ಸಾರಾಂಶ
ಕನಕಪುರ: ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿರುವ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣದ ದಿಕ್ಕು ತಪ್ಪಿಸಲು ಹೊರಟಿರುವ ಪಿಸಿಪಿಎನ್‌ಡಿಟಿ ಜಿಲ್ಲಾ ಸಮಿತಿ ಮತ್ತು ಆರ್‌ಸಿಎಚ್, ಡಿಎಚ್‌ಒ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ದಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಆಗ್ರಹಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಭ್ರೂಣಲಿಂಗ ಪತ್ತೆ ಪ್ರಕರಣವನ್ನು ಜಿಲ್ಲಾ ಪಿಸಿಪಿಎನ್‌ಡಿಟಿ ಸಮಿತಿ ಅಧಿಕಾರಿಗಳು ಬಂದು ಪರಿಶೀಲಿಸಿ ಪತ್ತೆ ಹಚ್ಚಿದ್ದಾರೆ. ಪ್ರಕರಣದಲ್ಲಿ ತಪ್ಪಿತಸ್ಥ ವೈದ್ಯೆ ದಾಕ್ಷಾಯಿಣಿ ಮತ್ತು ಯಂತ್ರ ಸ್ಥಳಾಂತರ ಮಾಡಲು ಮೌಖಿಕ ಅನುಮತಿ ಕೊಟ್ಟ ಅಧಿಕಾರಿ ಮೇಲೆ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳದೆ ಪಿಸಿಪಿಎನ್ ಡಿಟಿ ಸಮಿತಿ ಅಧಿಕಾರಿಗಳು ಕಾಟಾಚಾರಕ್ಕೆ ನೋಟಿಸ್ ಕೊಡುವ ನಾಟಕ ಮಾಡಿ ಅಕ್ರಮ ಸಂಭಾವನೆ ಪಡೆದಿದ್ದಾರೆಂದು ಗಂಭೀರ ಆರೋಪ ಮಾಡಿದರು.ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ, ಹತ್ಯೆ ನಡೆಯುತ್ತಿರುವುದಕ್ಕೆ ಮಾಗಡಿ, ಚನ್ನಪಟ್ಟಣ, ರಾಮನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪತ್ತೆಯಾಗಿರುವ ಪ್ರಕರಣಗಳು ಇದಕ್ಕೆ ಸಾಕ್ಷಿ ಯಾಗಿವೆ. ಈಗ ಕನಕಪುರದಲ್ಲೂ ಪತ್ತೆಯಾಗಿದೆ. ಇಂತಹ ಗಂಭೀರ ಸ್ವರೂಪದ ಪ್ರಕರಣಗಳು ಕಂಡುಬಂದರೂ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು.
ಈ ಹಿಂದೆ ಜಿಲ್ಲೆಯಲ್ಲಿದ್ದ ಡಿಎಚ್ಒ ನಿರಂಜನ್ ಮೂರ್ತಿ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರದಲ್ಲಿದ್ದಾಗ ಕೆಪಿಎಂಎ ಅನುಮತಿ ಕೊಡಲು ಲಂಚ ಪಡೆದು ಸಿಕ್ಕಿಬಿದ್ದಿದ್ದರು. ರಾಮನಗರದಲ್ಲೂ ಅದೇ ಚಾಳಿ ಮುಂದುವರಿಸಿದ್ದರೂ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಾಗಲಿ, ಜಿಲ್ಲಾಧಿಕಾರಿಗಳಾಗಲಿ, ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪಿಸಿಪಿಎನ್‌ಡಿಟಿ ಸಮಿತಿ ಸದಸ್ಯರಾದ ಜನಾರ್ದನ್, ಜಯಮ್ಮ, ಆರ್‌ಸಿಎಚ್, ಡಿಎಚ್ ಒ ಇವರೆಲ್ಲರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು. ಪಿಸಿಪಿಎನ್‌ಡಿಟಿ ಸಮಿತಿಯಲ್ಲಿ ಅರ್ಹತೆ ಇರುವವರನ್ನು ನೇಮಕ ಮಾಡಬೇಕು. ಪಿಸಿಪಿಎನ್‌ಡಿಟಿ ಕಾಯ್ದೆಗೆ ಒಳಪಡುವ ಸ್ಕ್ಯಾನಿಂಗ್ ಯಂತ್ರದ ಬಗ್ಗೆ ವೈಜ್ಞಾನಿಕತೆ ಮತ್ತು ಟೆಕ್ನಾಲಜಿ ಬಗ್ಗೆ ಪಿಸಿಪಿಎನ್ ಡಿಟಿ ಸಮಿತಿ ಸದಸ್ಯರಿಗೆ ಆಳವಾದ ಅರಿವಿರಬೇಕು. ಕೂಡಲೇ ಸಮಿತಿಯನ್ನು ವಜಾ ಮಾಡಿ ತಜ್ಞರನ್ನು ಆಯ್ಕೆ ಮಾಡಬೇಕು. ಜಿಲ್ಲಾಧಿಕಾರಿಗಳು ಜಿಲ್ಲಾ ಆಡಳಿತದಲ್ಲಿರುವ ಪಿಸಿಪಿಎನ್‌ಡಿಟಿ ಸಮಿತಿಯಲ್ಲಿರುವ ಸದಸ್ಯರು ಆರ್‌ಸಿಎಚ್, ಡಿ ಎಚ್‌ಒ ಅವರ ಮೇಲೆ ಕ್ರಮ ಜರುಗಿಸಿ ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.ಕೆ ಕೆ ಪಿ ಸುದಿ 01:
ಕನಕಪುರದಲ್ಲಿ ದಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.