ಸಾರಾಂಶ
ಲವ್ ಜಿಹಾದ್ ವಿರುದ್ಧ ಸಮರ ಸಾರಿದ್ದು, ಇಂತಹ ಘಟನೆಗಳು ನಡೆದರೆ ಸೂಕ್ತ ರೀತಿಯಲ್ಲಿ ಹಿಂದೂ ಹೆಣ್ಮಕ್ಕಳ ರಕ್ಷಣಾ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಇನ್ಮುಂದೆ ಹಿಂದೂ ಸಮಾಜಕ್ಕೆ ಅನ್ಯಾಯವಾದರೆ ಸ್ವಾಮೀಜಿಗಳೆಲ್ಲರೂ ಒಗ್ಗೂಡಿ ಹೋರಾಟಕ್ಕೆ ಅಣಿಯಾಗಲಿದ್ದೇವೆ ಎಂದು ಅಖಿಲ ಭಾರತೀಯ ಸಂತ ಸಮಿತಿ ರಾಜ್ಯಾಧ್ಯಕ್ಷ ಮಂಗಳೂರಿನ ಓಂ ಶ್ರೀ ಮಠದ ಮಹಾಮಂಡಲೇಶ್ವರ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ ಎಚ್ಚರಿಕೆ ನೀಡಿದ್ದಾರೆ.ನಗರದ ಓಂ ಶ್ರೀ ಮಠದಲ್ಲಿ ಗುರುವಾರ ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಪ್ರಾಂತದ ಕಾರ್ಯಕಾರಿಣಿ ಸಮಿತಿ ಬೈಠಕ್‌ಗಿಂತ ಮೊದಲು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಹಿಂದೂಗಳ ಅನುಷ್ಠಾನ ಆಚರಣೆಗಳಿಗೆ ಬೇಕಾದ ಸಂರಕ್ಷಣೆ ನೀಡುವುದರಲ್ಲಿ ವಿಫಲವಾಗಿದೆ. ಚಿಕ್ಕೋಡಿಯ ಜೈನ ಮುನಿ ಹತ್ಯೆ, ಬೆಂಗಳೂರಿನ ಐಟಿ ಸಂಸ್ಥೆ ನಡೆಸುವವರ ಹತ್ಯೆ, ನಾಗಮಂಗಲದಲ್ಲಿ ಗಲಭೆ ಸಹಿತ ಹಲವು ಘಟನೆ ನಡೆಯುತ್ತಿರುವುದರಿಂದ ಹಿಂದೂ ಸಮಾಜಕ್ಕೆ ಸರ್ಕಾರದ ಮೇಲಿರುವ ವಿಶ್ವಾಸ ಕಳೆದುಹೋಗಿದೆ. ಮುಂದೆ ಇಂತಹ ಘಟನೆಗಳು ನಡೆದರೆ ಎಲ್ಲ ಸ್ವಾಮೀಜಿಗಳೊಂದಿಗೆ ಹೋರಾಟಕ್ಕೆ ಇಳಿಯಲಿದ್ದೇವೆ ಎಂದರು.ಲವ್ ಜಿಹಾದ್ ವಿರುದ್ಧ ಕಾರ್ಯಾಚರಣೆ: ಲವ್ ಜಿಹಾದ್ ವಿರುದ್ಧ ಸಮರ ಸಾರಿದ್ದು, ಇಂತಹ ಘಟನೆಗಳು ನಡೆದರೆ ಸೂಕ್ತ ರೀತಿಯಲ್ಲಿ ಹಿಂದೂ ಹೆಣ್ಮಕ್ಕಳ ರಕ್ಷಣಾ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಸ್ವಾಮೀಜಿ ಹೇಳಿದರು.ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದಿರುವ ಗಲಭೆ ಖಂಡನೀಯ. ಸಂರಕ್ಷಣೆ ಮಾಡಬೇಕಾದ ಪೊಲೀಸ್ ಇಲಾಖೆ ಹಾಗೂ ಸರ್ಕಾರವು ಕಾರ್ಯಕ್ರಮ ನಡೆಸಿದ ಕಮಿಟಿ ವಿರುದ್ಧವೇ ಎಫ್‌ಐಆರ್ ಮಾಡಿ ಪ್ರಕರಣ ದಾಖಲಿಸಿದೆ. ತಕ್ಷಣ ಹಿಂದೂ ಮುಖಂಡರ ಮೇಲಿನ ಪ್ರಕರಣ ರದ್ದುಗೊಳಿಸಬೇಕು. ಇಲ್ಲವಾದರೆ ಸ್ವಾಮೀಜಿಗಳು ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸುವ ಸಂದರ್ಭ ಬರಬಹುದು ಎಂದು ಓಂ ಶ್ರೀ ವಿದ್ಯಾನಂದ ಸರಸ್ವತಿ ಎಚ್ಚರಿಕೆ ನೀಡಿದರು.
ಅರಸಿಗುಪ್ಪೆ ಶ್ರೀ ಮಂಜುನಾಥ ಕ್ಷೇತ್ರದ ಶ್ರೀ ರಾಜೇಶ್‌ನಾಥ್ ಗುರೂಜಿ ಮಾತನಾಡಿದರು.ವಿವಿಧ ಮಠಗಳ ಸ್ವಾಮೀಜಿಗಳಾದ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ, ಶ್ರೀ ಸದ್ಗುರು ಜಯಪ್ರಕಾಶ್ ಸ್ವಾಮೀಜಿ, ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ, ಮಾತಾಶ್ರೀ ಓಂ ಶ್ರೀ ಶಿವಜ್ಞಾ ನಮಿ ಸರಸ್ವತಿ ಇದ್ದರು.
ಫೋಟೊ19ಓಂಶ್ರೀ