ಬೆಂಡೆ ಬೆಳೆಯ ಸಮಗ್ರ ನಿರ್ವಹಣೆ ಕ್ಷೇತ್ರೋತ್ಸವ

| Published : Nov 15 2025, 02:15 AM IST

ಸಾರಾಂಶ

ರಾಣಿಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಶಿಗ್ಗಾಂವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ನಾಗಪ್ಪ ಮಾಳಪ್ಪನವರ ಕ್ಷೇತ್ರದಲ್ಲಿ ಬೆಂಡೆ ಬೆಳೆಯ ಸಮಗ್ರ ನಿರ್ವಹಣೆ ಕ್ಷೇತ್ರೋತ್ಸವ ಜರುಗಿತು.

ರಾಣಿಬೆನ್ನೂರು: ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಶಿಗ್ಗಾಂವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ನಾಗಪ್ಪ ಮಾಳಪ್ಪನವರ ಕ್ಷೇತ್ರದಲ್ಲಿ ಬೆಂಡೆ ಬೆಳೆಯ ಸಮಗ್ರ ನಿರ್ವಹಣೆ ಕ್ಷೇತ್ರೋತ್ಸವ ಜರುಗಿತು. ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ ಹೆಚ್. ಎಮ್ ಮಾತನಾಡಿ, ಸಿಒ-4 ಬೆಂಡಿ ಸಂಕರಣ ತಳಿಯ ಕಾಯಿಗಳು ತಿಳಿ ಹಸಿರು ಬಣ್ಣವನ್ನು ಹೊಂದಿದ್ದು, ಪ್ರತಿ ಗಿಡಕ್ಕೆ 20 ರಿಂದ 25 ಕಾಯಿಗಳನ್ನು ನೀಡುತ್ತದೆ. ಪ್ರತಿ ಎಕರೆಗೆ 20 ರಿಂದ 25 ಟನ್ ಇಳುವರಿಯನ್ನು 110 ದಿನಗಳಲ್ಲಿ ಪಡೆಯಬಹುದು. ಈ ಬೆಳೆಯ ಸಮಗ್ರ ನಿರ್ವಹಣೆಗೆ ಕೊಟ್ಟಿಗೆ ಗೊಬ್ಬರ ಪ್ರತಿ ಎಕರೆಗೆ 10 ಟನ್ ಬಳಸುವುದರ ಜೊತೆಗೆ ಮಣ್ಣು ಪರೀಕ್ಷೆಯ ಮೂಲಕ ಪೋಷಕಾಂಶಗಳ ನಿರ್ವಹಣೆ ಅತ್ಯಗತ್ಯ. ಕಾಯಿಕೊರಕದ ನಿರ್ವಹಣೆಗೆ ಪ್ರತಿ ಎಕರೆಗೆ ಐದು ಮೋಹಕ ಬಲೆಗಳನ್ನು ಬಳಸುವುದರ ಜೊತೆಗೆ ಬೇವಿನ ಎಣ್ಣೆ ಕಷಾಯವನ್ನು (ಅಜಾದಿರೆಕ್ಟೀನ್ ಶೇ.5)ವನ್ನು ಪ್ರತಿ 10 ಲೀಟರ್ ನೀರಿಗೆ 5 ಮಿ.ಲೀ ಬೆರೆಸಿ ಸಿಂಪಡಿಸಬೇಕು. ಹಳದಿ ಎಲೆ ನಂಜಾಣು ರೋಗದ ನಿರ್ವಹಣೆಗೆ ಆರಂಭದಲ್ಲಿ ರೋಗಬಾಧಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕು ಮತ್ತುಹಳದಿ ಬಣ್ಣದ ಅಂಟು ಬಲೆಗಳನ್ನು ಬಳಸುವುದರ ಜೊತೆಗೆ ಇಮಿಡಾಕ್ಲೋಪ್ರೀಡ್ 0.25 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ರೋಗವನ್ನು ಸಂಪೂರ್ಣವಾಗಿತಡೆಗಟ್ಟಲು ಸಾಧ್ಯವಾಗದಿದ್ದಲ್ಲಿ 15 ದಿವಸಗಳ ನಂತರಇದೇ ಸಿಂಪರಣೆಯನ್ನು ಪುನರಾವರ್ತಿಸಬೇಕು.ಬೂದು ರೋಗ ಕಂಡು ಬಂದಲ್ಲಿ 1 ಮಿ.ಲೀಡೈಪೆನ್ ಕೊನಾಜೋಲ್‌ನ್ನು ಪ್ರತಿ ಲೀಟರ್ ನೀರಿಗೆ ಸೇರಿಸಿ 15 ದಿನಗಳಿಗೊಮ್ಮೆ 3 ಸಲ ಸಿಂಪಡಿಸಬೇಕು ಎಂದರು. ಬೈಪ್ ಸಂಸ್ಥೆ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಜಿ.ಎಸ್. ಹೆಗ್ಡೆ ಮಾತನಾಡಿ, ಇತ್ತೀಚಿಗೆ ಸಾಕಷ್ಟು ರೈತರು ಈ ಭಾಗದಲ್ಲಿ ಬೆಂಡೆ ಬೆಳೆಯನ್ನು ಬೆಳೆಯುತ್ತಿದ್ದು, ರಾಸಾಯನಿಕ ಔಷಧಿಗಳ ಸಿಂಪರಣೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಇದರ ಪರ್ಯಾಯವಾಗಿ ಬೇವಿನ ಎಣ್ಣೆ ಮತ್ತು ಇತರೆ ಸಾವಯವ ಪದ್ಧತಿಗಳನ್ನು ರೈತರು ಅಳವಡಿಸಿಕೊಳ್ಳಬೇಕು ಎಂದರು.ರೈತ ನಾಗಪ್ಪನಿಂಗಪ್ಪ ಮಾಳಪ್ಪನವರ ಮಾತನಾಡಿ, ಸ್ಥಳೀಯ ತಳಿಗೆ ಹೋಲಿಸಿದರೆ ಸಿಒ-4 ಸಂಕರಣ ತಳಿಯು ಅತೀ ಬೇಗನೆ ಕಾಯಿ ಕಚ್ಚುವುದಲ್ಲದೆ ಉತ್ತಮ ಗುಣಮಟ್ಟದ ಅಧಿಕ ಇಳುವರಿಯನ್ನು ನೀಡುತ್ತದೆ ಎಂದು ಪ್ರಾತ್ಯಕ್ಷಿಕೆಯ ಅನುಭವವನ್ನು ಹಂಚಿಕೊಂಡರು. ನಬಾರ್ಡ್ ಅನುದಾನೀತ ಶ್ರೀ ಬಸವೇಶ್ವರ ಜಲಾನಯನ ಅಭಿವೃದ್ಧಿ ಸಂಘದ ಅಧ್ಯಕ್ಷ ಶಿವಪ್ಪ ಬಿಸ್ಟಣ್ಣನವರ ಮಾತನಾಡಿ, ಸಿಒ-4 ಸಂರಕಣ ತಳಿಯು ಪ್ರತಿ ಗಿಡಕ್ಕೆ ಹೆಚ್ಚು ಕಾಯಿಗಳನ್ನು ನೀಡುವುದರಿಂದ ಅಧಿಕ ಇಳುವರಿಯನ್ನು ಪಡೆಯಬಹುದು. ಮುಂದಿನ ದಿನಗಳಲ್ಲಿ ರೈತರು ಇದೆ ಸಂಕರಣ ತಳಿಯನ್ನು ಬೆಳೆಯಲು ಕರೆ ನೀಡಿದರು.ಈ ಸಮಯದಲ್ಲಿ ಜಾನುವಾರುಗಳಿಗೆ ಬರುವ ಪ್ರಮುಖ ರೋಗಗಳು ಮತ್ತು ಅವುಗಳ ನಿರ್ವಹಣೆ ಕುರಿತು ಕೇಂದ್ರದ ಪಶು ವಿಜ್ಞಾನಿ ಡಾ. ಮಹೇಶ ವಿವರಿಸಿದರು. ಕ್ಷೇತ್ರೋತ್ಸವದಲ್ಲಿ ಸುತ್ತ ಮುತ್ತಲಿನ ಗ್ರಾಮಗಳ ಸುಮಾರು 30 ರೈತರು ಭಾಗವಹಿಸಿದ್ದರು.