- ರಾಜ್ಯದಲ್ಲಿ 5,76,941 ಕಡತ ಬಾಕಿ, ಹದ್ದುಬಸ್ತು, ಇ-11, ಫೋಡಿ ಯಾವುದೇ ಕೆಲಸ ಆಗುತ್ತಿಲ್ಲ: ಮಂಜು ಆರೋಪ - - -
ಕನ್ನಡಪ್ರಭ ವಾರ್ತೆ ದಾವಣಗೆರೆಪರವಾನಗಿ ಭೂ ಮಾಪಕರ ಕಾಯಂಯಾತಿ, ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮೇ.19ರಂದು ದಾವಣ ಗೆರೆಯಲ್ಲಿ ರಾಜ್ಯಮಟ್ಟದ ಸಾಂಕೇತಿಕ ಮುಷ್ಕರ, ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ನಿರ್ದೇಶಕ ಜಿ.ಪಿ.ಮಂಜು ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ಈ ಹೋರಾಟದಲ್ಲಿ ವಿವಿಧ ಜಿಲ್ಲೆಗಳಿಂದ ಸುಮಾರು 5800ಕ್ಕೂ ಹೆಚ್ಚು ಪರವಾನಗಿ ಭೂ ಮಾಪಕರು ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ಹೈಸ್ಕೂಲ್ ಮೈದಾನದಿಂದ ಹೊರಟು ಶ್ರೀ ಜಯದೇವ ವೃತ್ತದಲ್ಲಿ ಸಾಂಕೇತಿಕವಾಗಿ ಮಾನವ ಸರಪಳಿ ನಿರ್ಮಿಸಿ, ನಂತರ ಹಳೆ ಪಿಬಿ ರಸ್ತೆ ಮಾರ್ಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಜಿಲ್ಲಾಡಳಿತ ಭವನಕ್ಕೆ ತಲುಪಿಸಿ, ಸರ್ಕಾರಕ್ಕೆ ಮನವಿ ಅರ್ಪಿಸಲಾಗುವುದು ಎಂದರು.ರಾಜ್ಯದಲ್ಲಿ 2000ರಲ್ಲಿ ಪರವಾನಗಿ ಭೂ ಮಾಪಕರ ನೇಮಕ ಮಾಡಿಕೊಳ್ಳಲಾಗಿತ್ತು. 2021ರಲ್ಲಿ ಕೆಎಲ್ಆರ್ ನಿಯಮಕ್ಕೆ ತಿದ್ದುಪಡಿ ಮಾಡಿ, ಸರ್ಕಾರಿ ಭೂ ಮಾಪಕರು ನಿರ್ವಹಿಸುವಂತಹ ಎಲ್ಲ ಕೆಲಸ, ಕಾರ್ಯಗಳ ನಿರ್ವಹಣೆಗೆ ಅವಕಾಶ ಮಾಡಿಕೊಡಲಾಗಿತ್ತು. 32 ವರ್ಷದಿಂದ ಕನಿಷ್ಠ ಸೇವಾ ಶುಲ್ಕಕ್ಕೆ ಕಾರ್ಯನಿರ್ವಹಿಸುತ್ತಿರುವ ನಮಗೆ ಕಡತಕ್ಕೆ ಕೇವಲ ₹360 ಮಾತ್ರ ನೀಡುತ್ತಿದ್ದು, ಅಳತೆ ಪೂರ್ಣಗೊಂಡರೆ ಮಾತ್ರ ₹1200 ಗಳನ್ನಷ್ಟೇ ನೀಡಲಾಗುತ್ತದೆ ಎಂದು ಅಳಲು ತೋಡಿಕೊಂಡರು.
ಇಡೀ ಜಗತ್ತಿನಲ್ಲೇ ಸಂಬಳ ಇಲ್ಲದೇ ಸರ್ಕಾರಿ ಕೆಲಸ ಮಾಡುವವರು ಯಾರಾದರೂ ಇದ್ದರೆ ಅದು ಸರ್ಕಾರಿ ಪರವಾನಗಿ ಭೂಮಾಪಕರಾಗಿದ್ದಾರೆ. ಅನೇಕ ವರ್ಷಗಳಿಂದಲೂ ಸೇವೆ ಕಾಯಂಗೊಳಿಸಬೇಕು. ಇಲ್ಲವೇ ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯವ್ಯಾಪಿ ವಿವಿಧ ಹಂತದ ಹೋರಾಟಗಳನ್ನು ನಡೆಸಿದ್ದು, ಅಂತಿಮವಾಗಿ ಫೆಬ್ರವರಿಯಿಂದ ಎಲ್ಲ ಕೆಲಸ ಸ್ಥಗಿತಗೊಳಿಸಿ, ಹೋರಾಟದ ಹಾದಿ ಹಿಡಿದಿದ್ದೇವೆ ಎಂದು ಹೇಳಿದರು.
46 ಜನರ ಅಮಾನತು ಅರ್ಥವಾಗುತ್ತಿಲ್ಲ:
ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದ್ದಂತಹ 46 ಜನರನ್ನು ಅಮಾನತುಪಡಿಸಲಾಗಿದೆ. ನಾವ್ಯಾರೂ ಸರ್ಕಾರಿ ನೌಕರರೇ ಅಲ್ಲದಿದ್ದರೂ, ಯಾವ ಅರ್ಥದಲ್ಲಿ, ಆಧಾರದಲ್ಲಿ ಸರ್ಕಾರ 46 ಜನರನ್ನು ಅಮಾನತುಪಡಿಸಿದೆ ಎಂಬುದೇ ಅರ್ಥವಾಗುತ್ತಿಲ್ಲ. ಕಳೆದ ಫೆಬ್ರವರಿಯಿಂದಲೇ ನಾವು ಕೆಲಸ ನಿಲ್ಲಿಸಿರುವುದರಿಂದ ದಾವಣಗೆರೆ ಜಿಲ್ಲೆಯೊಂದರಲ್ಲೇ 35,587 ಸೇರಿದಂತೆ ರಾಜ್ಯದಲ್ಲಿ 5,76,941 ಕಡತಗಳು ಬಾಕಿ ಇವೆ ಎಂದು ವಿವರಿಸಿದರು.ಹದ್ದುಬಸ್ತು, ಇ-11, ಫೋಡಿ ಯಾವುದೇ ಕೆಲಸಗಳೂ ಆಗುತ್ತಿಲ್ಲ. ಸರ್ಕಾರ ನಮ್ಮ ಸೇವೆ ಕಾಯಂಗೊಳಿಸಬೇಕು. ಸಾಧ್ಯವಾಗದಿದ್ದರೆ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಈ ಎಲ್ಲ ಬೇಡಿಕೆ ಮುಂದಿಟ್ಟುಕೊಂಡು ಇದೀಗ ದಾವಣಗೆರೆಯಲ್ಲಿ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಮಂಜು ಎಚ್ಚರಿಸಿದರು.
ಸಂಘದ ಟಿ.ಎಸ್. ಗುರುಮೂರ್ತಿ, ಎಸ್.ಬಸವರಾಜ, ಶಂಕರಗೌಡ ಪಾಟೀಲ, ಡಿ.ಮಾರಪ್ಪ, ಡಿ.ಆರ್.ಭಾಸ್ಕರ, ಶಿವಾನಂದಯ್ಯ, ವೃಷಭೇಂದ್ರಯ್ಯ, ವಿನಯಕುಮಾರ ಇತರರು ಇದ್ದರು.- - -
-15ಕೆಡಿವಿಜಿ4:ದಾವಣಗೆರೆಯಲ್ಲಿ ಶನಿವಾರ ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ನಿರ್ದೇಶಕ ಜಿ.ಪಿ.ಮಂಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.