ಸಾರಾಂಶ
ರೈತರ ಸಮಸ್ಯೆ ಆಲಿಸದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಹಾಗೂ ರೈತರ ವಿದ್ಯುತ್ ಸಮಸ್ಯೆ, ನೀರಾವರಿ ಸಮಸ್ಯೆ, ಭೂ ಮಂಜೂರು ಹಾಗೂ ರೈತ ವಿರೋಧಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಶೀಘ್ರದಲ್ಲಿ ರೈತ ಸಂಘ ಸಾವಿರಾರು ರೈತರ ಜೊತೆಗೂಡಿ ಗಟ್ಟಿ ಹೋರಾಟ ನಡೆಸಲಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ರೈತರ ಸಮಸ್ಯೆ ಆಲಿಸದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಹಾಗೂ ರೈತರ ವಿದ್ಯುತ್ ಸಮಸ್ಯೆ, ನೀರಾವರಿ ಸಮಸ್ಯೆ, ಭೂ ಮಂಜೂರು ಹಾಗೂ ರೈತ ವಿರೋಧಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಶೀಘ್ರದಲ್ಲಿ ರೈತ ಸಂಘ ಸಾವಿರಾರು ರೈತರ ಜೊತೆಗೂಡಿ ಗಟ್ಟಿ ಹೋರಾಟ ನಡೆಸಲಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತರ ಸಭೆಯ ನಂತರ ಮಾತನಾಡಿದ ಅವರು ಪಾಕಿಸ್ತಾನದ ವಿರುದ್ಧ ಯುದ್ದ ನಡೆಯುತ್ತಿರುವ ಹಿನ್ನಲೆ ಹೋರಾಟವನ್ನು ಕೆಲ ದಿನಗಳ ಕಾಲ ಮುಂದೂಡಿ ನಂತರ ದಿನಾಂಕ ನಿಗದಿ ಮಾಡಿ ಬೃಹತ್ ಮಟ್ಟದ ಗಟ್ಟಿ ಹೋರಾಟ ಕೈಗೊಳ್ಳುತ್ತೇವೆ ಎಂದು ಹೇಳಿದರು.ನಿರೀಕ್ಷೆಯಂತೆ ಯಾವುದೇ ಬದಲಾವಣೆ ತಾರದ ಕಾಂಗ್ರೆಸ್ ಸರ್ಕಾರ ಅಕ್ರಮ ಸಕ್ರಮ ಯೋಜನೆಯಲ್ಲಿ ರೈತರಿಗೆ ಯಾವ ಕೆಲಸ ಮಾಡಿಕೊಟ್ಟಿಲ್ಲ. ಬಗರ್ ಹುಕುಂ ಸಮಿತಿಯ ರೈತರ ಅರ್ಜಿ ವಜಾಗೊಳಿಸಿ ಹತ್ತಾರು ವರ್ಷದಿಂದ ಅನುಭವದಲ್ಲಿದ್ದ ರೈತರಿಗೆ ಅನ್ಯಾಯ ಮಾಡಿದ್ದೀರಿ, ಬೆಸ್ಕಾಂ ಕಚೇರಿಯತ್ತ ರೈತರು ಹೋಗಲು ಭಯ ಪಡುವ ಸ್ಥಿತಿ ತರಲಾಗಿದೆ. ಪರಿವರ್ತಕ ಅಳವಡಿಕೆಗೆ ಲಕ್ಷ ಲಕ್ಷ ಹಣ ತೆತ್ತಬೇಕಿದೆ. ಈ ಮೊದಲೇ ಇದ್ದ ಹಳೆಯ ನಿಯಮ ಪಾಲಿಸಿ ರೈತರಿಗೆ ಉಚಿತ ಪರಿವರ್ತಕ, ಕಂಬ, ತಂತಿಗಳನ್ನು ನೀಡಬೇಕು ಎಂದು ಆಗ್ರಹಿಸಿದ ಅವರು ರೈತರ ಪಂಪ್ ಸೆಟ್ ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ವಿಚಾರ ಕೈಬಿಡಬೇಕು. ರೈತರಿಗೆ ಈಗಲೇ ಬೆಳೆದ ಬೆಳೆಗೆ ವೈಜ್ಞಾನಿಕ ಮಾರುಕಟ್ಟೆ, ಬೆಲೆ ಎರಡೂ ಇಲ್ಲ. ಇರುವ ನೀರು ರೈತರಿಗೆ ಕೃಷಿಗೆ ಸಿಗುತ್ತಿಲ್ಲ. ಇಷ್ಟಾದರೂ ಸ್ಮಾರ್ಟ್ ಮೀಟರ್ ಅಳವಡಿಕೆ ಸರಿಯಲ್ಲ ಎಂದು ಗುಡುಗಿದರು. ತುಮಕೂರು ಜಿಲ್ಲೆಯ ನಾಲ್ಕು ತಾಲೂಕಿಗೆ ಜೀವನಾಡಿ ಹೇಮಾವತಿ ನೀರು ಮಾಗಡಿಯತ್ತ ಕದ್ದೊಯ್ಯುವ ಪ್ರಭಾವಿ ಸಚಿವರ ಹುನ್ನಾರ ರೈತರನ್ನು ಕೆರಳಿಸಿದೆ. ಅವೈಜ್ಞಾನಿಕವಾಗಿ ಪೈಪ್ ಲೈನ್ ನಿರ್ಮಿಸಿ ನೀರು ಕಳ್ಳತನ ಮಾಡುವ ಬಗ್ಗೆ ಈಗಾಗಲೇ ರೈತರು ಎಚ್ಚರಿಕೆ ನೀಡಿದ್ದರೂ ಕೆಲಸ ಮಾಡಲು ಅಧಿಕಾರಿಗಳು ಬರುತ್ತಿದ್ದಾರೆ. ಮುಂದಿನ ಆಗು ಹೋಗುಗಳಿಗೆ ಅಧಿಕಾರಿಗಳು ಹೊಣೆ ಆಗುತ್ತಾರೆ ಎಂದು ಎಚ್ಚರಿಸಿದ ಅವರು ಮುಖ್ಯ ನಾಲೆಯನ್ನು ಅತ್ಯಾಧುನಿಕವಾಗಿ ಮಾರ್ಪಾಡು ಮಾಡಲಾಗಿದೆ. ಕುಣಿಗಲ್ ಗೆ 3 ಟಿಎಂಸಿ ನೀರು ಹಾಗೂ ಮಾಗಡಿಗೆ 66 ಎಂಸಿಟಿಎಫ್ ಮುಖ್ಯ ನಾಲೆಯಲ್ಲಿ ಹರಿಸಿಕೊಳ್ಳಲಿ. ಈ ಬಗ್ಗೆ ಯಾವ ಶಾಸಕರು ಮಾತನಾಡುತ್ತಿಲ್ಲ. ಕಾಂಗ್ರೆಸ್ ಶಾಸಕರು, ಸಚಿವರು ಕೂಡಾ ತುಟಿ ಬಿಚ್ಚಿಲ್ಲ. ಈ ಮೌನವೇ ನಾಲ್ಕು ತಾಲೂಕಿಗೆ ಮರಣ ಶಾಸನ ಆಗಲಿದೆ ಎಂದು ಎಚ್ಚರಿಸಿದರು.ತುಮಕೂರು ಸಂಸದ ಹಾಗೂ ಕೇಂದ್ರದ ಸಚಿವ ಸೋಮಣ್ಣ ಅವರು ಲಿಂಕ್ ಕೆನಾಲ್ ಬಗ್ಗೆ ಮಾತನಾಡುತ್ತಿಲ್ಲ. ಈ ಎಲ್ಲಾ ವಿಚಾರ ಚೆನ್ನಾಗಿ ತಿಳಿದ ಮಾಜಿ ಸಚಿವ ಮಾಧುಸ್ವಾಮಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. ರು ಕಳೆದ ಹತ್ತು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಹಾಗಲವಾಡಿ ಕೆರೆ, ಬಿಕ್ಕೆಗುಡ್ಡ ಕೆರೆ ಯೋಜನೆ ಮುಂದಿನ ಎರಡು ತಿಂಗಳಲ್ಲಿ ಪೂರ್ಣ ಗೊಳಿಸಿ ಈ ಭಾಗದ ರೈತರ ಹಿತ ಕಾಯಬೇಕು. ಹೀಗೆ ಜಿಲ್ಲೆಯ ಅನೇಕ ರೈತರ ಸಮಸ್ಯೆ ಜೊತೆಗೆ ದೊಡ್ಡ ಹೋರಾಟವನ್ನು ಶೀಘ್ರದಲ್ಲಿ ದಿನಾಂಕ ನಿಗದಿ ಮಾಡಿ ಸಾವಿರಾರು ರೈತರ ಕೂಗು ಸರ್ಕಾರಕ್ಕೆ ಕೇಳುವಂತೆ ಮಾಡುತ್ತೇವೆ ಎಂದರು.ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ, ಕೆ.ಎನ್.ವೆಂಕಟೇಗೌಡ, ಸಿ.ಜಿ.ಲೋಕೇಶ್, ಕೆಂಚಪ್ಪ, ಬೊರೇಗೌಡ, ಶ್ರೀನಿವಾಸ್, ರಮೇಶ್, ಜಿಲ್ಲಾ ಮುಖಂಡ ದೊಡ್ಡ ಮಾಳಯ್ಯ, ನಾಗರತ್ನಮ್ಮ, ಯತೀಶ್, ಗುರುಚನ್ನಬಸವಣ್ಣ, ಮೋಹನ್, ಮಾದೇವಣ್ಣ, ಸತ್ತಿಗಪ್ಪ, ಜಯಣ್ಣ ಇತರರು ಇದ್ದರು.