ಟಿಪ್ಪು ಬಗ್ಗೆ ವಿಚಾರಗೋಷ್ಠಿ ಆಯೋಜಿಸಿದರೆ ಉಗ್ರ ಹೋರಾಟ: ರಾಜ್ಯಾಧ್ಯಕ್ಷ ಬಿ.ಮಂಜುನಾಥ್

| Published : Nov 20 2024, 12:35 AM IST

ಟಿಪ್ಪು ಬಗ್ಗೆ ವಿಚಾರಗೋಷ್ಠಿ ಆಯೋಜಿಸಿದರೆ ಉಗ್ರ ಹೋರಾಟ: ರಾಜ್ಯಾಧ್ಯಕ್ಷ ಬಿ.ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯದಲ್ಲಿ ಡಿಸೆಂಬರ್ ನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ವಿಚಾರಗೋಷ್ಠಿ ಆಯೋಜನೆ ಮಾಡಿದ್ದೇ ಆದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಜರಂಗಸೇನೆಯ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯದಲ್ಲಿ ಡಿಸೆಂಬರ್ ನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ವಿಚಾರಗೋಷ್ಠಿ ಆಯೋಜನೆ ಮಾಡಿದ್ದೇ ಆದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಜರಂಗಸೇನೆಯ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಎಚ್ಚರಿಕೆ ನೀಡಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೊಡುಗೆ ಕೊಟ್ಟ ಮಹನೀಯರ ಸ್ಮರಣೆ ಮಾಡಬೇಕೇ ಹೊರತು ಕನ್ನಡಕ್ಕೆ ಯಾವುದೇ ಕೊಡುಗೆ ನೀಡದೆ ಪರ್ಷಿಯನ್ ಆಡಳಿತ ನಡೆಸಿದ್ದ ಟಿಪ್ಪು ಸುಲ್ತಾನ್ ಬಗ್ಗೆ ವಿಚಾರಗೋಷ್ಠಿ ಇಟ್ಟುಕೊಳ್ಳುವ ನಿರ್ಧಾರ ಮಾಡಬಾರದು ಎಂದು ಆಯೋಜಕರಿಗೆ ಸಲಹೆ ನೀಡಿದರು.

ಟಿಪ್ಪು ಸುಲ್ತಾನ್ ಒಬ್ಬ ಕನ್ನಡ ದ್ವೇಷಿ ಹಾಗೂ ಕನ್ನಡಕ್ಕೆ ದ್ರೋಹ ಬಗೆದವನು. ತನ್ನ ಆಳ್ವಿಕೆಯಲ್ಲಿ ಕನ್ನಡವನ್ನು ಪಕ್ಕಕ್ಕಿಟ್ಟು ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ್ದನು. ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳು ಮೈಸೂರು ಅರಮನೆ ಪತ್ರಾಗಾರದಲ್ಲಿ ಇವೆ ಎಂದರು.

ಇಂದು ನಾವು ಆಡಳಿತದಲ್ಲಿ ಕನ್ನಡ ಪದಗಳೆಂದು ನಿತ್ಯ ಉಪಯೋಗಿಸುತ್ತಿರುವ ಸರ್ಕಾರ, ಇಲಾಖೆ, ಕಚೇರಿ, ತಾಲೂಕು, ಜಿಲ್ಲೆ, ಪಹಣಿ, ಅಸಾಮಿ, ಐಬು, ಕಾಗದ, ಶಿಫಾರಸ್ಸು, ಕವಾಯತು, ಮೊಹರು, ಅಸಲು, ಇನಾಮು, ಉಮೇದು, ಶಾಹಿ, ತೂಫಾನು, ಇರಾದೆ, ಪೇದೆ ಸೇರಿದಂತೆ 150ಕ್ಕೂ ಹೆಚ್ಚು ಪದಗಳು ಪರ್ಷಿಯನ್ ಪದಗಳು ಟಿಪ್ಪು ಸುಲ್ತಾನ್ ಆಡಳಿತ ಅವಧಿಯಲ್ಲಿ ಬಂದಿವೆ ಎಂದು ಆರೋಪಿಸಿದರು.

ಮೈಸೂರು ಮಹಾರಾಜರ ಬಳಿ ಕುದುರೆ ನೋಡಿಕೊಳ್ಳಲು ಕೆಲಸಕ್ಕೆ ಬಂದ ಹೈದರಾಲಿ ಮಹಾರಾಜರಿಗೆ ಮೋಸ ಮಾಡಿ ಅವರನ್ನುಅಕ್ರಮ ಬಂಧನದಲ್ಲಿಟ್ಟು ರಾಜ್ಯವನ್ನು ಕಿತ್ತುಕೊಂಡಂಥ ಒಬ್ಬ ರಾಜದ್ರೋಹಿ. ಜೊತೆಗೆ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ಹತ್ತಾರು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿ ಆ ಜಾಗದಲ್ಲಿ ಮಸೀದಿ ಕಟ್ಟಿಸಿದ್ದಾನೆ ಎಂದು ಆರೋಪಿಸಿದರು.

ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿದ ಟಿಪ್ಪು ಸಾವಿರಾರು ಹಿಂದೂಗಳ ಮಾರಣ ಹೋಮ ಮಾಡಿದಂಥ ಹಿಂದೂ ವಿರೋಧಿ. ಒನಕೆ ಓಬವ್ವ ಹಾಗೂ ಮದಕರಿ ನಾಯಕರಂತಹ ಮಹಾನ್ ದೇಶಭಕ್ತರನ್ನು ಮೋಸದಿಂದ ಕೊಲ್ಲಿಸಿದ ಹೈದರಾಲಿ, ಟಿಪ್ಪು ಸುಲ್ತಾನ್ ಬಗ್ಗೆ ಕನ್ನಡ ಪ್ರೇಮಿಗಳು ತಿಳಿದುಕೊಳ್ಳುವುದು ಏನೂ ಇಲ್ಲ ಎಂದು ದೂರಿದರು.

ಇದರ ಬದಲು ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆ ಕೊಟ್ಟಂತಹ ಮಹಾನ್ ಸಂತ ಶಿಶುನಾಳ ಶರೀಫ, ನಿಸಾರ್ ಅಹಮದ್ ಅವರಂತಹ ಮಹನೀಯರ ಬಗ್ಗೆ ಗೋಷ್ಠಿ ಹಾಗೂ ಚರ್ಚೆ ಇಟ್ಟುಕೊಳ್ಳಲಿ ಎಂದು ಸಲಹೆ ನೀಡಿದರು.

ಹಾಗೊಂದು ವೇಳೆ ಕೆಲ ಬುದ್ದಿಜೀವಿಗಳ ಆಗ್ರಹಕ್ಕೆ ಮಣಿದು ಟಿಪ್ಪು ಸುಲ್ತಾನನ ಗೋಷ್ಠಿ ಇಟ್ಟುಕೊಂಡಲ್ಲನ್ಬಭಜರಂಗದಳ ಹಾಗೂ ಎಲ್ಲ ಹಿಂದೂ ಸಂಘಟನೆಗಳು ಸೇರಿ ಗೋಷ್ಠಿ ನಡೆಯದಂತೆ ತೀವ್ರ ಪ್ರತಿಭಟನೆ ನಡೆಸುತ್ತೇವೆ. ಹಾಗಾಗಿ ಕಸಾಪ ಅಧ್ಯಕ್ಷರು ಇಂತಹುದ್ದಕ್ಕೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿದರು.

ಸುದ್ಧಿಗೋಷ್ಠಿಯಲ್ಲಿ ಮುಖಂಡರಾದ ಚೇತನ್‌ಕುಮಾರ್, ಸವ್ಯಸಾಚಿ, ಅನಿಲ್, ಗೋಪಾಲಕೃಷ್ಣ, ಶಿವು ಇತರರು ಇದ್ದರು.