ಭ್ರೂಣಲಿಂಗ ಪತ್ತೆ ಪ್ರಕರಣ: ಡಾ.ಶಶಿ ಅಮಾನತು

| Published : Sep 02 2025, 01:00 AM IST

ಭ್ರೂಣಲಿಂಗ ಪತ್ತೆ ಪ್ರಕರಣ: ಡಾ.ಶಶಿ ಅಮಾನತು
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಭ್ರೂಣ ಲಿಂಗ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಜಿಲ್ಲಾಸ್ಪತ್ರೆ ರೇಡಿಯಾಲಜಿಸ್ಟ್ ಡಾ.ಶಶಿ ಎಸ್.ಎಲ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ರಾಮನಗರ: ಭ್ರೂಣ ಲಿಂಗ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಜಿಲ್ಲಾಸ್ಪತ್ರೆ ರೇಡಿಯಾಲಜಿಸ್ಟ್ ಡಾ.ಶಶಿ ಎಸ್.ಎಲ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಶಿಸ್ತು ಪ್ರಾಧಿಕಾರ ಹಾಗೂ ಆಯುಕ್ತರಾದ ಕೆ.ಬಿ.ಶಿವಕುಮಾರ್ ರವರು ಬೆಂಗಳೂರು ದಕ್ಷಿಣ ಜಿಲ್ಲಾಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ರೇಡಿಯಾಲಜಿಸ್ಟ್ ಡಾ.ಶಶಿ ಎಸ್.ಎಲ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದ ಭ್ರೂಣ ಹತ್ಯೆ ಪ್ರಕರಣದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ, ಕಳೆದ ಆಗಸ್ಟ್ 25 ರಂದು ಜಿಲ್ಲಾಸ್ಪತ್ರೆಯಲ್ಲಿನ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಿಷಿನ್ ಅನ್ನು ಸೀಜ್ ಕೂಡ ಮಾಡಿ, ತನಿಖೆ ಮುಂದುವರೆಸಲಾಗಿತ್ತು. ಲಿಂಗ ಪತ್ತೆ ಮೂಲಕ ಹೆಣ್ಣು ಮಗು ಎಂದು ಖಚಿತ ಪಡೆಸಿಕೊಂಡಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗಿದೆ.

ಕೈ ಮೇಲೆ ಸೀಕ್ರೇಟ್ ಕೋಡ್ :

ದಂಪತಿಗಳು ಮಧ್ಯವರ್ತಿಗಳಿಗೆ ಭ್ರೂಣ ಲಿಂಗ ಪತ್ತೆ ಮಾಡಲು 19 ಸಾವಿರ ಹಣ ನೀಡಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ರಾಜ್ಯ ಹಾಗೂ ಜಿಲ್ಲಾ ಸಕ್ಷಮ ಪ್ರಾಧಿಕಾರದ ತನಿಖಾಧಿಕಾರಿಗಳ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಹೊರಹಾಕಿರುವ ದಂಪತಿಗಳು, ನಾನು 4 ರಿಂದ 5 ತಿಂಗಳ ಗರ್ಬಿಣಿಯಾಗಿದ್ದು, ಈಗಾಗಲೇ ತಮಗೆ ಎರಡು ಹೆಣ್ಣು ಮಕ್ಕಳು ಇದಿದ್ದರಿಂದ 3ನೇ ಮಗು ಯಾವುದೆಂದು ತಿಳಿಯಲು ಲಕ್ಷ್ಮೀ ಎಂಬ ನಮ್ಮ ಸಂಬಂಧಿಕರನ್ನು ವಿಚಾರಿಸಿದ್ದೆವು. ಅವರು ಭ್ರೂಣ ಲಿಂಗ ಪತ್ತೆ ಮಾಡುವ ರೇಡಿಯಾಲಜಿಸ್ಟ್ ಪರಿಚಯವಿರುವ ಶಾರದಮ್ಮ ಎಂಬ ಮಧ್ಯವರ್ತಿಯನ್ನು ಸಂಪರ್ಕಿಸಲು ಸಹಾಯ ಮಾಡಿದ್ದಾರೆ.

ಜಿಲ್ಲಾಸ್ಪತ್ರೆಗೆ ಹೋದಾಗ ಅವರ ಎಡಗೈ ಮೇಲೆ ಶಾರದಮ್ಮ ಎಂಬ ಹೆಸರನ್ನು ಬರೆದಿದ್ದರು. ಇದನ್ನು ಪರಿಶೀಲಿಸಿದ ವೈದ್ಯರು ನಂತರ ನಮಗೆ ಸ್ಕ್ಯಾನಿಂಗ್ ಮಾಡಿ ಮಗು ಚೆನ್ನಾಗಿದೆಯೆಂದು ತಿಳಿಸಿದರು. ದಂಪತಿ ಸಂಬಂಧಿಕರಾದ ಲಕ್ಷ್ಮೀ ಅವರಿಂದ ಮಧ್ಯವರ್ತಿಯ ಪತಿ 19,000 ರು. ಪಡೆದು, ಹೆಣ್ಣು ಮಗು ಎಂದು ಹೇಳಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ.

ನಂತರ ಭಾಗ್ಯ ಎಂಬ ಮಧ್ಯವರ್ತಿಯ ಸಹಾಯದಿಂದ ಬೆಂಗಳೂರಿನ ಸ್ಯಾಟ್ ಲೈಟ್ ಬಸ್ ನಿಲ್ದಾಣದ ಬಳಿಯಿರುವ ಡ್ಯಾನಿಷ್ ಪಾಲಿಕ್ಲಿನಿಕ್ ನಲ್ಲಿ ಭ್ರೂಣ ಹತ್ಯೆ ಮಾಡಲು ಹೋದಾಗ ಮಾತ್ರೆ ನೀಡಿದ್ದಾರೆ. ಆಗ ತೀವ್ರವಾದ ರಕ್ತಸ್ರಾವ ಆಗುತ್ತಿರುವುದನ್ನು ಪರಿಶೀಲಿಸಿದ ಬನಶಂಕರಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ವಾಣಿವಿಲಾಸ್ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು. ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಸ್ಕ್ಯಾನಿಂಗ್ ಮಿಷಿನ್ ಪರಿಶೀಲನೆಯಲ್ಲಿ ಆ.23ರಂದು ಮಧ್ಯಾಹ್ನ 3.37ರ ಸಮಯದಲ್ಲಿ ಈ ಗರ್ಭಿಣಿಗೆ ಸ್ಕ್ಯಾನಿಂಗ್ ಮಾಡಿಸಿರುವುದು ದೃಢಪಟ್ಟಿದೆ. ಮುಂಚಿತವಾಗಿಯೇ ಈ ಗರ್ಭಿಣಿ ಯಾವುದೇ ಪರೀಕ್ಷೆಗಾಗಿ ದಿನಾಂಕವನ್ನು

ನಿಗಧಿಪಡಿಸಿಕೊಂಡಿರಲಿಲ್ಲ. ಕೆಲವೊಂದು ಎಫ್-ಫಾರಂಗಳನ್ನು ಪರೀಕ್ಷಿಸಿದಾಗ ಬೇರೆ ವ್ಯಕ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ದೊರೆತಿವೆ. ಇವರ ದಾಖಲೆಗಳು ಲಭ್ಯವಾಗಿಲ್ಲ.

ರಾಮನಗರದಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿರುವುದರಿಂದಲೇ ಭ್ರೂಣ ಲಿಂಗ ಹತ್ಯೆಯಾಗಿದೆ ಎಂಬ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ. ರೇಡಿಯಾಲಜಿಸ್ಟ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ|| ಶಶಿ ಎಸ್.ಎಲ್ ಹೆಚ್ಚಿನ ತನಿಖೆಗೆ ಒಳಪಡಿಸಲು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಆಯುಕ್ತರು ಡಾ.ಶಶಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

1ಕೆಆರ್ ಎಂಎನ್ 4.ಜೆಪಿಜಿ

ಬೆಂಗಳೂರು ದಕ್ಷಿಣ ಜಿಲ್ಲಾಸ್ಪತ್ರೆ.