರ ಕೊಲೆ, ಸುಲಿಗೆ, ಅತ್ಯಾಚಾರದಂತಹ ದೌರ್ಜನ್ಯ ತಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಠ್ಯದ ಭಾಗವಾಗಿ ಮಾಡಬೇಕು ಅವರು ಒತ್ತಾಯಿಸಿದ್ದಾರೆ.