ಅಕ್ರಮ ನಿವಾಸಿಗಳನ್ನು ಭೇಟಿಯಾಗಿ ಸಾಂತ್ವನ ಹೇಳಿರುವ ಸಚಿವ ಜಮೀರ್ ಅಹ್ಮದ್ ಖಾನ್ 24 ಗಂಟೆಗಳಲ್ಲಿ ಸಿಹಿ ಸುದ್ದಿ ದೊರೆಯಲಿದೆ ಎಂದು ಭರವಸೆ ನೀಡಿದ್ದಾರೆ. ಆದರೆ, ರಾಜ್ಯದ ಜನರ ತೆರಿಗೆ ಹಣದಿಂದ ನುಸುಳುಕೋರರಿಗೆ ಸೂರು ಕಲ್ಪಿಸುವುದು ಎಷ್ಟು ಸರಿ ಎಂದು ಅರವಿಂದ ಬೆಲ್ಲದ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿ:
ಬೆಂಗಳೂರಿನ ಕೋಗಿಲು ಬಡಾವಣೆಯ ಅಕ್ರಮ ನಿವಾಸಿಗಳಿಗೆ ರಾಜ್ಯ ಸರ್ಕಾರ ಪುನರ್ ವಸತಿ ಕಲ್ಪಿಸಿದರೆ ಬಿಜೆಪಿಯಿಂದ ರಾಜ್ಯಾದ್ಯಂತ ಹೋರಾಟ ಕೈಗೊಳ್ಳಬೇಕಾಗುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಎಚ್ಚರಿಕೆ ನೀಡಿದರು. ಮಹಾರಾಷ್ಟ್ರ ಪೊಲೀಸರು ರಾಜ್ಯದಲ್ಲಿ ಡ್ರಗ್ ಫ್ಯಾಕ್ಟರಿ ಪತ್ತೆ ಹಚ್ಚಿರುವುದನ್ನು ಪ್ರಸ್ತಾಪಿಸಿ, ರಾಜ್ಯದ ಪೊಲೀಸರು, ಗುಪ್ತಚರ ಇಲಾಖೆ ಏನು ಮಾಡುತ್ತಿದೆ ಎಂದು ಇದೇ ವೇಳೆ ಪ್ರಶ್ನಿಸಿದರುಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ನಿವಾಸಿಗಳನ್ನು ಭೇಟಿಯಾಗಿ ಸಾಂತ್ವನ ಹೇಳಿರುವ ಸಚಿವ ಜಮೀರ್ ಅಹ್ಮದ್ ಖಾನ್ 24 ಗಂಟೆಗಳಲ್ಲಿ ಸಿಹಿ ಸುದ್ದಿ ದೊರೆಯಲಿದೆ ಎಂದು ಭರವಸೆ ನೀಡಿದ್ದಾರೆ. ಆದರೆ, ರಾಜ್ಯದ ಜನರ ತೆರಿಗೆ ಹಣದಿಂದ ನುಸುಳುಕೋರರಿಗೆ ಸೂರು ಕಲ್ಪಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಹಾಗೇನಾದರೂ ಆದರೆ, ನಾವು ಕೈಕಟ್ಟಿ ಕೂರುವುದಿಲ್ಲ. ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕೇಂದ್ರದ ನಾಯಕರನ್ನು ಓಲೈಸುವುದನ್ನು ಬಿಡಬೇಕು ಎಂದರು.ಹೈಕಮಾಂಡ್ ಹೇಳಿದೆ ಎಂಬ ಕಾರಣಕ್ಕೆ ಜಮೀರ್ ಇಲ್ಲಸಲ್ಲದ ಭರವಸೆ ನೀಡುತ್ತಿದ್ದಾರೆ. ಅಕ್ರಮ ವಲಸಿಗರ ಬೆನ್ನಿಗೆ ಸರ್ಕಾರ ನಿಂತಿರುವ ಬಗ್ಗೆ ಸಂಶಯವಿದೆ. ಅಕ್ರಮವಾಗಿ ಕೋಗಿಲು ಬಡಾವಣೆ ನಿರ್ಮಾಣ ಮಾಡಿದವರ ಮೇಲೆ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ರಾಜ್ಯ ಸರ್ಕಾರ ಕೇರಳದ ಪರವಾಗಿ ಕೆಲಸ ಮಾಡದೇ, ರಾಜ್ಯದ ಜನರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿನ ಡ್ರಗ್ ಫ್ಯಾಕ್ಟರಿಗಳ ಮೇಲೆ ಅನ್ಯ ರಾಜ್ಯದ ಪೊಲೀಸರು ದಾಳಿ ಮಾಡಿ ಕ್ರಮಕೈಗೊಳ್ಳುತ್ತಿದ್ದಾರೆ. ಹಾಗಿದ್ದರೆ ನಮ್ಮ ಪೊಲೀಸ್, ಗುಪ್ತಚರ ಇಲಾಖೆ ಏನು ಮಾಡುತ್ತಿದೆ. ಗೃಹ ಸಚಿವರು ಇದಕ್ಕೆ ಉತ್ತರ ಕೊಡಬೇಕು ಎಂದ ಅವರು, ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ದಂಧೆಯನ್ನು ಭೇದಿಸಿದ್ದಾರೆ. ನಮ್ಮ ಗೃಹ ಸಚಿವರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ನಮ್ಮ ರಾಜ್ಯವೂ ಪಂಜಾಬ್‌ನಂತೆ ಉಡ್ತಾ ಕರ್ನಾಟಕ ಆಗುತ್ತದೆ ಅಷ್ಟೆ ಎಂದು ಎಚ್ಚರಿಸಿದರು.ಬೇರೆ ಬೇರೆ ಮಂತ್ರಿಗಳ ಆಪ್ತರು ಈ ಡ್ರಗ್ಸ್ ಪ್ರಕರಣದಲ್ಲಿ ಇದ್ದಾರೆ ಎಂಬ ಮಾಹಿತಿ ಇದೆ. ಇದು ತನಿಖೆಯಿಂದಷ್ಟೇ ಹೊರ ಬರಬೇಕಿದೆ ಎಂದ ಅವರು, ಬೆಂಗಳೂರಿನ ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳ ಹುದ್ದೆಯನ್ನು ಹರಾಜು ಹಾಕಲಾಗುತ್ತಿದೆ. ₹ 1.5ರಿಂದ ₹ 2 ಕೋಟಿ ನೀಡಿದವರಿಗಷ್ಟೇ ಕಾರ್ಯಾದೇಶ ನೀಡಲಾಗುತ್ತಿದೆ. ಲಂಚ ಕೊಡಲು ಹಣ ಹೊಂದಿಸುವಲ್ಲಿ ಅಲ್ಲಿನ ಪೊಲೀಸರು ಬ್ಯೂಸಿ ಆಗಿದ್ದು, ಸ್ಥಳೀಯವಾಗಿ ನಡೆಯುತ್ತಿರುವ ದಂಧೆಗಳ ಬಗ್ಗೆ ಅವರಿಗೆ ಮಾಹಿತಿಯೇ ಇಲ್ಲ ಎಂದು ಕಿಡಿಕಾರಿದರು. ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎನ್. ಮಹೇಶ, ಬಿಜೆಪಿ ಮುಖಂಡ ಡಾ. ಕ್ರಾಂತಿಕಿರಣ ಇದ್ದರು.