ಕತ್ತಲೆಕಾಡುವಿನ ಶ್ರೀ ವಿನಾಯಕ ಸೇವಾ ಟ್ರಸ್ಟ್‌ ವತಿಯಿಂದ ಸಂಕ್ರಾಂತಿ ದೀಪಾರಾಧನೆ ಕಾರ್‍ಯಕ್ರಮ ಸಂಭ್ರಮದಿಂದ ಜರುಗಿತು.

ಮಡಿಕೇರಿ: ಕತ್ತಲೆಕಾಡುವಿನ ಶ್ರೀ ವಿನಾಯಕ ಸೇವಾ ಟ್ರಸ್ಟ್‌ ವತಿಯಿಂದ ಸಂಕ್ರಾಂತಿ ದೀಪಾರಾಧನೆ ಕಾರ್‍ಯಕ್ರಮ ಸಂಭ್ರಮದಿಂದ ಜರುಗಿತು.ಟ್ರಸ್ಟ್‌ ಆವರಣದಲ್ಲಿ ಗುರುವಾರ ಸಂಜೆ ನಡೆದ ಕಾರ್‍ಯಕ್ರಮದಲ್ಲಿ ಮಹಿಳೆಯರು ಸಾಲು ಹಣತೆ ಬೆಳಗಿದರು. ಟ್ರಸ್ಟ್‌ನ ಭಜನಾ ತಂಡದ ಸದಸ್ಯರು ಭಜನೆ ಮೂಲಕ ಮೆರುಗು ನೀಡಿದರು. ಸಾರ್ವಜನಿಕರು ಹಾಗೂ ದಾನಿಗಳ ಸಹಕಾರದಿಂದ ನೂತನವಾಗಿ ಖರೀದಿಸಲಾದ ಧ್ವನಿವರ್ಧಕವನ್ನು ಕಲಾವಿದ ಸುಭಾಷ್‌ ಲೋಕಾರ್ಪಣೆಗೊಳಿಸಿದರು.

ಈ ವೇಳೆ ಮಾತನಾಡಿದ ಟ್ರಸ್ಟ್‌ ಅಧ್ಯಕ್ಷ ಹೊನ್ನಪ್ಪ ಆಚಾರ್ಯ, ಭಜನೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 53 ಸಾವಿರ ರು. ವೆಚ್ಚದಲ್ಲಿ ಧ್ವನಿವರ್ಧಕ ಖರೀದಿಸಲಾಗಿದೆ. ಇದಕ್ಕೆ ಗ್ರಾಮದ ಸಾರ್ವಜನಿಕರು, ದಾನಿಗಳು ನೆರವಾಗಿದ್ದಾರೆ ಎಂದರು.

ಹಿಂದೂ ಎಲ್ಲ ಹಬ್ಬ ಹರಿದಿನಗಳನ್ನು ಟ್ರಸ್ಟ್‌ ವತಿಯಿಂದ ಸಾರ್ವಜನಿಕವಾಗಿ ಆಚರಿಸಿ ನಮ್ಮ ಸಂಸ್ಕೃತಿ, ಆಚರಣೆಗಳನ್ನು ಈಗಿನ ತಲೆಮಾರಿಗೆ ಪರಿಚಯಿಸುವ ಕಾರ್‍ಯವೂ ಆಗುತ್ತಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ತಂಡದ ಕುಮಾರ್‌ ಮಾತನಾಡಿ, ವಿನಾಯಕ ಸೇವಾ ಟ್ರಸ್ಟ್‌ ಭಜನೆ ಮೂಲಕ ಎಲ್ಲರನ್ನೂ ಒಂದುಗೂಡಿಸುವ ಕಾರ್‍ಯ ಮಾಡುತ್ತಿದೆ. ನೂತನವಾಗಿ ಖರೀದಿಸಿರುವ ಧ್ವನಿವರ್ಧಕದ ಮೂಲಕ ಊರಿನ ಧ್ವನಿ ಎಲ್ಲೆಡೆ ಹರಡಲಿ ಎಂದು ಆಶಿಸಿದರು.

ಸುಭಾಷ್‌ ಹಾಗೂ ಸಂಗಡಿಗರು ಭಕ್ತಿಗೀತೆಗಳನ್ನು ಹಾಡಿದರು. ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಸುರೇಶ್‌ ಮಾವಟ್ಕರ್‌, ಟ್ರಸ್ಟ್‌ ಕಾರ್‍ಯದರ್ಶಿ ಬ್ರಿಜೇಶ್‌ ರೈ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಜನಾರ್ಧನ್‌, ವಿದ್ಯಾರ್ಥಿ ಘಟಕದ ಕಿರಣ್‌, ಶ್ರಾವ್ಯಾ ಮತ್ತಿತರರಿದ್ದರು.