ಹಬ್ಬಗಳು ತ್ಯಾಗ, ಭ್ರಾತೃತ್ವದ ಸಂಕೇತ: ಡಾ. ವಿನ್ಸೆಂಟ್ ಆಳ್ವಾ

| Published : Jun 23 2024, 02:06 AM IST

ಸಾರಾಂಶ

ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ವತಿಯಿಂದ ಈದ್ ಸೌಹಾರ್ದ ಕೂಟ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಉಡುಪಿ

ಹಬ್ಬಗಳು ಸಮಾಜದಲ್ಲಿ ಸಂತೋಷವನ್ನು ಹಂಚುತ್ತದೆ. ಕೇವಲ ಮನೆಯವರೇ ಆಚರಿಸಿದರೆ ಅದು ಹಬ್ಬ ಅನಿಸುವುದಿಲ್ಲ, ಇತರರೊಂದಿಗೆ ಸೇರಿ ಆಚರಿಸಿದರೆ ಅವರ ಮುಖದಲ್ಲಿ ಸಂತೋಷ ಅರಳಿದರೆ ಮಾತ್ರ ಅದು ನಿಜವಾದ ಹಬ್ಬ ಎನಿಸುತ್ತದೆ. ಹಬ್ಬಗಳು ತ್ಯಾಗ ಮತ್ತು ಭ್ರಾತೃತ್ವದ ಸಂಕೇತವಾಗಿದೆ ಎಂದು ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವಾ ಹೇಳಿದರು.

ಅವರು ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ವತಿಯಿಂದ ಹಮ್ಮಿಕೊಂಡ ಈದ್ ಸೌಹಾರ್ದ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ಮಾತ‌ನಾಡಿ ಕರಾವಳಿಯಲ್ಲಿ ಮುಸ್ಲಿಮರ ಕೊಡಗೆ ಬಹಳಷ್ಟು ಇವೆ.‌ ಹಿಂದು ಮುಸ್ಲಿಮ್ ಕ್ರೈಸ್ತರು ಎಲ್ಲರೂ ಸೌಹಾರ್ದತೆಯಿಂದ ಬದುಕು ಕಾಣಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞಿ ಜನಾಂಗೀಯತೆ ಎಂಬುದು ಇರಬಾರದು, ನಾನು ಶ್ರೇಷ್ಠ ನೀನು ಕನಿಷ್ಠ ಎಂಬ ಭಾವನ ಯಾವಾಗ ನಮ್ಮಲ್ಲಿ ಮೂಡುತ್ತದೆಯೋ ಆಗ ಜನಾಂಗಗೀಯತೆ ಬೆಳೆಯುತ್ತದೆ. ಆದರ ಬದಲಾಗಿ ನಾವೆಲ್ಲರೂ ಸಮಾನರು ಎಂದು ಭಾವಿಸಿದರೆ ಸಹೋದರತೆ ಬೆಳೆಯುತ್ತದೆ ಎಂದು ಹೇಳಿದರು.

ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷರಾದ ನಿಸಾರ್ ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ವಿಭಾಗದ ಸಂಚಾಲಕಿ ವಾಜಿದಾ ತಬಸ್ಸುಮ್ ವಂದಿಸಿದರು. ಸರ್ಫರಾಜ್ ಮನ್ನ ಕಾರ್ಯಕ್ರಮ ನಿರೂಪಿಸಿದರು.