ಸಾರಾಂಶ
ನಗರದ ರಾಷ್ಟ್ರಪತಿ ರಸ್ತೆಯಲ್ಲಿರುವ ಶ್ರೀರಾಘವೇಂದ್ರಸ್ವಾಮಿಗಳ ಪ್ರತೀಕ ಸನ್ನಿಧಾನದಲ್ಲಿ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 353ನೇ ವರ್ಷದ ಆರಾಧನಾ ಮಹೋತ್ಸವ ಅಂಗವಾಗಿ ಬುಧವಾರ ಮಧ್ಯಾರಾಧನೆ ಸೇರಿದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳು ಸಾಂಗವಾಗಿ ನೆರವೇರಿತು.
ನಂಜನಗೂಡು : ನಗರದ ರಾಷ್ಟ್ರಪತಿ ರಸ್ತೆಯಲ್ಲಿರುವ ಶ್ರೀರಾಘವೇಂದ್ರಸ್ವಾಮಿಗಳ ಪ್ರತೀಕ ಸನ್ನಿಧಾನದಲ್ಲಿ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 353ನೇ ವರ್ಷದ ಆರಾಧನಾ ಮಹೋತ್ಸವ ಅಂಗವಾಗಿ ಬುಧವಾರ ಮಧ್ಯಾರಾಧನೆ ಸೇರಿದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳು ಸಾಂಗವಾಗಿ ನೆರವೇರಿತು.
ರಾಘವೇಂದ್ರಸ್ವಾಮಿಗಳ ವಿಗ್ರಹವಿರುವ ಏಕೈಕ ಮಠ ಎನ್ನುವ ಹೆಗ್ಗಳಿಕೆ ಹೊಂದಿರುವ ನಂಜನಗೂಡಿನಲ್ಲಿ ಮಂಗಳವಾರ ಪೂರ್ವಾರಾಧನೆಯೊಂದಿಗೆ ಚಾಲನೆಗೊಂಡಿತು. ಇನ್ನು ರಾಯರು ಬೃಂದಾವನಾ ಪ್ರವೇಶ ಮಾಡಿದ ದಿನದ ಸ್ಮರಣಾರ್ಥವಾಗಿ ಬುಧವಾರ ಹಲವು ಪೂಜಾ ಸೇವೆಗಳು ಜರುಗಿದವು.
ರಾಯರ ಪಾದ ಪೂಜೆ ನಡೆಸಿದ ಬಳಿಕ ಮಠದ ಒಳಾವರಣದಲ್ಲಿ ರಥೋತ್ಸವ ಜರುಗಿತು. ರಾಯರಿಗೆ ವರ್ಣಾಂಕೃತದೊಂದಿಗೆ ಮುಂಜಾನೆ ಪಂಚಾಮೃತ ಅಭಿಷೇಕ ನಡೆಯಿತು. ನಂತರ ಮಹಾಮಂಗಳಾರತಿ ನೆರವೇರಿತು.
ಮಠದ ಗರ್ಭಗುಡಿ ಸೇರಿದಂತೆ ಒಳಾವರಣ, ಮುಖ್ಯ ಪ್ರಾಂಗಣದಲ್ಲಿ ಮಾಡಿದ್ದ ಬಗೆಬಗೆಯ ಹೂವಿನ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು. ಬೆಳಗ್ಗೆಯಿಂದ ರಾತ್ರಿವರೆಗೂ ಭಕ್ತರು ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು. ಮಧ್ಯಾಹ್ನ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ವಿದ್ವಾನ್ ಸುಮುಖಸೂರ್ಯ ಅವರು ನಡೆಸಿಕೊಟ್ಟ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಭಕ್ತರನ್ನು ಮಂತ್ರಮುಗ್ಧಗೊಳಿಸಿತು. ವಿದ್ವಾನ್ ಕೇಶವ್ ಮೋಹನ್ ಕುಮಾರ್ ಅವರು ನಡೆಸಿಕೊಟ್ಟ ಕರ್ನಾಟಕ ಶಾಸ್ತ್ರೀಯ ಪಿಟೀಲು ವಾದನ ಭಕ್ತರನ್ನು ಮನಸೂರೆಗೊಳಿಸಿತು. ವಿದ್ವಾನ್ ಭಾನುಸಿಂಹ ಅವರು ಬುಧವಾರ ದಾಸವಾಣಿ ನಡೆಸಿಕೊಟ್ಟರು.
ಆರಾಧನಾ ಮಹೋತ್ಸವ ಆರಂಭಕ್ಕೂ ಮುನ್ನ ಧಾನ್ಯಪೂಜೆ, ಗೋಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿತು. ಗುರುವಾರ ಉತ್ತರಾಧನೆ ಅಂಗವಾಗಿ ರಥೋತ್ಸವ ನೆರವೇರಲಿದೆ. ಕಳೆದ ಮೂರು ದಿನಗಳಿಂದ ಭಕ್ತರು ಮಠಕ್ಕೆ ಸಾಗರೋಪಾದಿಯಲ್ಲಿ ಆಗಮಿಸಿ ರಾಯರ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಆ. 23 ರಂದು ಸುಜ್ಞಾನೇಂದ್ರತೀರ್ಥರ ಆರಾಧನೆಯೊಂದಿಗೆ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಮಠದ ವ್ಯವಸ್ಥಾಪಕ ಕೆ. ಸುಧಾಕರ್ ತಿಳಿಸಿದರು.