ಸಾರಾಂಶ
ಹೋರಾಟಗಾರ ಶ್ರವಣ್‌ಕುಮಾರ್ ನಾಯಕ್‌ರನ್ನು ಗಡಿಪಾರಿಗೆ ಒತ್ತಾಯಿಸಿರುವುದು ಖಂಡನೀಯ
ಕನ್ನಡಪ್ರಭ ವಾರ್ತೆ ತುಮಕೂರು
ಕಲಬುರ್ಗಿಯಲ್ಲಿ ಪರಿಶಿಷ್ಟ ಪಂಗಡದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ವಿರುದ್ಧ ಹೋರಾಟ ಮಾಡುತ್ತಿರುವ ಹೋರಾಟಗಾರ ಶ್ರವಣ್‌ಕುಮಾರ್ ನಾಯಕ್‌ರನ್ನು ಗಡಿಪಾರಿಗೆ ಒತ್ತಾಯಿಸಿರುವುದು ಖಂಡನೀಯ ಎಂದು ಕುಪ್ಪೂರು ಶ್ರೀಧರನಾಯಕ್ ತಿಳಿಸಿದ್ದಾರೆ.ನಗರದ ಅಂಬೇಡ್ಕರ್ ಭವನದಲ್ಲಿ ವಾಲ್ಮೀಕಿ ಸಮುದಾಯದ ರಾಜ್ಯಮಟ್ಟದ ಹೋರಾಟಗಾರರ ಸಭೆ ನಡೆಸಿ ಮಾತನಾಡಿ ಅವರು, ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರಕಾರಕ್ಕೆ ವಂಚಿಸಿ, ನೌಕರಿಯ ಜೊತೆಗೆ, ಸರಕಾರದ ಸವಲತ್ತುಗಳನ್ನು ಪಡೆಯುವವರ ವಿರುದ್ದ ಕ್ರಮ ಕೈಗೊಳ್ಳದೆ, ನಕಲಿ ಜಾತಿ ಪತ್ರ ಪಡೆದವರು ನೀಡಿದ ದೂರನ್ನೇ ಕೇಂದ್ರೀಕರಿಸಿ ಹೋರಾಟಗಾರರನ್ನು ಗಡಿಪಾರು ಮಾಡಲು ಮುಂದಾದರೆ ಉಗ್ರ ಹೋರಾಟ ನಡೆಸುವುದಲ್ಲದೆ, ಕಲ್ಬುರ್ಗಿ ಚಲೋದಂತಹ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು.ಇಂದು ರಾಜ್ಯದಲ್ಲಿ ಶೋಷಿತ ಸಮುದಾಯಗಳಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜಾತಿ ಪಟ್ಟಿಯಲ್ಲಿರುವ ವಿವಿಧ ಜಾತಿಗಳ ಹೆಸರಿನಲ್ಲಿ ಉಳ್ಳುವರು, ಮುಂದುವರೆದ ಜಾತಿಗಳ ಜನರು ನಕಲಿ ದಾಖಲೆ ಸೃಷ್ಟಿ ಮಾಡಿ, ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದು ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆ ಹಲವಾರು ವರ್ಷಗಳಿಂದ ಶ್ರವಣಕುಮಾರ್ ನಾಯಕ್ ಹೋರಾಟ ನಡೆಸುತ್ತಿದ್ದಾರೆ ಎಂದರು.
ಸಭೆಯಲ್ಲಿ ವಾಲ್ಮೀಕಿ ಸ್ವಾಭಿಮಾನಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎನ್.ನಾಯಕ್, ನರಸಾಪುರ ನಾಗರಾಜು, ಬೆಂಗಳೂರು ರಮೇಶ್, ಎಚ್.ಜಿ.ರಂಗನಾಥ್, ಭಾಗ್ಯಮ್ಮ, ರಾಮಾಂಜಿ ನಾಯಕ್, ಸೋಲಾರ್ ರಾಜಣ್ಣ, ಅರುಣ್ ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.