ಗದಗ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಮತ್ತು ಅರಿವು ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಭಾಗವಹಿಸಿದ್ದರು.

ಗದಗ: ವಿದ್ಯಾರ್ಥಿನಿಯರು ತಮ್ಮ ಶಿಕ್ಷಣ ಪೂರ್ಣಗೊಳಿಸಿ, ಸ್ವಾವಲಂಬಿಗಳಾಗಬೇಕು. ತಮ್ಮ ಕಾಲ ಮೇಲೆ ತಾವು ನಿಲ್ಲುವ ವರೆಗೆ ಪ್ರೀತಿ, ಪ್ರಣಯ ಅಥವಾ ಮದುವೆಯಂತಹ ನಿರ್ಧಾರಗಳಿಗೆ ಮುಂದಾಗಬಾರದು. ಭವಿಷ್ಯ ಹಾಗೂ ಗುರಿ ಸಾಧನೆಗೆ ಆದ್ಯತೆ ನೀಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸರ್ಕಾರಿ ನೌಕರರ ಸಂಘ ಹಾಗೂ ಶಾಲಾ ಶಿಕ್ಷಣ (ಪಪೂ) ಇಲಾಖೆಗಳ ಸಹಯೋಗದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಮತ್ತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಯೋಸಹಜವಾಗಿ ಹಾರ್ಮೋನ್‌ಗಳ ಬದಲಾವಣೆಯಿಂದ ತಾತ್ಕಾಲಿಕ ಆಕರ್ಷಣೆ ಉಂಟಾಗುವುದು ಸಹಜ. ಆದರೆ ಈ ವಯಸ್ಸಿನಲ್ಲಿ ಪ್ರೀತಿಯ ಬಲೆಗೆ ಬಿದ್ದು, 18 ವರ್ಷ ತುಂಬುತ್ತಿದ್ದಂತೆ ಮನೆ ಬಿಟ್ಟು ಹೋಗುವಂತಹ ನಿರ್ಧಾರಗಳು ಇಡೀ ಜೀವನದ ಮೇಲೆ ದುಷ್ಪರಿಣಾಮ ಬೀರಬಹುದು. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣ ಮತ್ತು ಸ್ವಾವಲಂಬನೆಗೆ ಆದ್ಯತೆ ನೀಡಬೇಕು ಎಂದರು.

ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರೊಫೈಲ್‌ಗಳನ್ನು ಖಾಸಗಿಯಾಗಿ ಇಟ್ಟುಕೊಳ್ಳಬೇಕು. ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್‌ಗಳನ್ನು ಸ್ವೀಕರಿಸಬಾರದು. ಮೊಬೈಲ್ ಪರದೆಯ ಹಿಂದಿದ್ದುಕೊಂಡು ಹೆಣ್ಣುಮಕ್ಕಳನ್ನು ಬಲೆಗೆ ಬೀಳಿಸುವ ಜಾಲಗಳು ಹೆಚ್ಚಾಗುತ್ತಿವೆ. ಡೇಟಿಂಗ್ ಆ್ಯಪ್‌ಗಳು ಹಾಗೂ ನಕಲಿ ಪ್ರೀತಿಯ ಮಾತುಗಳಿಗೆ ಮರುಳಾಗಿ ಮಾನವ ಕಳ್ಳಸಾಗಣೆ, ದೈಹಿಕ ಶೋಷಣೆ ಸೇರಿದಂತೆ ಅಪಾಯಗಳಿಗೆ ಸಿಲುಕಬಾರದು ಎಂದು ಎಚ್ಚರಿಸಿದರು.

ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಪ್ರತಿದಿನ ಕನಿಷ್ಠ 4ರಿಂದ 6 ಗಂಟೆಗಳ ಕಾಲ ಓದಿನತ್ತ ಗಮನಹರಿಸಬೇಕು. ಶ್ರಮ, ಶಿಸ್ತು ಮತ್ತು ಗುರಿಯೊಂದಿಗೆ ಮುನ್ನಡೆದರೆ ಜೀವನದಲ್ಲಿ ಉನ್ನತ ಸಾಧನೆ ಮಾಡಬಹುದು. ಐಎಎಸ್, ಐಪಿಎಸ್, ನ್ಯಾಯಾಧೀಶರು, ವಕೀಲರು ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿದೆ ಎಂದು ಆತ್ಮವಿಶ್ವಾಸ ತುಂಬಿದರು.

ಹೆಣ್ಣುಮಕ್ಕಳ ರಕ್ಷಣೆ ಹಾಗೂ ಕೌಟುಂಬಿಕ ಸೌಹಾರ್ದತೆಗಾಗಿ ಶ್ರಮಿಸುತ್ತಿರುವ ಗದಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ರಾಜ್ಯ ಮಹಿಳಾ ಆಯೋಗ ಕಾರ್ಯದರ್ಶಿ ರೂಪಾ ಆರ್., ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಎಂ. ಗಂಗಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ನಂದಾ ಹಣ್ಣಬರಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ, ಡಿವೈಎಸ್ಪಿ ಮುರ್ತುಜಾ ಖಾದ್ರಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ ಎಸ್.ಎನ್. ಇದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರಾಧಾ ಮಣ್ಣೂರು ಸ್ವಾಗತಿಸಿದರು. ಎಸ್.ಎಸ್. ಗೌಡರ ಕಾರ್ಯಕ್ರಮ ನಿರೂಪಿಸಿದರು.