ಒಗ್ಗಟ್ಟಿನಿಂದ ಹಬ್ಬ ಆಚರಿಸಿದಲ್ಲಿ ಸಹಬಾಳ್ವೆ: ಮಧು

| Published : Oct 17 2023, 12:45 AM IST

ಸಾರಾಂಶ

ಸೊರಬ ಪಟ್ಟಣದಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಸೊರಬ

ನಾಡಹಬ್ಬ ದಸರಾ ಉತ್ಸವವನ್ನು ಎಲ್ಲ ಜಾತಿ ಜನಾಂಗದವರು ಪಕ್ಷಾತೀತವಾಗಿ ಒಗ್ಗೂಡಿ, ಆಚರಿಸುತ್ತಿರುವುದು ಪ್ರಶಂಸನೀಯ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಶ್ರೀ ರಂಗನಾಥ ದೇವಸ್ಥಾನ ಆವರಣದಲ್ಲಿ ದಸರಾ ಉತ್ಸವ ಸಮಿತಿ, ತಾಲೂಕು ಆಡಳಿತ, ಪುರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಸಾರ್ವಜನಿಕ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಬರಗಾಲವಿದ್ದು, ಸರಳವಾಗಿ ದಸರಾ ಉತ್ಸವ ಆಚರಿಸುವ ಕುರಿತು ಸಲಹೆ ನೀಡಲಾಗಿತ್ತು. ಆದರೆ, ಸಾರ್ವಜನಿಕರು ಒಗ್ಗೂಡಿ ದಸರಾ ಉತ್ಸವ ಆಚರಿಸುತ್ತಿರುವುದರಿಂದ ಸಹಕಾರ ನೀಡುತ್ತೇನೆ. ಹಬ್ಬ ಹರಿದಿನಗಳು ಭಕ್ತಿ ವಾತಾವರಣ ಸೃಷ್ಠಿಸುತ್ತದೆ. ಇಂದಿನ ದಿನಗಳಲ್ಲಿ ಎಲ್ಲ ಹಬ್ಬಗಳನ್ನು ಎಲ್ಲ ಸಮಾಜದವರು ಒಗ್ಗೂಡಿ ಆಚರಿಸಬೇಕು. ಇದರಿಂದ ಆರೋಗ್ಯಕರ ಸಮಾಜ ನಿರ್ಮಾಣ ಆಗುತ್ತದೆ ಮತ್ತು ಸಹಬಾಳ್ವೆ ಬದುಕು ಕಂಡುಕೊಳ್ಳಬಹುದು ಎಂದರು.

ಸಾನ್ನಿಧ್ಯ ವಹಿಸಿದ್ದ ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ ಮಾತನಾಡಿ, ನವರಾತ್ರಿ ಹಬ್ಬದ ಸಮಯದಲ್ಲಿ ನವದುರ್ಗೆಯರನ್ನು ಪೂಜಿಸುವುದು ಭಾರತೀಯ ಪರಂಪರೆಯಲ್ಲಿ ಮಹತ್ವವನ್ನು ಪಡೆದಿದೆ. ಮನುಷ್ಯನ ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನವನ್ನು ತುಂಬಲು ಹಬ್ಬಗಳು ಪೂರಕವಾಗಿವೆ ಎಂದರು. ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪರಶುರಾಮ ಸಣ್ಣಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ದೇವಿಯ ಮೂರ್ತಿ ನಿರ್ಮಿಸಿದ ಕಲಾವಿದ ಕೆ.ಎನ್. ರಾಘವೇಂದ್ರ, ದಸರಾ ಉತ್ಸವ ಸಮಿತಿ ನಿಕಟಪೂರ್ವ ಅಧ್ಯಕ್ಷ ಎನ್.ಷಣ್ಮುಖಾಚಾರ್, ಗುತ್ತಿಗೆದಾರ ಪಾಂಡುರಂಗ ಅವರನ್ನು ಸನ್ಮಾನಿಸಲಾಯಿತು.

ದಸರಾ ಉತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ, ಅಧ್ಯಕ್ಷತೆ ವಹಿಸಿದ್ದರು. ದಸರಾ ಉತ್ಸವ ಮಹಿಳಾ ಸಮಿತಿ ಅಧ್ಯಕ್ಷೆ ಸುಜಾತಾ ಜೋತಾಡಿ, ಪುರಸಭೆ ಸದಸ್ಯರಾದ ಈರೇಶ ಮೇಸ್ತ್ರಿ, ಎಂ.ಡಿ. ಉಮೇಶ್, ಮಧುರಾಯ್ ಜಿ. ಶೇಟ್, ಯು.ನಟರಾಜ್, ಪ್ರಭು ಮೇಸ್ತ್ರಿ, ಪುರಸಭೆ ಮುಖ್ಯಾಧಿಕಾರಿ ಟಿ.ಬಾಲಚಂದ್ರ, ಜಿಪಂ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಯುವ ಘಟಕದ ಅಧ್ಯಕ್ಷ ಪ್ರವೀಣ್ ಶಾಂತಗೇರಿ, ಸುರೇಶ್ ಭಂಡಾರಿ, ಜಿ.ಕೆರಿಯಪ್ಪ, ಎಸ್.ರಾಘವೇಂದ್ರ, ಬಸವರಾಜ ಗುರ್ಕಿ, ಮಾಲತೇಶ್ ಮಾಸ್ತರ್, ದಸರಾ ಉತ್ಸವ ಸಮಿತಿ ವಿವಿಧ ಘಟಕಗಳ ಪದಾಧಿಕಾರಿಗಳು, ಇತರರು ಇದ್ದರು.

- - - -16ಕೆಪಿಸೊರಬ02:

ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನ ಆವರಣದಲ್ಲಿ ಸಾರ್ವಜನಿಕ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.