ಸಾರಾಂಶ
ಪ್ರತಿಭಟನಾ ನಿರತರ ಮೇಲೆ ಪ್ರಕರಣ ದಾಖಲಿಸಿದ್ದಕ್ಕೆ ಆಕ್ರೋಶ
ರೈತರನ್ನು ಅರೆಸ್ಟ್ ಮಾಡಿದರೇ ಉಪವಾಸ ಬೀಳಬೇಕಾಗುತ್ತದೆಕನ್ನಡಪ್ರಭ ವಾರ್ತೆ ಕೊಪ್ಪಳ
ತಮ್ಮೂರ (ಕವಲೂರು ಗ್ರಾಮದ) ರಸ್ತೆ ಅಭಿವೃದ್ಧಿ ಮಾಡಿಕೊಡಿ ಎಂದು ಹೋರಾಟ ಮಾಡಿದರೆ ಪ್ರತಿಭಟನೆ ಮಾಡಿದವರ ಮೇಲೆ ಕೇಸ್ ಹಾಕಿದ್ದು ಯಾವ ನ್ಯಾಯ? ಕೂಡಲೇ ಪ್ರಕರಣವನ್ನು ವಾಪಸ್ ಪಡೆಯಬೇಕು, ಇಲ್ಲದಿದ್ದರೆ ಮತ್ತೊಂದು ಉಗ್ರಹೋರಾಟ ಮಾಡುತ್ತೇವೆ ಎಂದು ಗ್ರಾಮದ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಕವಲೂರು ಗ್ರಾಮದ ರತ್ನಾ ಉಟಗನೂರು, ರೇಣುಕಾ ಬೆಟಗೇರಿ, ಗಂಗಮ್ಮ ಸಿಂದೋಗಿ. ಶೋಭಾ ಬೀಳಗಿ. ಫಾತೀಮಾ ಅವರು ಮಾತನಾಡಿ ಕಿಡಿಕಾರಿದ್ದಾರೆ.
ಸಾವಿರಾರು ಮಹಿಳೆಯರು ಶಾಂತಿಯುತ ಹೋರಾಟ ಮಾಡಿದ್ದೇವೆ. ನಮ್ಮೂರಿಗೆ ಬಂದಿದ್ದ ಅಧಿಕಾರಿಗಳು ನಮ್ಮೊಂದಿಗೆ ಚೆನ್ನಾಗಿಯೇ ಮಾತನಾಡಿದ್ದಾರೆ. ಈ ವೇಳೆಯಲ್ಲಿ ಅಧಿಕಾರಿಗಳ ವಿರುದ್ಧ ನಮ್ಮೂರಿನ ಪುರುಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಂತ ಅವರನ್ನೇನು ಕೊಲೆ ಮಾಡಲು ಹೋಗಿರಲಿಲ್ಲ. ಆದರೂ ತಹಸೀಲ್ದಾರ್ ವಿಠ್ಠಲ್ ಚೌಗಲಾ ಕೇಸ್ ಜಡಿದ್ದಾರೆ.ಕೇವಲ 14 ಜನರ ಮೇಲೆ ಯಾಕೆ ಕೇಸ್ ಮಾಡಲಾಗಿದೆ. ಮಾಡುವುದಾದರೆ ಎಲ್ಲರ ಮೇಲೆಯೂ ಕೇಸ್ ಮಾಡಿದ್ದರೇ ನಾವು ಒಪ್ಪುತ್ತಿದ್ದೇವು, ಆದರೆ, ಅವರು ಯಾರದ್ದೊ ಮಾತುಕೇಳಿಕೊಂಡು, ಕೇಸ್ ಮಾಡಿದ್ದಾರೆ. ಇದರ ಹಿಂದಿನ ಉದ್ಧೇಶವಾದರೂ ಏನು ಎಂದು ಪ್ರಶ್ನೆ ಮಾಡಿದರು.
ಒಬ್ಬ ಯುವಕನಿಗೆ ಸರಿಯಾಗಿ ಕಿವಿಯೇ ಕೇಳುವುದಿಲ್ಲ, ಆತ ಅತ್ಯಂತ ಒಳ್ಳೆಯವನಿದ್ದಾನೆ. ಯಾರ ಬಗ್ಗೆಯೇ ಮಾತನಾಡುವುದೇ ಇಲ್ಲ. ಅಂಥವನ ಮೇಲೆ ಕೇಸ್ ಹಾಕಿದ್ದಾರೆ. ಇದೆಲ್ಲವೂ ಷಡ್ಯಂತ್ರವಾಗಿದೆ. ಯಾರೋ ಹಿಂದೆ ಕುಳಿತುಕೊಂಡು ಕೇಸ್ ಮಾಡಿಸಿದ್ದಾರೆ. ಇದರಲ್ಲಿ ರಾಜಕೀಯವೂ ಇರಬಹುದು. ಆದರೆ, ನಾವು ಯಾರ ಮೇಲೆಯೂ ದೂರುವುದಿಲ್ಲ. ಕೂಡಲೇ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.14 ಜನರು ಈಗ ಬಿತ್ತುವ ಸಮಯದಲ್ಲಿ ಊರು ತೊರೆದಿದ್ದಾರೆ. ಅವರ ಮನೆಯಲ್ಲಿ ಏನಾದರೂ ಅನಾಹುತವಾದರೇ ಅದಕ್ಕೆ ತಹಸೀಲ್ದಾರ್ ಅವರೇ ಹೊಣೆಯಾಗುತ್ತಾರೆ ಎಂದರು.
ನಾವು ಇಷ್ಟಕ್ಕೆ ಬಿಡುವುದಿಲ್ಲ, ಇದರ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಾಗಬೇಕು. ಪದೇ ಪದೆ ಆಯ್ಕೆಯಾಗುವವರೇ ಈ ಬಾರಿಯೂ ಆಯ್ಕೆಯಾಗಿದ್ದಾರೆ. ಅವರಿಗೆ ಗೊತ್ತಾಗುವುದಿಲ್ಲವೇ ನಮ್ಮೂರು ರಸ್ತೆ ದುರಸ್ಥಿ ಮಾಡಿಸಬೇಕು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಅವರ ಹೆಸರು ಹೇಳದೆಯೇ ಕಿಡಿಕಾರಿದರು.ಮೊದಲು ಕೇಸ್ ವಾಪಸ್ ಪಡೆಯಲಿ, ನಮ್ಮೂರು ರಸ್ತೆ ದುರಸ್ತಿ ಮಾಡಿಸಲಿ. ಸಣ್ಣಪುಟ್ಟ ಗ್ರಾಮಗಳಿಗೂ ಕಾಲೇಜುಗಳು ಬಂದಿವೆ. ಆದರೆ, ನಮ್ಮೂರಿಗೆ ಮಾತ್ರ ಇಲ್ಲ. ಈಗ ಹೋರಾಟ ಮಾಡಿದರೆ ಕೇಸ್ ಹಾಕಿ ಹೆದರಿಸುತ್ತಿದ್ದಾರೆ. ನಮ್ಮ ಬಳಿಯೂ ತಹಸೀಲ್ದಾರ್ ಅವರ ವಿರುದ್ಧವೇ ಕೇಸ್ ಹಾಕುವುದಕ್ಕೆ ದಾಖಲೇ ಇವೆ. ದ್ವೇಷ ಬೇಡ ಎಂದು ಬಿಟ್ಟಿದ್ದೇವೆ. ಹಾಗೊಂದು ವೇಳೆ ಕೇಸ್ ವಾಪಸ್ ಪಡೆಯದಿದ್ದರೇ ನಾವೂ ದೂರು ನೀಡುತ್ತೇವೆ ಎಂದರು. ಉತ್ತಿ ಬಿತ್ತಿ ಬೆಳೆಯುವ ರೈತರ ಮೇಲೆ ಕೇಸ್ ಹಾಕಿದ್ದಾರೆ. ಇದರಿಂದ ಉಪವಾಸ ಬೀಳಬೇಕಾಗುತ್ತದೆ ಎಂದರು. ಪ್ರತಿಭಟನೆ ಮಾಡಿದವರೆಲ್ಲರ ವಿರುದ್ಧವೂ ಕೇಸ್ ಹಾಕಿದರೇ ದೇಶದಲ್ಲಿರುವವರೆಲ್ಲರೂ ಜೈಲಲ್ಲಿ ಇರಬೇಕಾಗುತ್ತದೆ ಎಂದರು.