- 29 ಸಾವಿರ ಹಳ್ಳಿಯಲ್ಲೂ ದಲಿತರು ಹೋರಾಟಕ್ಕೆ ಸಜ್ಜು: ಚಿತ್ರದುರ್ಗ ಸಂಸದ ಹೇಳಿಕೆ - ದಲಿತರ ಉದ್ಧಾರವಾದರೆ ಓಟು ಬ್ಯಾಂಕ್ ಇಲ್ಲವೆಂಬುದೇ ಕಾಂಗ್ರೆಸ್ಸಿನ ಲೆಕ್ಕಾಚಾರ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಲಿತರ ಉದ್ಧಾರವೇ ಆಗಬಾರದೆಂಬ ಕೆಟ್ಟ ಮನಸ್ಥಿತಿಯು ಕಾಂಗ್ರೆಸ್ಸಿನಲ್ಲಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ, ಮಾಡು ಇಲ್ಲವೇ, ಮಡಿ ಹೋರಾಟ ಆಗಿಯೇ ಆಗುತ್ತದೆ. ಕುಂಟುನೆಪ, ಕೋರ್ಟ್ ನೆಪ ಹೇಳುವುದು ಸರಿಯಲ್ಲ ಎಂದು ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ರಾಜ್ಯ ಸರ್ಕಾರಕ್ಕೆ ಗುಟುರು ಹಾಕಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನಾ ಒಪ್ಪಂದ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲೇಬೇಕು. ಇದು ಸರ್ಕಾರದ ಆದ್ಯ ಕರ್ತವ್ಯ, ಜವಾಬ್ದಾರಿ. ದಲಿತರ ಉದ್ಧಾರವಾದರೆ ಓಟು ಬ್ಯಾಂಕ್ ಇಲ್ಲವೆಂಬುದೇ ಕಾಂಗ್ರೆಸ್ಸಿನ ಲೆಕ್ಕಾಚಾರ. ದಲಿತರು ಅಲ್ಲೇ ಕೊಳತೆ ತೊಳೆಯುತ್ತಾ ಇರಬೇಕೆಂಬುದು ಕಾಂಗ್ರೆಸ್ಸಿನ ನೀಚ ಪ್ರವೃತ್ತಿಯಾಗಿದೆ. ಶೇ.15ರಷ್ಟು ಮೀಸಲಾತಿ ನೀಡುವುದಾದರೆ ಸದಾಶಿವ ಆಯೋಗದ ವರದಿ ಪ್ರಕಾರ ಮೀಸಲಾತಿ ಜಾರಿ ಮಾಡಿ ಎಂದು ಹೇಳಿದರು.
ರಾಜ್ಯಾದ್ಯಂತ 29 ಸಾವಿರ ಹಳ್ಳಿಗಳಲ್ಲಿ ಮಾದಿಗ ಸಮುದಾಯದ ಹೋರಾಟಗಾರರು ಸಜ್ಜಾಗಿದ್ದಾರೆ. ನಮ್ಮ ಹೋರಾಟವಂತೂ ಇಲ್ಲಿಗೆ ನಿಲ್ಲುವುದಿಲ್ಲ. ಚನ್ನಾಗಿ ಮಾತನಾಡಿ ಮೀಸಲಾತಿ ನೀಡದ ನಯವಂಚಕರು ಕಾಂಗ್ರೆಸ್ಸಿನವರು. ಕಪಟ ನಾಟಕದಿಂದ ಜನರನ್ನು ಮರಳು ಮಾಡುವ ಕಲೆ ಸಿದ್ದರಾಮಯ್ಯಗೆ ಇದೆ. ಕುರ್ಚಿ ಮತ್ತು ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿಹೋಗಿದೆ. ಗುತ್ತಿಗೆದಾರರು ತಮಗೆ ಬರಬೇಕಾದ ಹಣಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದೇವೆಂದು ಈಗ ಅದೇ ಗುತ್ತಿಗೆದಾರರೇ ಪಶ್ಚಾತ್ತಾಪಪಡುತ್ತಿದ್ದಾರೆ ಎಂದು ಗೋವಿಂದ ಕಾರಜೋಳ ತಿಳಿಸಿದರು.
ಮಾದಿಗ ಸಂಘಟನೆಗಳ ಒಕ್ಕೂಟದ ಮುಖಂಡರಾದ ಆಲೂರು ನಿಂಗರಾಜ, ಡಾ.ಎಚ್.ವಿಶ್ವನಾಥ, ಎಂ.ಹಾಲೇಶ, ಕಡತಿ ಅಂಜಿನಪ್ಪ, ಸಿ.ಬಸವರಾಜ, ಜಿಗಳಿ ಹಾಲೇಶ, ಶಿರಮಗೊಂಡನಹಳ್ಳಿ ಶಶಿಕುಮಾರ, ನರಗನಹಳ್ಳಿ ಮೈಲಾರಿ, ಶಾಮನೂರು ರಾಜು, ಹರೀಶ ಹೊನ್ನೂರು, ಕೆಟಿಜೆ ನಗರ ಆನಂದ, ಶಿವಕುಮಾರ ತುಳಸಿ, ಚಿಕ್ಕನಹಳ್ಳಿ ನಿಂಗಪ್ಪ, ಮಲ್ಲೇಶ, ಪ್ರಶಾಂತ ಇದ್ದರು.
- - -(ಬಾಕ್ಸ್)
* ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಹೋರಾಟಗಾರರನ್ನೇ ಹತ್ತಿಕ್ಕುತ್ತಿದೆ: ಕಾರಜೋಳ ಕಿಡಿ- ಯಾರಿಗೋ ಕುಮ್ಮಕ್ಕು ಕೊಟ್ಟು ಕೋರ್ಟ್‌ಗೆ ಕಳಿಸಿದ ಸಿದ್ದರಾಮಯ್ಯ: ಆರೋಪ ದಾವಣಗೆರೆ: ದಲಿತರ ಪಾಲಿಗೆ ಕಾಂಗ್ರೆಸ್ ಸರ್ಕಾರ ಶಾಪವಾಗಿದ್ದು, ಒಳ ಮೀಸಲಾತಿ ಹೋರಾಟಗಾರರನ್ನು ಸ್ವತಃ ಸರ್ಕಾರವೇ ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾಸ್ಪತ್ರೆಗೆ ಶನಿವಾರ ರಾತ್ರಿ ಭೇಟಿ ನೀಡಿ, ನಿನ್ನೆಯ ಬಂದ್ ವೇಳೆ ಪೊಲೀಸರು ಬಂಧಿಸಲು ನಡೆಸಿದ ನೂಕಾಟ ತಳ್ಳಾಟದಲ್ಲಿ ಬಿದ್ದು, ಕಾಲು ಮುರಿದುಕೊಂಡಿದ್ದ ಶಿರಮಗೊಂಡನಹಳ್ಳಿ ಗ್ರಾಮದ ರುದ್ರಪ್ಪ ಅವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಒಳ ಮೀಸಲಾತಿಗಾಗಿ 2016ರಲ್ಲಿ ಹುಬ್ಬಳ್ಳಿಯಲ್ಲಿ ಮಾದಿಗ ಸಮುದಾಯದ ಹೋರಾಟಕ್ಕೆ ಬರುತ್ತಿದ್ದ 8 ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದರು. ಆಗ ಮೃತರ ಕುಟುಂಬಗಳಿಗೆ ಜಮೀನು ಕೊಡುತ್ತೇವೆ, ಪರಿಹಾರ ನೀಡುತ್ತೇವೆಂದು ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದರೂ, ಮೃತರ ಕುಟುಂಬಗಳ ಕಡೆ ಮತ್ತೆ ತಿರುಗಿಯೂ ನೋಡಲಿಲ್ಲ ಎಂದು ದೂರಿದರು.
ಬೆಳಗಾವಿಯಲ್ಲಿ ಹೋರಾಟವ ವೇಳೆಯೂ ಹಲವಾರು ಮಾದಿಗ ಬಾಂಧವರು ಗಾಯಗೊಂಡಿದ್ದರು. ಮಾದಿಗ ಸಮುದಾಯದ ಹೋರಾಟಗಾರರು, ಒಳ ಮೀಸಲಾತಿ ಹೋರಾಟಗಾರರನ್ನು ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಲೇ ಇದೆ. 35 ವರ್ಷದಿಂದಲೂ ಒಳ ಮೀಸಲಾತಿ ಹೋರಾಟ ನಡೆಯುತ್ತಿದ್ದು, ಈ ಅವಧಿಯಲ್ಲಿ ಮೂರೂ ಆಯೋಗಗಳು ವರದಿ ನೀಡಿವೆ. ನ್ಯಾ.ಸದಾಶಿವ ಆಯೋಗವನ್ನೇ ಮೂಲೆಗುಂಪು ಮಾಡಿದ್ದೀರಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ನ್ಯಾ.ನಾಗಮೋಹನ ದಾಸ್ ಆಯೋಗ ವರದಿ ನೀಡಿತ್ತು. ಅದನ್ನು ಒಪ್ಪಿ, ಮೀಸಲಾತಿ ಹೆಚ್ಚಿಸುವ ಮೂಲಕ ಎರಡೂ ಸದನಗಳಲ್ಲಿ ನಾವು ಒಪ್ಪಿಗೆ ಪಡೆದಿದ್ದೆವು. 2022ರಿಂದಲೇ ನಾವು ಅದನ್ನು ಜಾರಿಗೊಳಿಸಿದ್ದೆವು. ಆದರೆ, ಇದೇ ಸಿದ್ದರಾಮಯ್ಯ ದಲಿತರಿಗೆ ಅನ್ಯಾಯ ಮಾಡಲು ಯಾರು ಯಾರಿಗೋ ಕುಮ್ಮಕ್ಕು ಕೊಟ್ಟು, ಕೋರ್ಟ್‌ಗಳಿಗೆ ಕಳಿಸಿದರು. ಕೋರ್ಟ್‌ಗೆ ಅಡ್ವೋಕೇಟ್ ಜನರಲ್, ಸರ್ಕಾರದ ಪರ ಯಾವುದೇ ವಕೀಲರೂ ಎಂದು ಆರೋಪಿಸಿದರು.
ನ್ಯಾಯಾಲಯದಲ್ಲಿ ಈಗ ಸ್ಟೇ ಇರುವುದರಿಂದ ಒಳಮೀಸಲಾತಿ ಮಾಡುವುದಿಲ್ಲ ಎಂದು ಇದೇ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅಧಿಕಾರಕ್ಕೆ ಬಂದು 3 ವರ್ಷವಾದರೂ ಒಳ ಮೀಸಲಾತಿ ಕೊಡುವ ಉದ್ದೇಶ ಸಿದ್ದರಾಮಯ್ಯಗೆ ಇಲ್ಲ. ಕಾಂಗ್ರೆಸ್ ಆರ್ಥಿಕವಾಗಿ ದುರ್ಬಲವಾಗಿದೆ. ಹುದ್ದೆಗಳನ್ನು ಭರ್ತಿ ಮಾಡಿದರೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡು ಇಲ್ಲದಂತಾಗಿದೆ. ನಮ್ಮ ಸರ್ಕಾರವಿದ್ದಾಗ ಮಾಧುಸ್ವಾಮಿ ಸಂಪುಟ ಉಪ ಸಮಿತಿ ವರದಿ ನೀಡಿತ್ತು. ಅದನ್ನಾದರೂ ಅನುಷ್ಟಾನ ಮಾಡಬೇಕಿತ್ತು ಎಂದು ಅವರು ಹೇಳಿದರು.- - -
(ಫೋಟೋ: ಗೋವಿಂದ ಕಾರಜೋಳ)