ಸಾರಾಂಶ
ತಾಲೂಕಿನ ಹೊನ್ನವಳ್ಳಿ ಹೋಬಳಿ ಕೆರೆ ಬಂಡಿಪಾಳ್ಯದ ಗ್ರಾಮದಲ್ಲಿ ಎಂಎಸ್‌ಐಎಲ್ ವತಿಯಿಂದ ಮದ್ಯ ಮಾರಾಟ ಮಳಿಗೆಯನ್ನು ಪ್ರಾರಂಭಿಸಲು ಯಾವುದೇ ಕಾರಣಕ್ಕೂ ತಾಲೂಕು ಆಡಳಿತ, ಗ್ರಾಮ ಪಂಚಾಯಿತಿ ಹಾಗೂ ಅಬಕಾರಿ ಇಲಾಖೆ ಅನುಮತಿ ನೀಡಬಾರದು ಎಂದು ಗ್ರಾಮದ ಮಹಿಳೆಯರು ಹೊನ್ನವಳ್ಳಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು.
ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಹೊನ್ನವಳ್ಳಿ ಹೋಬಳಿ ಕೆರೆ ಬಂಡಿಪಾಳ್ಯದ ಗ್ರಾಮದಲ್ಲಿ ಎಂಎಸ್‌ಐಎಲ್ ವತಿಯಿಂದ ಮದ್ಯ ಮಾರಾಟ ಮಳಿಗೆಯನ್ನು ಪ್ರಾರಂಭಿಸಲು ಯಾವುದೇ ಕಾರಣಕ್ಕೂ ತಾಲೂಕು ಆಡಳಿತ, ಗ್ರಾಮ ಪಂಚಾಯಿತಿ ಹಾಗೂ ಅಬಕಾರಿ ಇಲಾಖೆ ಅನುಮತಿ ನೀಡಬಾರದು ಎಂದು ಗ್ರಾಮದ ಮಹಿಳೆಯರು ಹೊನ್ನವಳ್ಳಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು. ಈ ವೇಳೆ ಗ್ರಾಮದ ಮುಖಂಡ ನಂಜಪ್ಪ ಮಾತನಾಡಿ, ಗ್ರಾಮದಲ್ಲಿ ೭೦ಕ್ಕೂ ಹೆಚ್ಚು ಮನೆಗಳಿದ್ದು ಕೂಲಿಕಾರ್ಮಿಕರು, ಕಡು ಬಡವರಿದ್ದು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಇಲ್ಲಿನ ನಿವೃತ್ತ ಶಿಕ್ಷಕರೊಬ್ಬರು ಎಂಎಸ್‌ಐಎಲ್ ವತಿಯಿಂದ ಮದ್ಯ ಮಾರಾಟ ಮಳಿಗೆ ಪ್ರಾರಂಭಿಸಲು ಅನುಮತಿ ಪಡೆಯಲು ಹೊರಟಿದ್ದಾರೆ. ಇದರಿಂದ ಗ್ರಾಮದಲ್ಲಿ ಕುಡಕರ ಸಂಖ್ಯೆ ಹೆಚ್ಚಾಗಲಿದ್ದು ಕುಟುಂಬಗಳು ಬೀದಿಗೆ ಬೀಳಲಿವೆ. ಮದ್ಯ ಮಾರಾಟದ ಮಳಿಗೆ ತೆರೆಯುವ ಜಾಗದ ಪಕ್ಕದಲ್ಲಿ ಹಾಲು ಉತ್ಪಾದಕರ ಸಂಘ ಸೇರಿದಂತೆ ಸುತ್ತಲೂ ವಾಸದ ಮನೆಗಳು, ದೇವಾಲಯ, ಶಾಲೆ ಇದೆ. ಕೂಡಲೆ ಸರ್ಕಾರ ಹಾಗೂ ಜಿಲ್ಲಾಡಳಿತ ನಮ್ಮ ಗ್ರಾಮದಲ್ಲಿ ಮದ್ಯದ ಅಂಗಡಿ ಪ್ರಾರಂಭಿಸಲು ಬಿಡಬಾರದು. ಒಂದು ವೇಳೆ ಪ್ರಾರಂಭಿಸಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷೆ ಅಂಬುಜ ಮಾತನಾಡಿ, ಶಾಲೆಯ ಮಕ್ಕಳು ಒಡಾಡುವ ಜಾಗದಲ್ಲಿ ಮದ್ಯ ಮಾರಾಟ ಅಂಗಡಿ ಪ್ರಾರಂಭಿಸುವುದು ಎಷ್ಟು ಸರಿ. ಇದರಿಂದ ಎಲ್ಲರಿಗೂ ತೊಂದರೆಯಾಗಲಿದೆ. ಕೂಡಲೆ ನಿಲ್ಲಿಸಬೇಕು ಇಲ್ಲವಾದಲ್ಲಿ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದರು. ಸ್ತ್ರೀ ಶಕ್ತಿ ಸಂಘದ ರೂಪ ಮಾತನಾಡಿ, ಈ ಗ್ರಾಮದಲ್ಲಿರುವ ಎಲ್ಲರೂ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಒಂದು ವೇಳೆ ಅಂಗಡಿ ಪ್ರಾರಂಭಿಸಿದರೆ ಕೂಲಿ ಹಣವನ್ನೆಲ್ಲಾ ಕುಡಿತಕ್ಕೆ ಖರ್ಚು ಮಾಡುವುದರಿಂದ ಮಹಿಳೆಯರು, ಮಕ್ಕಳು ಬೀದಿಗೆ ಬರಬೇಕಾಗುತ್ತದೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಪರವಾನಿಗೆಯನ್ನು ಕೊಡಬಾರದು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಹೊನ್ನವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಕೆ. ದೊಡ್ಡೇಗೌಡರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮದ್ಯದ ಅಂಗಡಿ ಪ್ರಾರಂಭಿಸಲು ಅನುಮತಿ ನೀಡಿಲ್ಲ ಯಾವುದೇ ಕಾರಣಕ್ಕೂ ಪ್ರಾರಂಭಿಸಲು ಬಿಡುವುದಿಲ್ಲ ಎಂದರು. ಪ್ರತಿಭಟನೆಯಲ್ಲಿ ನಟೇಶ್, ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ಅಕ್ಕಪಕ್ಕದ ಗ್ರಾಮಸ್ಥರು ಭಾಗವಹಿಸಿದ್ದರು.