ಸಾರಾಂಶ
ಬೇಲೂರು ತಾಲೂಕಿನ ಕೋರ್ಲಗದ್ದೆ ಗ್ರಾಮದಲ್ಲಿ ಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಹದಿನೈದು ಮಹಿಳೆಯರು ಗಾಯಗೊಂಡಿರುವ ಘಟನೆ ನಡೆದಿದೆ. ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದ್ದು, ಹದಿನೈದು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರಿಗೂ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಹಾಸನ
ಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಹದಿನೈದು ಮಹಿಳೆಯರು ಗಾಯಗೊಂಡಿರುವ ಘಟನೆ ಬೇಲೂರು ತಾಲೂಕಿನ ಕೋರ್ಲಗದ್ದೆ ಗ್ರಾಮದಲ್ಲಿ ಭಾನುವಾರ ನಡೆದಿದೆ.ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದ್ದು, ಹದಿನೈದು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆ.ಬಿ.ಚಂದ್ರು ಎಂಬುವವರಿಗೆ ಸೇರಿದ ಗದ್ದೆಯಲ್ಲಿ ಸುಮಾರು 25 ಜನರು ಬತ್ತ ನಾಟಿ ಮಾಡುತ್ತಿದ್ದರು. ಈ ವೇಳೆ ಗುಡುಗು, ಸಿಡಿಲು ಸಹಿತ ದಿಢೀರ್ ಮಳೆ ಶುರುವಾಗಿದೆ. ಈ ವೇಳೆ ಬಡಿದ ಸಿಡಿಲಿನಿಂದ ಲತಾ (35) ಎಂಬುವವರ ಸ್ಥಿತಿ ಗಂಭೀರವಾಗಿದೆ. ಉಳಿದಂತೆ ರೇಣುಕಾ (49), ಸವಿತಾ (45), ಸುಮಿತ್ರ (51), ರೇಣುಕಮ್ಮ (55), ನೇತ್ರ (40), ನಿರ್ಮಲ (51), ವೀಣಾ (35), ಅನಿತಾ (55) ಸೇರಿ ಹದಿನೈದು ಮಂದಿ ಗಾಯಗೊಂಡಿದ್ದಾರೆ. ಎಲ್ಲರಿಗೂ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.