ಕೈವಾರ ತಾತಯ್ಯನವರ ಕಾರ್ಯ ಶ್ಲಾಘನೀಯ

| Published : Aug 22 2024, 01:03 AM IST

ಸಾರಾಂಶ

ಭಕ್ತರ ಅಭ್ಯುದಯಕ್ಕಾಗಿ ಜೀವಿತವನ್ನೇ ಮುಡಿಪಾಗಿಟ್ಟಿದ್ದರು

ಕನ್ನಡಪ್ರಭ ವಾರ್ತೆ ಮೈಸೂರು

ಲೋಕ ಕಲ್ಯಾಣಕ್ಕಾಗಿ ಕೈವಾರ ತಾತಯ್ಯ ಮಾಡಿದ ಕಾರ್ಯ ಅಮೋಘ ಮತ್ತು ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ವಿ. ಶರಣಪ್ಪ ಹಲಸೆ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ವತಿಯಿಂದ ಬಿಒಎಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀಯೋಗಿ ನಾರೇಯಣ ತಾತ್ವಿಕತೆ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕೈವಾರರ ಆರಾಧ್ಯ ದೈವ ಶ್ರೀಯೋಗಿ ನಾರೇಯಣ ಅವರು ತೆಲುಗು, ಕನ್ನಡ ಭಾಷೆಗಳಲ್ಲಿ ಅದ್ವಿತೀಯವಾದ ಆಧ್ಯಾತ್ಮ ಚಿಂತನೆಗಳನ್ನೊಳಗೊಂಡ ಕೀರ್ತನೆ, ಕಾಲಜ್ಞಾನ, ತತ್ತ್ವಪದ ರಚಿಸಿದ್ದಾರೆ. ಭಕ್ತರ ಅಭ್ಯುದಯಕ್ಕಾಗಿ ಜೀವಿತವನ್ನೇ ಮುಡಿಪಾಗಿಟ್ಟಿದ್ದರು. ಕರ್ನಾಟಕ ಮಾತ್ರವಲ್ಲದೇ ಆಂಧ್ರಪ್ರದೇಶ, ತಮಿಳುನಾಡು ಸೇರಿ ನಾನಾ ಭಾಗಗಳಿಗೆ ಸಂಚರಿಸಿ ಅನೇಕ ಜನರಿಗೆ ಮಾರ್ಗದರ್ಶನ ನೀಡಿದ್ದಾಗಿ ಅವರು ಹೇಳಿದರು.

ಕೈವಾರ ತಾತಯ್ಯನವರ ಕಾಲಜ್ಞಾನದ ಮಹತ್ವ ಮತ್ತು ವ್ಯಾಪ್ತಿ ಬಹಳ ವಿಸ್ತಾರವಾದದ್ದು. ಅವರ ಚರಿತ್ರೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ.

ಶ್ರೀಯೋಗಿ ನಾರೇಯಣ ರಚಿಸಿರುವ ಕಾಲಜ್ಞಾನ ಸೂಕ್ತ ರೀತಿಯಲ್ಲಿ ಅಧ್ಯಯನ ನಡೆಸಿದರೆ ನಮಗೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ತಿರುಪತಿ ಎಸ್.ವಿ. ವಿಶ್ವವಿದ್ಯಾಲಯದ ತೆಲುಗು ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಆರ್. ರಾಜೇಶ್ವರಮ್ಮ, ಯುಎಸ್ಎ ಸಾಪ್ಟವೇರ್ ಎಂಜಿನಿಯರ್ ನಿರ್ದೇಶಕ ವೇಮುಲ ಲೆನಿನ್ ಬಾಬು, ಮುಕ್ತ ವಿವಿ ಡೀನ್ ಪ್ರೊ.ಎನ್. ಲಕ್ಷ್ಮೀ, ಪರೀಕ್ಷಾಂಗ ಕುಲಸಚಿವ ಪ್ರೊ.ಎಚ್. ವಿಶ್ವನಾಥ್, ಹಣಕಾಸು ಅಧಿಕಾರಿ ಎಚ್.ವಿ. ಶ್ವೇತಾ, ಅಧ್ಯಯನ ಕೇಂದ್ರ ಡೀನ್ ಪ್ರೊ.ಎಂ. ರಾಮನಾಥಂ ನಾಯುಡು ಇದ್ದರು.