ಭ್ರೂಣಲಿಂಗ ಪತ್ತೆ, ಹತ್ಯೆ ಕಾನೂನು ಬಾಹಿರ

| Published : Feb 15 2024, 01:33 AM IST

ಸಾರಾಂಶ

ಕಾರ್ಯಾಗಾರದಲ್ಲಿ ಸ್ಕ್ಯಾನಿಂಗ್ ಸೆಂಟರ್ ವೈದ್ಯರಿಗೆ ಡಿಸಿ ಟಿ.ಭೂಬಾಲನ್‌ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ವಿಜಯಪುರ

ದೇಶದ ಲಿಂಗಾನುಪಾತದಲ್ಲಿ ವ್ಯತ್ಯಾಸವಾಗುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆ. ಹಲವು ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ. ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಪ್ರಮುಖ ಕಾರಣವಾಗಿದ್ದು, ಇದಕ್ಕೆ ಆಸ್ಪದ ನೀಡಬೇಡಿ. ಇಂತಹ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಎಚ್ಚರಿಕೆ ನೀಡಿದರು.

ನಗರದ ಗಾಂಧಿಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ, ಬೇಟಿ ಬಚಾವೋ,ಬೇಟಿ ಪಡಾವೋ ಕಾರ್ಯಕ್ರಮದ ಕುರಿತು ಜಿಲ್ಲೆಯ ನೋಂದಾಯಿತ ಸ್ಕ್ಯಾನಿಂಗ್ ಸೆಂಟರ್ ವೈದ್ಯರುಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಎಚ್ಚರಿಕೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ ಕುಂದರ್ ಮಾತನಾಡಿ, ಪುರುಷ ಮತ್ತು ಮಹಿಳೆಯರಲ್ಲಿ ಸಮಾನ ಅನುಪಾತ ಕಾಪಾಡಲು ಹೆರಿಗೆಗೆ ಮುನ್ನ ಭ್ರೂಣಲಿಂಗ ಪತ್ತೆ ಮಾಡುವ ನಿಷೇಧ ಕಾಯ್ದೆ-1994 ಜಾರಿಯಲ್ಲಿದೆ. ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಮತ್ತು ಕಾನೂನು ಉಲ್ಲಂಘನೆ ಮಾಡಿದರೆ ಕಾನೂನು ಕ್ರಮಕ್ಕೆ ಅವಕಾಶವಿದೆ ಎಂದರು.

ರವಿ ಕಿತ್ತೂರ ಕಾರ್ಯಕ್ರಮ ನಿರೂಪಿಸಿದರು. ವಿಭಾಗದ ಉಪ ನಿರ್ದೇಶಕಿ ಡಾ.ಚಂದ್ರಿಕಾ, ಸ್ತ್ರೀರೋಗ ತಜ್ಞರು, ರೇಡಿಯೋಲಾಜಿಸ್ಟ್, ವೈದ್ಯರಿಗೆ ಉಪನ್ಯಾಸ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ವರಿ ಗೊಲಗೇರಿ, ಡಾ.ಕೆ.ಡಿ.ಗುಂಡಬಾವಡಿ, ಡಾ.ಜೈಬುನ್ನೀಸಾ ಬೀಳಗಿ, ಪೀಟರ್ ಅಲೆಕ್ಸಾಂಡರ್, ಕಾನೂನು ಸಲಹೆಗಾರ ತುಳಸಿರಾಮ ಸೂರ್ಯವಂಶಿ, ಡಾ.ವಿದ್ಯಾ ತೊಬ್ಬಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ.ಕೋಲೂರ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪರಶುರಾಮ ಹಿಟ್ನಳ್ಳಿ, ವಿಜಯ ಮಹಾಂತೇಸ ಹಗರಬಾಳ ಸೇರಿದಂತೆ ಹಲವರು ಇದ್ದರು.