ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಪರಿಶಿಷ್ಟರಲ್ಲದ ಹಲವು ಜಾತಿಗಳು ಒಳಮೀಸಲಾತಿಗಾಗಿ ನಡೆಯುತ್ತಿರುವ ಸಮೀಕ್ಷೆಯಲ್ಲಿ ತಪ್ಪು ಮಾಹಿತಿ ನೀಡಿ ಪ.ಜಾತಿಗೆ ನುಸುಳುವ ಮೂಲಕ ಮೀಸಲಾತಿ ಲಾಭ ಪಡೆಯಲು ಹುನ್ನಾರ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಚಿವ ಎಚ್.ಆಂಜನೇಯ ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತಾಡಿದ ಅವರು, ಒಳ ಮೀಸಲಾತಿಗಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆಳುವ ಸರ್ಕಾರಗಳು ಭರವಸೆ ನೀಡುತ್ತಾ ಬಂದರೂ ಈವರೆಗೆ ಜಾರಿಗೆ ಯಾವುದೇ ಸರ್ಕಾರ ಮುಂದಾಗಿರಲಿಲ್ಲ, ಬಳಿಕ ಸುಪ್ರೀಂ ಕೋರ್ಟಿನಲ್ಲಿ ಈ ಬಗ್ಗೆ ವಿಚಾರಣೆ ನಡೆದು ೭ ಜನರ ನ್ಯಾಯಪೀಠ ಒಳಮೀಸಲಾತಿ ಜಾರಿ ಮಾಡಬಹುದು ಎಂದು ಆದೇಶ ನೀಡಿದ್ದಾರೆ. ಹಿಂದುಳಿದ ಜನಾಂಗದ ಜಾತಿಯ ಜನಸಂಖ್ಯೆ ಆಧಾರದಲ್ಲಿ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಸುಪ್ರೀಂ ಐತಿಹಾಸಿಕ ಆದೇಶ ನೀಡಿದೆ. ಬಳಿಕ ಕರ್ನಾಟಕ ರಾಜ್ಯದಲ್ಲಿ ಇದರ ಜಾರಿಗಾಗಿ ಜನಸಂಖ್ಯೆ ಬಗ್ಗೆ ಸರಿಯಾದ ಅಂಕಿ ಅಂಶ ಇಲ್ಲದ ಹಿನ್ನೆಲೆಯಲ್ಲಿ ಜನಸಂಖ್ಯೆ ಬಗ್ಗೆ ಸಮೀಕ್ಷೆ ನಡೆಯುತ್ತಿದ್ದು, ಈ ಅವಧಿಯಲ್ಲಿ ಪ್ರತಿ ಕುಟುಂಬವು ಸಮೀಕ್ಷೆಯಲ್ಲಿ ಸರಿಯಾದ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದರು.
ಮೀಸಲಾತಿ ನೀಡಲು ಜನಸಂಖ್ಯೆ ಬಹುಮುಖ್ಯ. ಆದುದರಿಂದ ಸಮೀಕ್ಷೆದಾರರಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ತಮ್ಮ ಹಕ್ಕನ್ನು ಪಡೆಯಲು ಪರಿಶಿಷ್ಟ ಜಾತಿಯ ಜನರು ಮುಂದಾಗಬೇಕು. ಇದೊಂದು ಸದಾವಕಾಶ ದೊರೆತಿದ್ದು ಸರಿಯಾದ ಮಾಹಿತಿಯೊಂದಿಗೆ ಸಮೀಕ್ಷೆ ನಡೆಯಬೇಕಿದೆ. ಅಲ್ಲದೆ ಒಳ ಮೀಸಲಾತಿ ಜಾರಿಗಾಗಿ ನಡೆಯಿತ್ತಿದುವ ಜನಗಣತಿ ಸಮೀಕ್ಷೆಯಲ್ಲಿ ಯಾವುದೇ ಕುಟುಂಬ ಹೊರಗೆ ಉಳಿಯಬಾರದು, ಈ ನಿಟ್ಟಿನಲ್ಲಿ ಸಮೀಕ್ಷೆ ಅವಧಿಯನ್ನು ಇನ್ನಷ್ಟು ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿದರು.ಜೊತೆಗೆ ಒಳ ಮೀಸಲಾತಿ ಜಾರಿಯಾಗುವ ವರೆಗೂ ಹೊಸ ಹುದ್ದೆಗಳ ನೇಮಕಾತಿ ಆಗಬಾರದು ಎಂಬುದು ನಮ್ಮ ಒತ್ತಾಯ. ಈ ಬಗ್ಗೆ ಸರ್ಕಾರಕ್ಕೂ ಮನವಿ ಮಾಡಲಾಗಿದ್ದು, ಮೀಸಲಾತಿ ಜಾರಿಯಾಗುವ ತನಕ ಬಡ್ತಿ ನೀಡುವ ವಿಚಾರವಾಗಿ ಸರ್ಕಾರದೊಂದಿಗೆ ಚರ್ಚಿಸಿ ಈಗಾಗಲೇ ನಿವೃತ್ತಿ ಹಾಗೂ ಬಡ್ತಿ ಹಂತದಲ್ಲಿ ಇರುವ ಅಧಿಕಾರಿಗಳಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಲೋಕಸಭಾ ಸದಸ್ಯ ಚಂದ್ರಪ್ಪ, ಅಹಿಂದ ಹೋರಾಟ ಸಮಿತಿಯ ಮುತ್ತುರಾಜ್, ವಿಜಯ್ ಕುಮಾರ್, ಮುನಿರಾಜ, ಶಂಕರ್ ರಾಜ್, ಶೇಖರಪ್ಪ, ಟಿ.ಆರ್. ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.