ಸಾರಾಂಶ
ದಾಖಲೆ ಪರಿಶೀಲನೆ ವೇಳೆ ಈ ಮಾರಾಟಗಾರರು ನಿಯಮಾವಳಿ ಮೀರಿ ಮಾರಾಟ, ದಾಸ್ತಾನು ಮಾಡಿ ಕೃತಕ ಗೊಬ್ಬರ ಅಭಾವ ಸೃಷ್ಟಿಸಿದ ಹಿನ್ನೆಲೆಗೆ ಪರವಾನಗಿ ರದ್ದುಪಡಿಸಲಾಗಿದೆ
ಕಾರಟಗಿ: ರಸಗೊಬ್ಬರ ಮಾರಾಟದ ನಿಯಮಾವಳಿ ಉಲ್ಲಂಘನೆ ಮಾಡಿದ ಪಟ್ಟಣದ ಮೂರು ರಸಗೊಬ್ಬರ ಮಾರಾಟಗಾರರ ಪರವಾನಗಿ ರದ್ದು ಮಾಡಿ ಕೃಷಿ ಇಲಾಖೆ ಆದೇಶ ಹೊರಡಿಸಿದೆ ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕಿ ಅಭಿಲಾಷಾ ಸಿ.ಆರ್. ತಿಳಿಸಿದ್ದಾರೆ.
ಪಟ್ಟಣದ ಮೇ. ಆಗ್ರೋಶ್ ಸರ್ವಿಸ್ ಪ್ರೈ.ಲಿ., ಮೇ.ಶ್ರೀವೆಂಕಟೇಶ್ವರ ಆಗ್ರೋ ಏಜೆನ್ಸಿ ಮತ್ತು ಮೇ.ಶ್ರೀ ಲಕ್ಷ್ಮೀದೇವಿ ಟ್ರೇಡರ್ಸ್ ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ.ತಹಸೀಲ್ದಾರ ಎಂ.ಕುಮಾರಸ್ವಾಮಿ ನೇತೃತ್ವದಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ತಂಡ ರಸಗೊಬ್ಬರ ಅಂಗಡಿಗಳ ಮೇಲೆ ದಾಳಿ ಮಾಡಿ ರಸಗೊಬ್ಬರ ಅಕ್ರಮ ದಾಸ್ತಾನು, ನಿಯಮಾವಳಿ ಮೀರಿ ಮಾರಾಟ ಮಾಡಿದ ಕುರಿತು ದೂರು ಬಂದ ಹಿನ್ನೆಲೆಗೆ ದಾಖಲೆ ಪರಿಶೀಲನೆ ವೇಳೆ ಈ ಮಾರಾಟಗಾರರು ನಿಯಮಾವಳಿ ಮೀರಿ ಮಾರಾಟ, ದಾಸ್ತಾನು ಮಾಡಿ ಕೃತಕ ಗೊಬ್ಬರ ಅಭಾವ ಸೃಷ್ಟಿಸಿದ ಹಿನ್ನೆಲೆಗೆ ಪರವಾನಗಿ ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ತಪಾಸಣೆ ವೇಳೆ ಗೊಬ್ಬರ ದಾಸ್ತಾನು ಮತ್ತು ವಿತರಣೆ ಮಾಡುವಲ್ಲಿ ರಸಗೊಬ್ಬರ ನಿಯಮಾವಳಿ ಉಲ್ಲಂಘಿಸಿರುವುದು ಅಲ್ಲದೇ ಸ್ಥಳ ಮತ್ತು ದಾಸ್ತಾನು ಮಳಿಗೆ ಬದಲಾವಣೆ ಮಾಡಿದ್ದರೂ ಸಹ ನಿಗದಿತ ಶುಲ್ಕ ತುಂಬಿ ನೋಂದಣಿ ದೃಢೀಕರಣ ಪತ್ರದಲ್ಲಿ ತಿದ್ದುಪಡಿ ಮಾಡಿಸಿರುವುದಿಲ್ಲ ಹಾಗೂ ರಸಗೊಬ್ಬರ ಮಾರಾಟ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಮಾರಾಟ ಮಾಡುತ್ತಾ ಮತ್ತು ಪ್ರತಿಯೊಂದು ಸ್ಥಳಕ್ಕೂ ಪ್ರತ್ಯೇಕ ಅರ್ಜಿ ಸಲ್ಲಿಸಿ ಪ್ರತ್ಯೇಕ (ಪರವಾನಗಿ ) ಲೈಸೆನ್ಸ್ ಪಡೆದಿರುವುದು ತನಿಖೆ ವೇಳೆ ಪತ್ತೆಯಾಗಿದೆ.ಈ ನಿಟ್ಟಿನಲ್ಲಿ ನಿಯಮಾವಳಿಗಳ ಉಲ್ಲಂಘನೆ ಕಾಯ್ದೆಯಡಿ ಈ ಮೂರು ಅಂಗಡಿಗಳ ಪರವಾನಗಿ ರದ್ದು ಪಡಿಸಿ ಆದೇಶ ಹೊರಡಿಸಲಾಗಿದೆ.
ರೈತರು ಕೂಡ ಹೆಚ್ಚಿನ ಬೆಲೆ ನೀಡಿ ರಸಗೊಬ್ಬರ ಖರೀದಿಸಬಾರದು. ಅಂತಹ ಘಟನೆ ಕಂಡು ಬಂದಲ್ಲಿ ಕೂಡಲೆ ಕೃಷಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು ಅಲ್ಲದೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಕೂಡಲೆ ಅಂತಹ ಅಂಗಡಿಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ತಿಳಿಸಿದರು.