ಸಾರಾಂಶ
ಬಸವರಾಜ ನಂದಿಹಾಳ.ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಜನರು ಭರದ ಸಿದ್ದತೆ ನಡೆಸಿದ್ದಾರೆ. ಜನರು ಹೊಸ ಹೊಸ ಬಟ್ಟೆಗಳು, ವಾಹನಗಳು ಸೇರಿದಂತೆ ಅಗತ್ಯ ವಸ್ತುಗಳು ಖರೀದಿಯಲ್ಲಿ ತೊಡಗಿದ್ದು, ಇದರಿಂದ ಮಾರುಕಟ್ಟೆಗಳು ಹಾಗೂ ಅಂಗಡಿಗಳು ಜನರಿಂದ ತುಂಗಿ ತುಳುಕುತ್ತಿವೆ.
ದೀಪಾವಳಿ ಹಬ್ಬಕ್ಕೆ ಬೇಕಾದ ಪೂಜಾ ಸಾಮಗ್ರಿಗಳು, ಆಕಾಶ ಬುಟ್ಟಿ, ಹೊಸ ಬಟ್ಟೆ ಸೇರಿದಂತೆ ಇನ್ನೀತರ ವಸ್ತುಗಳನ್ನು ಖರೀದಿಸುವಲ್ಲಿ ಜನರು ಬ್ಯುಸಿಯಾಗಿದ್ದಾರೆ.ನೀರು ತುಂಬುವ ಹಬ್ಬದಿಂದ ಆರಂಭವಾಗುವ ದೀಪಾವಳಿ ಐದು ದಿನಗಳ ಕಾಲ ನಡೆಯಲಿದೆ. ಗುರುವಾರ ನರಕ ಚತುದರ್ಶಿ ಮೂಹರ್ತ ಇರುವದರಿಂದಾಗಿ ಬೆಳಗ್ಗೆ ಬೇಗನೆ ಎದ್ದು ಮಕ್ಕಳು, ಪುರುಷರು ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ ಹೆಣ್ಣುಮಕ್ಕಳಿಂದ ಆರತಿ ಮಾಡಿಸಿಕೊಳ್ಳುತ್ತಾರೆ. ಈ ಸಲ ದೀಪಾವಳಿ ಅಮವಾಸ್ಯೆ ಗುರುವಾರ ಮಧ್ಯಾಗ್ನವೇ ಆರಂಭವಾಗಿ ಶುಕ್ರವಾರ ಸಂಜೆಯವರೆಗೂ ಇರಲಿದೆ. ಇದರಿಂದಾಗಿ ಎರಡು ದಿನ ಕಾಲ ದೀಪಾವಳಿ ಅಮವಾಸ್ಯೆ ಆಚರಿಸುವ ಸಾಧ್ಯತೆಯಿದೆ. ಪಟ್ಟಣದಲ್ಲಿ ಗುರು-ಹಿರಿಯರು ಗುರುವಾರ ನರಕ ಚತುದರ್ಶಿ, ಶುಕ್ರವಾರ ಅಮವಾಸ್ಯೆ ಆಚರಿಸುವದು ಎಂದು ನಿರ್ಣಯಿಸಿದ್ದಾರೆ. ಇದರಂತೆ ಪಟ್ಟಣದಲ್ಲಿ ಶುಕ್ರವಾರ ದೀಪಾವಳಿ ಅಮವಾಸ್ಯೆ ಆಚರಿಸಲಾಗುತ್ತದೆ. ಶನಿವಾರ ಬಲಿಪಾಡ್ಯಮಿ ಅಚರಿಸಲಾಗುತ್ತದೆ.ದೀಪಾವಳಿ ಹಬ್ಬದ ಲಕ್ಷ್ಮೀ ಪೂಜೆಗೆ ವಿಶೇಷವಾಗಿ ಚಂಡು ಹೂ ಸೇರಿದಂತೆ ವಿವಿಧ ತರಹದ ಹೂಗಳು, ಹಣ್ಣುಗಳು ಮಾರುಕಟ್ಟೆಗೆ ಬಂದಿದ್ದು, ಬೆಲೆ ಏರಿಕೆಯನ್ನು ಲೆಕ್ಕಿಸದೇ ಜನರು ಖರೀದಿಯಲ್ಲಿ ತೊಡಗಿದ್ದಾರೆ. ತರಹೇವಾರಿ ಆಕಾಶಬುಟ್ಟಿಗಳು, ಲೈಟಿಂಗ್‌ಗಳು ಜನರನ್ನು ಆಕರ್ಷಿಸುತ್ತಿವೆ.
ನೀರು ತುಂಬುವ ಹಬ್ಬದ ದಿನದಿಂದಲೇ ತಮ್ಮ ತಮ್ಮ ಮನೆ, ಅಂಗಡಿಗಳ ಮುಂದೆ ಆಕಾಶ ಬುಟ್ಟಿ ಹಾಕುವ ಜೊತೆಗೆ ದೀಪಗಳನ್ನು ಇಟ್ಟು ದೀಪಾವಳಿ ಆಚರಿಸಲಾಗುತ್ತದೆ.