ಸಾರಾಂಶ
ಕನ್ನಡಪ್ರಭ ವಾರ್ತೆ ಸಂಡೂರು
ರಸಗೊಬ್ಬರ ಬೆಲೆ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಯೂತ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಎತ್ತಿನ ಬಂಡಿಗಳೊಂದಿಗೆ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಬಂದ ಮುಖಂಡರು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಯೂತ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಎನ್.ಕೆ.ಎಸ್, ರಸಗೊಬ್ಬರಗಳ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ರೈತರ ಮೇಲೆ ಗದಾಪ್ರಹಾರ ಮಾಡುತ್ತಿದೆ ಎಂದರು.ಹಿಂದಿನ ವರ್ಷ ಇಫ್ಕೊ ೧೫-೧೫-೧೫ ರಸಗೊಬ್ಬರದ ಬೆಲೆ ₹೧೨೫೦ ಇದ್ದದ್ದು ಈ ವರ್ಷ ₹೧೬೫೦ಕ್ಕೆ ಹೆಚ್ಚಳವಾಗಿದೆ. ₹೧೪೭೦ ಇದ್ದ ಆರ್‌ಸಿಎಫ್ ೧೫-೧೫-೧೫ ಈ ವರ್ಷ ₹೧೬೫೦ ಆಗಿದೆ. ಇಫ್ಕೊ ೧೦-೨೬-೨೬ ಹಿಂದಿನ ವರ್ಷ ₹೧೪೭೦ ಇದ್ದದ್ದು ಈ ವರ್ಷ ₹೧೭೨೫ಕ್ಕೆ ಏರಿಕೆಯಾಗಿದೆ. ₹೧೨೫೦ ಇದ್ದ ೨೦-೨೦-೦-೧೩ ಈ ವರ್ಷ ₹೧೩೦೦ಕ್ಕೆ ಹೆಚ್ಚಳವಾಗಿದೆ. ₹೧೪೭೦ ಇದ್ದ ೧೨-೩೨-೧೬ ಈ ವರ್ಷ₹ ೧೭೨೫ಕ್ಕೆ ಏರಿಕೆಯಾಗಿದೆ.
ಅದೇ ರೀತಿ ಯೂರಿಯಾ ಬೆಲೆ ಹಿಂದಿನ ವರ್ಷ ₹೨೬೬ ಇದ್ದದ್ದು ೨೮೦ಕ್ಕೆ ಹಾಗೂ ಎಂಒಪಿ (ಪೊಟ್ಯಾಶ್) ₹೧೫೫೦ರಿಂದ ₹ ೧೭೫೦ಕ್ಕೆ ಹೆಚ್ಚಳವಾಗಿದೆ ಎಂದು ಹೇಳಿದರು.ಕೇಂದ್ರದ ಬಿಜೆಪಿ ಸರ್ಕಾರ ಒಂದೆಡೆ ರೈತರಿಗೆ ಕಿಸಾನ್ ಸಮ್ಮಾನ್ ಎಂದು ವರ್ಷಕ್ಕೆ ₹೪ ಸಾವಿರ ನೀಡಿ, ಹಿಂಬಾಗಿಲಿನಿಂದ ಗೊಬ್ಬರ, ಔಷಧಿ, ಬಿತ್ತನೆ ಬೀಜಗಳ ಬೆಲೆ ಏರಿಕೆ ಮಾಡುವ ಮೂಲಕ ದುಪ್ಪಟ್ಟು ಹಣವನ್ನು ರೈತರಿಂದ ವಸೂಲು ಮಾಡುತ್ತಿದೆ. ರಸಗೊಬ್ಬರಗಳ ಅವೈಜ್ಞಾನಿಕ ಬೆಲೆ ಏರಿಕೆಯಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರ ರಸಗೊಬ್ಬರಗಳ ಬೆಲೆಯನ್ನು ಕಡಿಮೆ ಮಾಡದಿದ್ದಲ್ಲಿ ಯುವ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಕೇಂದ್ರ ಸರ್ಕಾರ ಹೆಚ್ಚಳ ಮಾಡಿರುವ ರಸಗೊಬ್ಬರಗಳ ಬೆಲೆ ಇಳಿಕೆ ಮಾಡುವಂತೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಆಶಾಲತಾ ಸೋಮಪ್ಪ ಮಾತನಾಡಿ, ರಾಸಾಯನಿಕ ಗೊಬ್ಬರ ಅಭಾವ ಉಂಟಾಗಿದೆ. ಇದರಿಂದ ಬೆಳೆಯ ಇಳುವರಿ ಕುಂಟಿತವಾಗುವ ಸಂಭವವಿದೆ. ಆದ್ದರಿಂದ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಿರುವ ರಸಗೊಬ್ಬರ ಸರಬರಾಜು ಮಾಡಬೇಕು ಮತ್ತು ಹೆಚ್ಚಳ ಮಾಡಿರುವ ರಸಗೊಬ್ಬರದ ಬೆಲೆ ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಘಟಕದ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಬ್ರೂಸ್ಲಿ, ಪುರಸಭೆ ಅಧ್ಯಕ್ಷ ಎಸ್. ಸಿರಾಜ್ ಹುಸೇನ್, ಸದಸ್ಯರಾದ ಕೆ.ವಿ. ಸುರೇಶ್, ಎಲ್.ಎಚ್. ಶಿವಕುಮಾರ್, ಹನುಮೇಶ್, ಬ್ರಹ್ಮಾನಂದ, ಟಿ. ಪರಶುರಾಮ, ರಾಘವೇಂದ್ರ, ಮುಖಂಡರಾದ ಕೆ. ಸತ್ಯಪ್ಪ, ಜೆಬಿಟಿ ಬಸವರಾಜ, ನಂದಿಹಳ್ಳಿ ಅಜಯ್, ರುದ್ರಗೌಡ, ಮಾದರ್‌ಬಾಷ, ನೂರ್ ಬಾಷ ಮುಂತಾದವರು ಉಪಸ್ಥಿತರಿದ್ದರು.