ಭಾರತೀಯ ಕಿಸಾನ್ ಸಂಘದಿಂದ ನಿವೇಶನಕ್ಕಾಗಿ ಹೋರಾಟ.

| Published : Nov 14 2025, 01:30 AM IST

ಸಾರಾಂಶ

ಒಂದು ವಾರದ ಸತ್ಯಾಗ್ರಹಕ್ಕೆ ಮಣಿಯದಿದ್ದರೆ ನ.೨೪ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು. ಎರಡು ದಿನದ ನಂತರ ಕಪ್ಪುಪಟ್ಟಿ ಧರಿಸಿ ಉಪವಾಸ ಸತ್ಯಾಗ್ರಹವನ್ನು ನಮ್ಮ ಸಮಸ್ಯೆ ಬಗೆಹರಿಯುವವರೆಗೂ ಮುಂದುವರಿಸಲಾಗುವುದು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಕಳೆದ ೭೦ ವರ್ಷಗಳಿಂದ ತಾಲೂಕಿನ ಶೆಟ್ಟಿಕೆರೆ ಗ್ರಾಮದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವ ಬಡಕುಟುಂಬಗಳಿಗೆ ಹಕ್ಕುಪತ್ರ ನೀಡದೆ ವಂಚಿಸುತ್ತಿರುವ ಸರ್ಕಾರಿ ವ್ಯವಸ್ಥೆಯ ವಿರುದ್ಧ ನ.೧೭ರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಎಚ್.ಆರ್. ಭೋಜರಾಜ್ ತಿಳಿಸಿದರು.

ಅವರು ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಶೆಟ್ಟಿಕೆರೆ ಗ್ರಾಮದ ಸ.ನಂ. ೮/೧.೮/೨ ಹಾಗೂ ೮/೩ರ ೨ ಎಕರೆ ೨೬ ಗುಂಟೆ ಜಾಗದಲ್ಲಿ ಸುಮಾರು ೭೦ ವರ್ಷದಿಂದ ಹಿಂದುಳಿದ, ದಲಿತ ಹಾಗೂ ಅನಕ್ಷರಸ್ಥ ೩೦ ಬಡಕುಟುಂಬಗಳು ಕೂಲಿ ಮಾಡುತ್ತಾ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿವೆ, ಈ ಮನೆಗಳಿಗೆ ನೀರು, ವಿದ್ಯುತ್, ರಸ್ತೆ ಹಾಗೂ ಚರಂಡಿಗಳ ಮೂಲ ಸೌಕರ್ಯವನ್ನು ನೀಡಲಾಗಿದೆ. ಆದರೆ ಮನೆಗಳನ್ನು ಕಟ್ಟಿಕೊಂಡ ಇವರಿಗೆ ನಿವೇಶನದ ಹಕ್ಕುಪತ್ರ ಹಾಗೂ ವಿವಿಧ ಯೋಜನೆಯಡಿ ಮನೆಕಟ್ಟಿಕೊಳ್ಳಲು ಅನುದಾನ ನೀಡುತ್ತಿಲ್ಲ. ಹಲವು ವರ್ಷಗಳಿಂದಲೂ ಮಾಡುತ್ತಿರುವ ಮನವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಈ ಬಗ್ಗೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ತಹಸೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳು, ಮಂತ್ರಿಗಳಿಗೂ ಮನವಿ ಮಾಡಿದರೂ ಸ್ಪಂದಿಸಿಲ್ಲ. ಇದೇ ಸ.ನಂಬರ್ ನಲ್ಲಿ ಸರ್ಕಾರಿ ಪಶು ಆಸ್ಪತ್ರೆ ಹಾಗೂ ಕೆಲ ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದು, ಉಳಿದ ಬಡ ವಸತಿ ಹೀನರಿಗೆ ನೆಪಗಳನ್ನು ಹೇಳುತ್ತಾ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು. ಇವರ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಹಾಗೂ ನಿವೇಶನ ಹೊಂದುವ ಸಂವಿಧಾನ ಬದ್ಧ ನಮ್ಮ ಹಕ್ಕುಗಳಿಗಾಗಿ ಹೋರಾಟದ ಹಾದಿಯನ್ನು ಭಾರತೀಯ ಕಿಸಾನ್ ಸಂಘ, ಫಲಾನುಭವಿಗಳ ಕುಟುಂಬದ ಸದಸ್ಯರೂ ಹಾಗೂ ಇತರೆ ಸಂಘಟನೆಗಳ ನೂರಾರು ಮಂದಿ ನ.೧೭ರಂದು ಪಟ್ಟಣದ ನೆಹರೂ ವೃತ್ತದಿಂದ ಮೆರವಣಿಗೆಯಲ್ಲಿ ತಾಪಂಗೆ ತೆರಳಿ ಕಾರ್ಯನಿರ್ವಹಣಾಧಿಕಾರಿಗಳಿಗೆ, ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತೆ ಮನವಿ ಸಲ್ಲಿಸಿ ನಂತರ ತಾಲೂಕು ಕಚೇರಿಯ ಮುಂದೆ ಆಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ತಿಳಿಸಿದರು.

ಒಂದು ವಾರದ ಸತ್ಯಾಗ್ರಹಕ್ಕೆ ಮಣಿಯದಿದ್ದರೆ ನ.೨೪ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು. ಎರಡು ದಿನದ ನಂತರ ಕಪ್ಪುಪಟ್ಟಿ ಧರಿಸಿ ಉಪವಾಸ ಸತ್ಯಾಗ್ರಹವನ್ನು ನಮ್ಮ ಸಮಸ್ಯೆ ಬಗೆಹರಿಯುವವರೆಗೂ ಮುಂದುವರಿಸಲಾಗುವುದು ಎಂದು ಹೇಳಿದರು.

ಸಿ.ಆರ್. ರಾಜಶೇಖರ್, ಮುರಳಿ ಬಾಣಸಂದ್ರ, ಕೆ.ರಾಜಶೇಖರಯ್ಯ, ಆನಂದಯ್ಯ, ನಿಂಗಪ್ಪ, ಚಂದ್ರಯ್ಯ, ಶಂಕರೇಶ್, ರಂಗಮ್ಮ, ಹೊನ್ನಮ್ಮ, ಲಕ್ಷ್ಮಿದೇವಮ್ಮ ಮುಂತಾದವರಿದ್ದರು.