ಸಾರಾಂಶ
ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾಡಳಿತ ಅ.17ರೊಳಗೆ ಗುದ್ದಲಿಪೂಜೆ ಮಾಡದಿದ್ದರೆ ವಾಲ್ಮೀಕಿ ಜಯಂತಿಯ ಸರ್ಕಾರಿ ಕಾರ್ಯಕ್ರಮ ಬಹಿಷ್ಕರಿಸಿ, ಉಗ್ರ ಹೋರಾಟ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಚಾಮರಾನಗರದಲ್ಲಿ ಜಿಲ್ಲಾ ಮಟ್ಟದ ನಾಯಕ ಸಮುದಾಯದ ಮುಖಂಡರ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಾಯಕ ಸಮುದಾಯದ ಬಹು ವರ್ಷಗಳ ಬೇಡಿಕೆಯಾದ ಶ್ರೀ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾಡಳಿತ ಅ.17ರೊಳಗೆ ಗುದ್ದಲಿಪೂಜೆ ಮಾಡದಿದ್ದರೆ ವಾಲ್ಮೀಕಿ ಜಯಂತಿಯ ಸರ್ಕಾರಿ ಕಾರ್ಯಕ್ರಮ ಬಹಿಷ್ಕರಿಸಿ, ಉಗ್ರ ಹೋರಾಟ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.ನಗರದ ನಾಯಕರ ಸಾರ್ವಜನಿಕ ವಿದ್ಯಾರ್ಥಿ ನಿಲಯ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ನಾಯಕ ಸಮುದಾಯದ ಮುಖಂಡರ ಸಭೆಯಲ್ಲಿ ಜಿಲ್ಲಾಡಳಿತ ನಮ್ಮ ಬೇಡಿಕೆ ಈಡೇರಿಸದ್ದಿರೆ ಸರ್ಕಾರಿ ಜಿಲ್ಲಾ ಮಟ್ಟದ ವಾಲ್ಮೀಕಿ ಜಯಂತಿ ಕಾರ್ಯಕ್ರಮ, ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದ ಕಾರ್ಯಕ್ರಮಗಳನ್ನು ಬಹಿಷ್ಕಾರ ಮಾಡಿ ಹೋರಾಟ ಮಾಡಲು ಹಾಗೂ ಜಿಲ್ಲಾ ಕೇಂದ್ರದಲ್ಲಿ ಸಮುದಾಯದ ವತಿಯಿಂದಲ್ಲೇ ಅದ್ಧೂರಿ ವಾಲ್ಮೀಕಿ ಜಯಂತಿ ಆಚರಣೆಗೆ ತೀರ್ಮಾನಿಸಲಾಯಿತು.ಉಗ್ರ ಹೋರಾಟ: ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಜಿಲ್ಲಾಡಳಿತ ಬಹುವರ್ಷಗಳಿಂದಲೂ ವಾಲ್ಮೀಕಿ ಪುತ್ಥಳಿ ನಿರ್ಮಿಸಲು ತಾರತಮ್ಯ ಮಾಡುತ್ತಿದೆ. ಅ.17ರೊಳಗೆ ಜಿಲ್ಲಾಡಳಿತ ವಾಲ್ಮೀಕಿ ಪುತ್ಥಳಿಗೆ ಗುದ್ದಲಿಪೂಜೆ ಒಪ್ಪಿಕೊಂಡರೇ ಜಿಲ್ಲಾಡಳಿತ ಮಾಡುವ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಮುದಾಯ ಭಾಗವಹಿಸುತ್ತದೆ. ಇಲ್ಲದಿದ್ದರೆ ಕಾರ್ಯಕ್ರಮ ಬಹಿಷ್ಕಾರ ಮಾಡಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಅಲ್ಲದೆ, ಸಮುದಾಯದಿಂದ ಅದ್ಧೂರಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುವುದಾಗಿ ಜಿಲ್ಲಾಡಳಿತವನ್ನು ಎಚ್ಚರಿಸಿದರು.ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್: ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ ಮಾತನಾಡಿ, ಜಿಲ್ಲಾಡಳಿತ ಅ.17 ರೊಳಗೆ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಮುಂದಾಗದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಮಾಡಲಾಗುವುದು ಎಂದರು. ನಾಯಕರ ವಿದ್ಯಾಭಿವೃದ್ಧಿ ಸಂಘದ ಉಪಾಧ್ಯಕ್ಷ ಪು.ಶ್ರೀನಿವಾಸ ನಾಯಕ ಮಾತನಾಡಿ, ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ವಾಲ್ಮೀಕಿ ಪುತ್ಥಳಿ ನಿರ್ಮಾಣವಾಗುವತನಕ ನಿರಂತರ ಹೋರಾಟ ಮಾಡಲಾಗುವುದು. ಇದಕ್ಕೆ ಜಿಲ್ಲೆಯ ಎಲ್ಲಾ ತಾಲೂಕಿನ ಸಮುದಾಯದ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.ಸಭೆಯಲ್ಲಿ ನಗರಸಭಾ ಅಧ್ಯಕ್ಷ ಎಸ್.ಸುರೇಶ್, ಮುಖಂಡರಾದ ಎಚ್.ವಿ.ಚಂದ್ರು, ಮಹದೇವನಾಯಕ.ಬಿ.ಕಾಂ, ಸುರೇಶ್ ನಾಯಕ, ಕಂಡಕ್ಟರ್ ಸೋಮನಾಯಕ, ಕೃಷ್ಣನಾಯಕ, ವಿರಾಟ್ ಶಿವು, ಚೆಂಗುಮಣಿ, ರಾಜೇಶ್ ನಾಯಕ, ಕೊಪ್ಪಾಳಿ ಮಹದೇವನಾಯಕ, ಮಲ್ಲೇಶ್ ನಾಯಕ, ಜಯಸುಂದರ್, ಯ.ರಾಜುನಾಯಕ, ಸುರೇಶ್ ನಾಗ್, ಸಿದ್ದರಾಜನಾಯಕ, ವೆಂಕಟೇಶನಾಯಕ, ಬದನಗುಪ್ಪೆ ಶಿವರಾಂ, ಮಹೇಂದ್ರ, ರಮೇಶ್, ಮಾದೇಶ್, ವೆಂಕಟೇಶ ಇತರರು ಭಾಗವಹಿಸಿದ್ದರು.