ದೇವನಹಳ್ಳಿಯ ಭೂಸ್ವಾಧೀನ ವಿರುದ್ಧ ಹೋರಾಟ: ಪ್ರಕಾಶ್

| Published : Jul 04 2025, 11:51 PM IST / Updated: Jul 04 2025, 11:52 PM IST

ದೇವನಹಳ್ಳಿಯ ಭೂಸ್ವಾಧೀನ ವಿರುದ್ಧ ಹೋರಾಟ: ಪ್ರಕಾಶ್
Share this Article
  • FB
  • TW
  • Linkdin
  • Email

ಸಾರಾಂಶ

ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ಗ್ರಾಮಗಳ ಜಮೀನು ಸ್ವಾಧೀನ ವಿಚಾರದಲ್ಲಿ ಮುಖ್ಯಮಂತ್ರಿಗಳಿಂದ ಪೂರಕ ಸ್ಪಂದನೆ ಲಭಿಸಿದೆ. ಹತ್ತು ದಿನಗಳ ಅವಕಾಶ ಕೋರಿದ್ದಾರೆ, ಕಾನೂನಾತ್ಮಕ ಅಂಶಗಳನ್ನು ಇತ್ಯರ್ಥಪಡಿಸಿಕೊಂಡು ಜು.15ಕ್ಕೆ ಸಭೆ ನಿಗದಿ ಮಾಡುವುದಾಗಿ ಹೇಳಿದ್ದಾರೆ. ಮುಂದೆ ಹೋರಾಟದ ಅಗತ್ಯ ಇಲ್ಲದೇ ಹೋಗಬಹುದು ಎಂದು ನಟ ಪ್ರಕಾಶ್‌ ರಾಜ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ಗ್ರಾಮಗಳ ಜಮೀನು ಸ್ವಾಧೀನ ವಿಚಾರದಲ್ಲಿ ಮುಖ್ಯಮಂತ್ರಿಗಳಿಂದ ಪೂರಕ ಸ್ಪಂದನೆ ಲಭಿಸಿದೆ. ಹತ್ತು ದಿನಗಳ ಅವಕಾಶ ಕೋರಿದ್ದಾರೆ, ಕಾನೂನಾತ್ಮಕ ಅಂಶಗಳನ್ನು ಇತ್ಯರ್ಥಪಡಿಸಿಕೊಂಡು ಜು.15ಕ್ಕೆ ಸಭೆ ನಿಗದಿ ಮಾಡುವುದಾಗಿ ಹೇಳಿದ್ದಾರೆ. ಮುಂದೆ ಹೋರಾಟದ ಅಗತ್ಯ ಇಲ್ಲದೇ ಹೋಗಬಹುದು ಎಂದು ನಟ ಪ್ರಕಾಶ್‌ ರಾಜ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ವಿಧಾನಸೌಧದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ಇದು ದೇವನಹಳ್ಳಿಯ ಹೋರಾಟವಾಗಿ ಉಳಿದಿಲ್ಲ. ದೆಹಲಿ ಮಟ್ಟದಲ್ಲಿ ಮೇಧಾಪಾಟ್ಕರ್‌, ಕಿಸಾನ್‌ ಮೋರ್ಚಾದಂತಹ ಸಂಘಟನೆಗಳಿಂದ ಬಲ ಬರುತ್ತಿದೆ. ದೇವನೂರು ಮಹದೇವ ಅವರು ಸೇರಿ ಎಲ್ಲರೂ ಜತೆ ಇದ್ದಾರೆ. ರೈತರ ಭೂಮಿ ರೈತರಿಗೆ ಧಕ್ಕುತ್ತದೆ ಎಂಬ ಭರವಸೆ ಇದೆ. ಒಂದಿಂಚೂ ಜಾಗ ಕೂಡ ಬಿಡುವುದಿಲ್ಲ. ಭೂಮಿ ಸ್ವಾಧೀನಕ್ಕೆ ಮುಂದಾದರೆ ರಾಷ್ಟ್ರಾದ್ಯಂತ ಹೋರಾಟ ನಡೆಯಲಿದೆ ಎಂದರು.-ಬಾಕ್ಸ್‌-

ರೈತರೊಂದಿಗಿನ ಸಭೆ ಅಪೂರ್ಣ

15ರ ಸಭೆಯಲ್ಲಿ ನಿಲುವು: ಸಿಎಂಕನ್ನಡಪ್ರಭ ವಾರ್ತೆ, ಬೆಂಗಳೂರು

ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ಗ್ರಾಮಗಳ ಜಮೀನು ಸ್ವಾಧೀನ ಕೈಬಿಡುವಂತೆ ಹೋರಾಟ ನಿರತರಾಗಿರುವ ರೈತ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಭೆ ಅಪೂರ್ಣವಾಗಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆದು ಜು.15 ರಂದು ಮತ್ತೊಮ್ಮೆ ಸಭೆ ನಡೆಸಿ ಸರ್ಕಾರದ ಅಂತಿಮ ನಿಲುವು ಪ್ರಕಟಿಸುವುದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ದೇವನಹಳ್ಳಿ ಚನ್ನರಾಯಪಟ್ಟಣದ ರೈತ ಹೋರಾಟಗಾರರು, ಸ್ಥಳೀಯ ಮುಖಂಡರು ಹಾಗೂ ಹೋರಾಟ ಒಕ್ಕೂಟದ ಮುಖಂಡರೊಂದಿಗೆ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಶುಕ್ರವಾರ ಸಭೆ ನಡೆಸಿದರು. ಈ ವೇಳೆ ಈಗಾಗಲೇ ಜಮೀನು ಸ್ವಾಧೀನ ಸಂಬಂಧ ಪ್ರಾಥಮಿಕ ಅಧಿಸೂಚನೆ ಹಾಗೂ ಅಂತಿಮ ಅಧಿಸೂಚನೆ ಎರಡೂ ಹೊರಡಿಸಲಾಗಿದೆ. ಈ ಹಂತದಲ್ಲಿ ಸ್ವಾಧೀನದಿಂದ ಕೈಬಿಡಲು ಕಾನೂನು ತೊಡಕುಗಳು ಉಂಟಾಗಲಿವೆ. ಹೀಗಾಗಿ ಕಾನೂನು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನಿಸಲು ಸಿದ್ದರಾಮಯ್ಯ ಅವರು ಕಾಲಾವಕಾಶ ಕೋರಿದರು. ಅಲ್ಲಿಯವರೆಗೆ ಹೋರಾಟ ಹತ್ತಿಕ್ಕುವ ಕೆಲಸ ಮಾಡುವುದಿಲ್ಲ ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಚರ್ಚೆ ಅಪೂರ್ಣವಾಗಿದೆ ಎಂದು ತಿಳಿದುಬಂದಿದೆ.

--

ರಾಕೇಶ್‌ ನೇತೃತ್ವದಲ್ಲಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೈಗಾರಿಕೆ ಉದ್ದೇಶಕ್ಕೆ ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಯಲ್ಲಿ ಸರ್ಕಾರ ಭೂ ಸ್ವಾಧೀನಕ್ಕೆ ಮುಂದಾದರೆ ತೀವ್ರ ಪ್ರತಿರೋಧ ಒಡ್ಡಬೇಕು. ಭೂಸ್ವಾಧೀನ ಮಾಡಿರುವುದನ್ನು ಡಿನೋಟಿಫೈ ಮಾಡಬೇಕು ಎಂದು ಮುಖಂಡರು ಆಗ್ರಹಿಸಿದರು.

ಭೂ ಸ್ವಾಧೀನ ವಿರೋಧಿಸಿದ ಕಳೆದ ಎಂಟು ದಿನಗಳಿಂದ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿದ್ದ ರೈತರ ಧರಣಿ ಸ್ಥಳಕ್ಕೆ ಶುಕ್ರವಾರ ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ಮುಖಂಡ ರಾಕೇಶ್ ಟಿಕಾಯತ್, ನಟ ಪ್ರಕಾಶ್‌ ರಾಜ್‌, ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾ. ವಿ.ಗೋಪಾಲಗೌಡ ಸೇರಿದಂತೆ ಹಲವರು ಭಾಗಿಯಾಗಿ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.