ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲಸರ್ಕಾರ ಆಡಳಿತಾತ್ಮಕ ದೃಷ್ಟಿಯಿಂದ ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವುದಾದರೆ ಬ್ರಿಟಿಷರ ಕಾಲದಿಂದಲೂ ಕಂದಾಯ ಉಪವಿಭಾಗ ಕೇಂದ್ರವಾಗಿರುವ ಬೈಲಹೊಂಗಲನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು. ಪ್ರಭಾವಿಗಳಿಗೆ ಮಣೆ ಹಾಕಿ ಒಂದು ವೇಳೆ ಇಂದಿನ ಬಜೆಟ್ನಲ್ಲಿ ಕಡೆಗಣಿಸಿದರೆ ಶುಕ್ರವಾರದಿಂದಲೇ ಅನಿರ್ಧಿಷ್ಟಾವಧಿಯ ಉಗ್ರ ಹೋರಾಟದ ಮೂಲಕ ಬಿಸಿ ಮುಟ್ಟಿಸಲಾಗುವುದು ಎಂದು ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಶಿವರಂಜನ ಬೋಳಣ್ಣವರ ಹೇಳಿದರು.
ಅವರು ಪಟ್ಟಣದ ಶಾಖಾಮೂರುಸಾವಿರ ಮಠದಲ್ಲಿ ಬೈಲಹೊಂಗಲ ಜಿಲ್ಲೆ ಘೋಷಣೆ ಮಾಡುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಈಗಾಗಲೇ ಶಾಸಕ ಮಹಾಂತೇಶ ಕೌಜಲಗಿ ಅವರು ರಾಮದುರ್ಗ ಶಾಸಕ ಅಶೋಕ ಪಟ್ಟಣ ಅವರೊಂದಿಗೆ ತೆರಳಿ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರನ್ನು ಈ ನಿಟ್ಟಿನಲ್ಲಿ ಪ್ರಶ್ನಿಸಿದ್ದಾರೆ. ಜಿಲ್ಲೆ ವಿಭಜನೆ ಕುರಿತು ಸರಕಾರದ ಮುಂದೆ ಯಾವುದೇ ಪ್ರಸ್ತಾವಣೆ ಇಲ್ಲ. ಉಹಾಪೋಹಗಳು ನಡೆದಿವೆ ಯಾವುದು ನಿಜ ಅಲ್ಲ ಎಂದು ತಿಳಿಸಿದ್ದಾರೆ. ಇದಾಗ್ಯೂ ಜಿಲ್ಲೆ ವಿಭಜನೆಗೆ ಮುಂದಾದರೆ ಹೋರಾಟದ ನೇತೃತ್ವ ವಹಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎಂದರು.ಬಿಜೆಪಿ ಮುಖಂಡ ವಿಜಯ ಮೆಟಗುಡ್ಡ ಮಾತನಾಡಿ, ಆಡಳಿತಾತ್ಮಕವಾಗಿ ಉಪವಿಭಾಗವಾಗಿರುವ ಬೈಲಹೊಂಗಲ ಜಿಲ್ಲೆ ಮಾಡಬೇಕು. ಇಲ್ಲದಿದ್ದರೆ ಮತ್ತೊಂದು ಹೋರಾಟದ ಕ್ರಾಂತಿ ನಡೆಯಲಿದೆ ಎಂದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಶಾಸಕರು ಮುತವರ್ಜಿ ವಹಿಸಿ, ಬೈಲಹೊಂಗಲ ಪರವಾಗಿ ಹೋರಾಟಕ್ಕೆ ಮುಂದಾಗಬೇಕು. ಸರಕಾರ ಮಟ್ಟದಲ್ಲಿ ಯಾವ ನಿರ್ಧಾರ ಯಾವಾಗ ಕೈಗೊಳ್ಳುತ್ತಾರೋ ಗೊತ್ತಾಗುವುದಿಲ್ಲ ಎಂದರಲ್ಲದೆ, ಶಾಸಕರಿಗೆ ಬೆನ್ನೆಲುಬಾಗಿ ನಿಂತು ಉಗ್ರ ಹೋರಾಟ ಮಾಡೋಣ ಅಂದಾಗ ಸರಕಾರಕ್ಕೆ ಬಿಸಿ ಮುಟ್ಟಲಿದೆ ಎಂದರು.ವೇ.ಮೂ. ಮಹಾಂತಯ್ಯ ಶಾಸ್ತ್ರೀ ಆರಾದ್ರಿಮಠ ಸಾನ್ನಿಧ್ಯವಹಿಸಿ ಮಾತನಾಡಿ, ನಾಡಿನ ಮಠಾಧೀಶರ ನೇತೃತ್ವದಲ್ಲಿ ಹೋರಾಟದ ರೂಪರೇಷೆ ರೂಪಿಸೋಣ ಎಂದರು.
ನ್ಯಾಯವಾದಿ ಎಫ್.ಎಸ್. ಸಿದ್ದನಗೌಡರ, ಮಹಾತೇಶ ತುರಮರಿ ಮಾತನಾಡಿ, ಕಳೆದ ಮೂರು ದಶಕಗಳ ಹಿಂದೆ ಹಿರಿಯ ನ್ಯಾಯವಾದಿ ಸಿ.ಎಂ. ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲೆ ವಿಭಜನೆ ಕುರಿತು ಜಾಗೃತಿ ಮೂಡಿಸಿದ್ದರು. ಬೈಲಹೊಂಗಲ ಜಿಲ್ಲೆ ಆಗಲೇಬೇಕು ಎಂದು ದೃಢಸಂಕಲ್ಪ ಹೊಂದಿದ್ದರಿಂದ ಅಂದಿನ ಮುಖ್ಯಮತ್ರಿ ಜೆ.ಎಚ್. ಪಟೇಲ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಈ ನಿಟ್ಟಿನಲ್ಲಿ ಜಿಲ್ಲೆ ಹೀಗೆ ಮುಂದುವರೆಯಬೇಕು. ಇಲ್ಲದಿದ್ದರೆ ಬೈಲಹೊಂಗಲ ಜಿಲ್ಲೆಯಾಗಬೇಕು ಎಂದರು.ಸಭೆಯಲ್ಲಿ ಬೈಲಹೊಂಗಲ ಜಿಲ್ಲೆಯಾದರೆ ವಿಜಯೋತ್ಸವ ಮಾಡುತ್ತೇವೆ. ತಪ್ಪು ನಿರ್ಧಾರ ತೆಗೆದುಕೊಂಡರೆ ಅನಿರ್ಧಾಷ್ಟಾವಧಿವರೆಗೆ ಹೋರಾಟ ಮಾಡಲಾಗುವುದು. ಜಿಲ್ಲೆ ವಿಭಜನೆ ಕೈಬಿಟ್ಟರೆ ಬೈಲಹೊಂಗಲ ಜಿಲ್ಲೆ ಮಾಡುವಂತೆ ಶಾಸಕರ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ನಿರ್ಣಯಿಸಲಾಯಿತು.
ಈ ವೇಳೆ ಮಹಾಂತೇಶ ಮತ್ತಿಕೊಪ್ಪ, ಮಡಿವಾಳಪ್ಪ ಹೋಟಿ, ಎ.ಎಮ್. ಸಿದ್ರಾಮಣಿ, ವಿರುಪಾಕ್ಷಯ್ಯ ಕೋರಿಮಠ. ಬಿ.ಬಿ.ಗಣಾಚಾರಿ, ಬಾಬುಸಾಬ ಸುತಗಟ್ಟಿ, ಮುರಿಗೆಪ್ಪ ಗುಂಡ್ಲೂರ, ದುಂಡೇಶ ಗರಗದ, ಸುಭಾಷ ತುರಮರಿ, ವಿ.ಜಿ. ಕಟದಾಳ, ಎಸ್.ವಿ. ಸಿದ್ದಮನಿ, ಶಿವಾನಂದ ಬೆಳಗಾವಿ, ಪ್ರಪುಲ ಪಾಟೀಲ, ಶಿವಾನಂದ ಬಡ್ಡಿಮನಿ, ರಾಜು ಸೊಗಲ, ಡಾ.ಮಹಾಂತೇಶ ಕಳ್ಳಿಬಡ್ಡಿ, ಎಂ.ವಿ. ಸಾಲಿಮಠ, ಪ್ರಕಾಶ ಕಲ್ಲೋಳ್ಳಿ, ನಾಗೇಶ ಮರಕುಂಬಿ ಹಾಗೂ ನೂರಾರು ಸಾರ್ವಜನಿಕರು ಇದ್ದರು.---
ಕೋಟ್ಜಿಲ್ಲೆ ವಿಭಜನೆ ಕೂಗು ಎದ್ದಿದ್ದು, ನಾವೇಲ್ಲರೂ ಬೈಲಹೊಂಗಲ ಜಿಲ್ಲೆಗೆ 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಮುಂದೆಯೂ ಯಾವುದೇ ರೀತಿಯಿಂದ ಉಪವಿಭಾಗ ಕೇಂದ್ರವಾಗಿರುವ ಬೈಲಹೊಂಗಲಕ್ಕೆ ನ್ಯಾಯ ಸಿಗುವವರೆಗೂ ಹೋರಾಡೋಣ.
-ಎಂ.ಆರ್. ಮೆಳವಂಕಿ, ವಕೀಲರ ಸಂಘದ ಅಧ್ಯಕ್ಷ