ಸಾರಾಂಶ
ಹುಬ್ಬಳ್ಳಿ ಮಾರುಕಟ್ಟೆಗಳಲ್ಲಿ ತರಹೇವಾರಿ ಆಕಾಶ ಬುಟ್ಟಿ, ಪ್ಲಾಸ್ಟಿಕ್, ಮಣ್ಣಿನ ಹಣತೆಗಳು ಮಾರುಕಟ್ಟೆಯಲ್ಲಿ ಆಕರ್ಷಿಸುತ್ತಿವೆ. ಹೊಸ ಮಾದರಿಗಳ ಬಟ್ಟೆಗಳ ಖರೀದಿಗೆ ಮಂಗಳವಾರವೂ ಜನ ಮುಗಿಬಿದ್ದಿರುವ ದೃಶ್ಯ ಕಂಡು ಬಂದಿತು.
ಹುಬ್ಬಳ್ಳಿ:
ಅತಿವೃಷ್ಟಿ, ಬೆಲೆ ಏರಿಕೆಯ ನಡುವೆಯೂ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲೆಯ ಜನತೆ ಬೆಳಕಿನ ಹಬ್ಬ ದೀಪಾವಳಿಯನ್ನು ಮಂಗಳವಾರ ಸಡಗರ- ಸಂಭ್ರಮದಿಂದ ಆಚರಿಸಿದರು.ನಗರದ ವಿವಿಧ ದೇವಸ್ಥಾನಗಳಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ವಿಶೇಷ ಪೂಜೆ-ಪುನಸ್ಕಾರ ನಡೆದರೆ, ಮನೆಗಳಲ್ಲಿ ಸಂಭ್ರಮ, ಸಂತಸ ಮನೆ ಮಾಡಿತ್ತು. ಪ್ರತಿ ಮನೆ ಎದುರಿಗೆ ವಾಹನ ತೊಳೆದು ಅಮಾವಾಸ್ಯೆ ಪೂಜೆ ಮಾಡಲಾಯಿತು. ಮನೆ, ಬಟ್ಟೆ, ಪೂಜಾ ವಸ್ತುಗಳ ಹಾಗೂ ಇನ್ನಿತರ ಕೆಲವು ಮಳಿಗೆಗಳಲ್ಲಿ ಹಬ್ಬದ ಪೂಜೆ ಮಂಗಳವಾರ ಸಂಜೆಯೇ ನಡೆಯಿತು.
ಮಾರುಕಟ್ಟೆಗಳಲ್ಲಿ ತರಹೇವಾರಿ ಆಕಾಶ ಬುಟ್ಟಿ, ಪ್ಲಾಸ್ಟಿಕ್, ಮಣ್ಣಿನ ಹಣತೆಗಳು ಮಾರುಕಟ್ಟೆಯಲ್ಲಿ ಆಕರ್ಷಿಸುತ್ತಿವೆ. ಹೊಸ ಮಾದರಿಗಳ ಬಟ್ಟೆಗಳ ಖರೀದಿಗೆ ಮಂಗಳವಾರವೂ ಜನ ಮುಗಿಬಿದ್ದಿರುವ ದೃಶ್ಯ ಕಂಡು ಬಂದಿತು. ಚಿಕ್ಕಮಕ್ಕಳು ಪಾಲಕರ, ಪೋಷಕರ ದುಂಬಾಲು ಬಿದ್ದು ಖರೀದಿಸಿದ ಪಟಾಕಿಗಳನ್ನು ಮನೆ, ಅಂಗಡಿಗಳ ಮುಂದೆ ಹಚ್ಚಿ ಸಂಭ್ರಮಿಸಿದರು. ಜತೆಗೆ ಬಗೆಬಗೆಯ ಹಣತೆ ಹಚ್ಚಿಟ್ಟು ಸಂಭ್ರಮಿಸಿದರು. ಮನೆ, ಅಂಗಡಿಗಳಿಗೆ ಎಲ್ಲೆಲ್ಲೂ ವಿದ್ಯುತ್ ದೀಪಗಳ ಅಲಂಕಾರ ಮಾಡಿದ್ದು ಕಂಡುಬಂದಿತು. ನಗರದಲ್ಲಿರುವ ಎಲ್ಲ ದ್ವಿಚಕ್ರ, ಕಾರ್ ಶೋರೂಂಗಳಲ್ಲಿ ಹಲವು ಗ್ರಾಹಕರು ಹೊಸ ವಾಹನ ಖರೀದಿಸಿ ಮನೆಗೆ ಒಯ್ದರು. ಜತೆಗೆ ಮನೆಯಲ್ಲೂ ನೂತನ ಅತಿಥಿ(ವಾಹನ)ಗೆ ವಿಶೇಷ ಪೂಜೆ ಮಾಡಿ ಮನೆಗೆ ಬರಮಾಡಿಕೊಂಡರು.ಬೆಳಗ್ಗೆ 5ಕ್ಕೆ ಖರೀದಿ ಆರಂಭ:
ಮಂಗಳವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ನಗರದ ಮಾರುಕಟ್ಟೆ, ಪ್ರಮುಖ ವೃತ್ತಗಳಲ್ಲಿ ಇರಿಸಲಾಗಿದ್ದ ಕಬ್ಬು, ಬಾಳೆ ದಿಂಡು, ಚಂಡು ಹೂ, ಬೂದ ಕುಂಬಳಕಾಯಿ ಸೇರಿದಂತೆ ಪೂಜಾ ಸಾಮಗ್ರಿ ಖರೀದಿಸಿದರು. ಗೃಹ ಉಪಯೋಗಿ ವಸ್ತುಗಳ ವ್ಯಾಪಾರದ ಭರಾಟೆ ನಡೆಯಿತು. ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ಹೊಸ ಬಟ್ಟೆಗಳ ಧರಿಸಿ ಸಂಭ್ರಮದಿಂದ ಹಬ್ಬ ಆಚರಿಸಿದರು.ರೈತರ ಹುಮ್ಮಸ್ಸು ಕಸಿದ ಅತಿವೃಷ್ಟಿ:
ದೀಪಾವಳಿ ಹಬ್ಬವನ್ನು ಗ್ರಾಮೀಣ ಭಾಗಗಳಲ್ಲೂ ಅತೀ ವಿಜೃಂಬಣೆಯಿಂದ ಆಚರಿಸಲಾಗುತ್ತದೆ. ಆದರೆ, ಈ ಬಾರಿ ಅತಿವೃಷ್ಟಿಯಿಂದಾಗಿ ಹೆಸರು, ಉದ್ದು, ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆಗಳು ಹಾಳಾಗಿ ಹೋಗಿದ್ದು, ರೈತರಿಗೆ ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಇಂತಹ ಸಂಕಷ್ಟದ ವೇಳೆಯಲ್ಲೂ ರೈತಾಪಿ ವರ್ಗವು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಬರಮಾಡಿಕೊಂಡರು. ಇನ್ನು ಮುಂದಾದರೂ ಅಗತ್ಯಕ್ಕೆ ತಕ್ಕಂತೆ ಮಳೆಯಾಗಿ ಉತ್ತಮ ಫಸಲು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಮಾರುಕಟ್ಟೆ ರಷ್, ರಸ್ತೆ ಖಾಲಿ:
ದೀಪಾವಳಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರುಕಟ್ಟೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಜನರಿಂದ ಫುಲ್ ರಷ್ ಆಗಿದ್ದರೆ ಇನ್ನುಳಿದ ಮುಖ್ಯ ರಸ್ತೆಗಳಲ್ಲಿ ವಾಹನಗಳ ಸಂಚಾರ ತೀರಾ ವಿರಳವಾಗಿತ್ತು. ಬೆಳಗ್ಗೆ ಮತ್ತು ಸಂಜೆ ವೇಳೆಗೆ ಕೊಂಚ ವಾಹನ ಸಂಚಾರ ದಟ್ಟಣೆ ಕಂಡುಬಂದಿತು. ಮಧ್ಯಾಹ್ನದ ವೇಳೆಯಲ್ಲಂತೂ ಮುಖ್ಯರಸ್ತೆಗಳಲ್ಲಿ ವಾಹನಗಳ ಸಂಚಾರವಿಲ್ಲದೇ ಬಿಕೋ ಎನ್ನುತ್ತಿತ್ತು.ವ್ಯಾಪಾರಕ್ಕೆ ವರುಣನ ಅಡ್ಡಿ:
ಮಧ್ಯಾಹ್ನದ ವೇಳೆ ದಿಢೀರ್ ಆಗಮಿಸಿದ ಮಳೆಯಿಂದಾಗಿ ಇಲ್ಲಿನ ಜನತಾ ಬಜಾರ್, ಸರ್ವೋದಯ ವೃತ್ತ, ದೇಶಪಾಂಡೆ ರಸ್ತೆ, ದಾಜಿಬಾನ್ ಪೇಟೆ, ಶಾಹ ಬಜಾರ್ ಸೇರಿದಂತೆ ಹಲವೆಡೆ ವ್ಯಾಪಾರಿಗಳಿಗೆ ತೀವ್ರ ತೊಂದರೆಯನ್ನುಂಟು ಮಾಡಿತು. ಮಳೆಯ ಯಾವುದೇ ಮುನ್ಸೂಚನೆಯಿಲ್ಲದೇ ಎಂದಿನಂತೆ ವ್ಯಾಪಾರ ಮಾಡುತ್ತಿದ್ದ ವೇಳೆ ಒಮ್ಮಿಂದೊಮ್ಮೆಲೆ ಆಗಮಿಸಿದ ಮಳೆಯಿಂದಾಗಿ ವ್ಯಾಪಾರಿಗಳು ಮಾರಾಟಕ್ಕಿರಿಸಿದ ವಸ್ತುಗಳ ರಕ್ಷಣೆಗೆ ಹರಸಾಹಸಪಟ್ಟರು. ಇನ್ನು ಗ್ರಾಹಕರು ಮಳೆಯಿಂದ ತಪ್ಪಿಸಿಕೊಳ್ಳಲು ಮಾರುಕಟ್ಟೆಯ ಅಕ್ಕಪಕ್ಕದಲ್ಲಿರುವ ಮಳಿಗೆ, ಅಂಗಡಿಗಳ ಮೊರೆಹೋದರು. ಅಲ್ಪ ಪ್ರಮಾಣದಲ್ಲಿ ಸುರಿದ ಮಳೆಯು ಕೆಲಕಾಲ ವ್ಯಾಪಾರಿಗಳು ಹಾಗೂ ಗ್ರಾಹಕರಲ್ಲಿ ಆತಂಕವನ್ನುಂಟು ಮಾಡಿತು.