ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಶ್ರೀರಾಮ ಜ್ಯೋತಿ ರಥಯಾತ್ರೆ ವೇಳೆ 1990ರಲ್ಲಿ ಪೊಲೀಸ್ ಗೋಲಿಬಾರ್‌ನಲ್ಲಿ ಪೊಲೀಸ್ ಗೋಲಿಬಾರ್‌ನಲ್ಲಿ ಹುತಾತ್ಮರಾದ 8 ಜನ ರಾಮಭಕ್ತರ ಹೆಸರಿನ 15 ಕೆಜಿ ತೂಕದ ಬೆಳ್ಳಿ ಇಟ್ಟಿಗೆಯನ್ನು ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಗುರುವಾರ ಸಮರ್ಪಿಸಲಾಯಿತು.ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನ್ಯಾಸದ ಕೋಶಾಧ್ಯಕ್ಷರಾದ ರಾಷ್ಟ್ರ ಸಂತ ಆಚಾರ್ಯ ಶ್ರೀ ಗೋವಿಂದ ದೇವಗಿರೆ ಮಹಾರಾಜರಿಗೆ ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ಪ್ರಮುಖ, ಟ್ರಸ್ಟ್‌ನ ಟ್ರಸ್ಟಿ ಗೋಪಾಲ್ ಜೀ ಸಮಕ್ಷಮ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಬೆಳ್ಳಿ ಇಟ್ಟಿಗೆಯನ್ನು ರಾಮ ಮಂದಿರ ಹೋರಾಟಗಾರ, ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ ಇತರರು ಸಮರ್ಪಿಸಿ, ಭಕ್ತಿ ಸಮರ್ಪಿಸಿದರು.
ಇದೇ ವೇಳೆ ಮಾತನಾಡಿದ ಯಶವಂತರಾವ್ ಜಾಧವ್, ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಹಮ್ಮಿಕೊಂಡಿದ್ದ ಶ್ರೀರಾಮ ಜ್ಯೋತಿ ರಥಯಾತ್ರೆ 1990ರಲ್ಲಿ ದಾವಣಗೆರೆಗೆ ಬಂದಿದ್ದ ವೇಳೆ ಕೋಮು ಗಲಭೆ ನಡೆದು, ಪೊಲೀಸ್ ಗೋಲಿ ಬಾರ್‌ನಲ್ಲಿ 8 ಜನ ರಾಮಭಕ್ತರು ಹುತಾತ್ಮರಾಗಿದ್ದರು. ಆ ಎಂಟೂ ಜನ ರಾಮಭಕ್ತರ ಹೆಸರನ್ನು 15 ಕೆಜಿ ಬೆಳ್ಳಿ ಇಟ್ಟಿಗೆಯಲ್ಲಿ ರಚಿಸಿ, ಅಯೋಧ್ಯೆ ಮಂದಿರಕ್ಕೆ ಸಮರ್ಪಿಸುವ ಮೂಲಕ ಭಕ್ತಿ ಸಲ್ಲಿಸಿದ್ದೇವೆ ಎಂದರು.ದಾವಣಗೆರೆಯಲ್ಲಿ 1990ರ ಕೋಮು ಗಲಭೆ ವೇಳೆ ಪೊಲೀಸರ ಗೋಲಿಬಾರ್‌ನಲ್ಲಿ 8 ಜನ ರಾಮಭಕ್ತರು ಪ್ರಾಣ ತ್ಯಾಗ ಮಾಡಿದ್ದರು. ಸುಮಾರು 70ಕ್ಕೂ ಹೆಚ್ಚು ಮಂದಿ ಪೊಲೀಸರಿಂದ ಗುಂಡೇಟು, ಮಚ್ಚು, ಲಾಂಗ್ ಸೇರಿದಂತೆ ಮಾರಕಾಸ್ತ್ರಗಳಿಂದ ದಾಳಿಗೆ, ಆಸಿಡ್ ದಾಳಿಗೆ ತುತ್ತಾಗಿ ಗಂಭೀರ ಗಾಯಗೊಂಡಿದ್ದಾರೆ. ಅಂದು ಗೋಲಿಬಾರ್‌ಗೆ ಬಲಿಯಾದವರ ಹೆಸರು ಬೆಳ್ಳಿ ಇಟ್ಟಿಗೆಯಲ್ಲಿದೆ ಎಂದು ತಿಳಿಸಿದರು.
ರಾಮಭಕ್ತರಾದ ಚಂದ್ರಶೇಖರ ಸಿಂಧೆ, ಆರ್.ಜಿ.ಶ್ರೀನಿವಾಸ ರಾವ್, ಶಿವಾಜಿರಾವ್ ಘಾಟೆ, ರಾಮಕೃಷ್ಣ ಸಾವಳಗಿ, ದುರ್ಗಪ್ಪ ಎಲೆಬೇತೂರು, ಚಿನ್ನಪ್ಪ, ಅಂಬರೀಷ, ಎಚ್.ನಾಗರಾಜರ ಹೆಸರು ಬೆಳ್ಳಿ ಇಟ್ಟಿಗೆಯಲ್ಲಿದೆ. ಹುತಾತ್ಮ ರಾಮಭಕ್ತರ ಹೆಸರಿನ ಜತೆಗೆ ಪ್ರಭು ಶ್ರೀರಾಮ ಮಂದಿರದ ಚಿತ್ರವನ್ನೂ ಬೆಳ್ಳಿ ಇಟ್ಟಿಗೆಯಲ್ಲಿ ಕೆತ್ತಲಾಗಿದೆ. ಬೆಳ್ಳಿ ಇಟ್ಟಿಗೆಯನ್ನು ಶ್ರೀರಾಮನ ಪಾದದಡಿ ಇಟ್ಟು, ಪೂಜಿಸುವಂತೆ ಅಯೋಧ್ಯೆಯ ದೇವಸ್ಥಾನ ಸಮಿತಿಗೆ ಮನವಿ ಮಾಡಿದ್ದೇವೆ ಎಂದರು.ಮುಖಂಡರಾದ ಯರಗಲ್ ಲೋಹಿತ್, ಭದ್ರಾವತಿಯ ಎನ್.ಟಿ.ಸಿ.ನಾಗೇಶಣ್ಣ, ಸೀಮೆಎಣ್ಣೆ ಹಾಲೇಶ ಇತರರು ಇದ್ದರು.