- ಜೂ.28ರ ನಂತರ ಹಾಲಿ-ಮಾಜಿ ಶಾಸಕರ ಮನೆ ಮುಂದೆ ಕಪ್ಪು ಬಾವುಟ ಸಮೇತ ಪ್ರತಿಭಟನೆ: ರವಿಕುಮಾರ ಬಲ್ಲೂರು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನೂರಾರು ವರ್ಷಗಳ ಹಿನ್ನೆಲೆ ಹೊಂದಿರುವ ಸೇವಾ ಮನೋಭಾವದ ವಿದ್ಯುತ್ ಕ್ಷೇತ್ರ ಖಾಸಗೀಕರಣ ಮಾಡಲು ಹೊರಟಿರುವುದನ್ನು ಕೈ ಬಿಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ರಾಜ್ಯ ರೈತ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಜೂ.18ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಲಾಗುವುದು ಎಂದು ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲೆಯ ವಿವಿಧ ತಾಲೂಕು, ಗ್ರಾಮಗಳಿಂದ ಅಪಾರ ಸಂಖ್ಯೆಯ ರೈತರು ದಾವಣಗೆರೆಗೆ ಬಂದು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸೇವಾ ಉದ್ದೇಶದಿಂದ ಸ್ಥಾಪಿತ ವಿದ್ಯುತ್ ಕ್ಷೇತ್ರವನ್ನು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಖಾಸಗೀಕರಣ ಮಾಡಿದರೆ ಮುಂದೆ ಎದುರಾಗಲಿರುವ ಅಪಾಯ, ಸಂಕಷ್ಟ, ಸಮಸ್ಯೆಗಳನ್ನು ಸರ್ಕಾರ ಅರಿಯಲಿ ಎಂದರು.

ರಾಜ್ಯದಲ್ಲಿ 45 ಲಕ್ಷ ವಿದ್ಯುತ್ ಪಂಪ್‌ಸೆಟ್ ಇದ್ದು, ಬಂಗಾರಪ್ಪ ಸರ್ಕಾರದಿಂದ ಈವರೆಗೆ ಅವುಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿತ್ತು. ಇದೀಗ ವಿದ್ಯುತ್ ಖಾಸಗೀಕರಣಗೊಂಡರೆ ಮೊಬೈಲ್, ಟೀವಿಗಳಿಗೆ ಕರೆನ್ಸಿ ಹಾಕಿ, ಬಳಸುವಂತೆ ಕೃಷಿ ಪಂಪ್‌ ಸೆಟ್‌ಗೂ ಅದೇ ವ್ಯವಸ್ಥೆ ತರುವ ಹುನ್ನಾರ ನಡೆದಿದೆ. ರೈತರು ವಿದ್ಯುತ್ ಬಿಲ್ ಪಾವತಿಸಿ, ಬೆಳೆ ಬೆಳೆಯಲು ಸಾಧ್ಯವೇ ಇಲ್ಲ. ಆಗ ರೈತರು ಅಸಹಾಯಕರಾಗಿ ಕೃಷಿಯಿಂದ ವಿಮುಖರಾಗಲಿದ್ದಾರೆ ಎಂದರು.


ನಷ್ಟಕ್ಕೀಡಾದ ರೈತರ ಭೂಮಿಯನ್ನು ಕೊಡಲು ಸರ್ಕಾರ ದೊಡ್ಡ ದೊಡ್ಡ ಕಂಪನಿಗಳನ್ನು ತಂದು ನಿಲ್ಲಿಸುತ್ತದೆ. ಬಂಡವಾಳಶಾಹಿಗಳಿಗೆ ಭೂಮಿ ನೀಡಿದರೆ ರಸ್ತೆ, ವಿದ್ಯುತ್, ನೀರು ಸೇರಿದಂತೆ ಮೂಲ ಸೌಕರ್ಯ ತುರ್ತಾಗಿ ಒದಗಿಸುವ ಕೆಲಸ ಸರ್ಕಾರ ಮಾಡುತ್ತವೆ. ಯಾವುದೇ ಪರ್ಷಗಳಿಗೆ ಚುನಾವಣೆ ವೇಳೆ ನೂರಾರು, ಸಾವಿರಾರು ಕೋಟಿ ಪಕ್ಷ ನಿಧಿ ಕೊಡುತ್ತಾರೆಂಬ ಒಂದೇ ಕಾರಣಕ್ಕೆ ದೇಶಕ್ಕೆ ಅನ್ನ ನೀಡುವ ರೈತರನ್ನು ಬೀದಿಗೆ ತರುವ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ. 148 ಕೋಟಿ ಜನರ ವಿಶ್ವಾಸ ಕಳೆದುಕೊಂಡರೂ ಚಿಂತೆ ಇಲ್ಲ, 137 ಶ್ರೀಮಂತ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಸರ್ಕಾರಗಳದ್ದಾಗಿದೆ ಎಂದು ಅವರು ಕಿಡಿಕಾರಿದರು.

ಕುಣಿಗಲ್ ಶಾಸಕರೊಬ್ಬರನ್ನು ಹೊರತುಪಡಿಸಿದರೆ, ಆಡಳಿತ-ವಿಪಕ್ಷಗಳ ಯಾವೊಬ್ಬ ಸದಸ್ಯ, ಪರಿಷತ್ ಸದಸ್ಯ ಸಹ ವಿದ್ಯುತ್ ಖಾಸಗೀಕರಣಕ್ಕೆ ವಿರೋಧಪಡಿಸಿಲ್ಲ. ಮಾಯಕೊಂಡ, ಚನ್ನಗಿರಿ ಸೇರಿದಂತೆ ಜಿಲ್ಲೆಯ ಶಾಸಕರೂ ವಿದ್ಯುತ್ ಖಾಸಗೀಕರಣಕ್ಕೆ ಆಕ್ಷೇಪಣೆ ಸಲ್ಲಿಸಲಿ. ಒಂದುವೇಳೆ ಕಾಂಗ್ರೆಸ್- ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಹಾಲಿ-ಮಾಜಿ ಸಚಿವರು ವಿದ್ಯುತ್ ಖಾಸಗೀಕರಣದ ವಿರುದ್ಧ ಆಕ್ಷೇಪಣೆ ಸಲ್ಲಿಸದಿದ್ದರೆ ಅಂತಹವರ ಮನೆ ಮುಂದೆ ಕಪ್ಪು ಬಾವುಟ ಪ್ರದರ್ಶಿಸಿ, ರೈತರು ರಾಜ್ಯವ್ಯಾಪಿ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.

ಒಕ್ಕೂಟದ ಮುಖಂಡ ನ್ಯಾಮತಿ ಕರಿಬಸಪ್ಪ ಗೌಡ ಮಾತನಾಡಿ, ವಿದ್ಯುತ್ ಖಾಸಗೀಕರಣದ ಅವಶ್ಯಕತೆಯೇ ಇಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ರೈತರು, ಜನರ ಬದುಕನ್ನು ಅವನತಿಗೆ ತಳ್ಳುವ ಕೆಲಸ ಮಾಡಬಾರದು. ಕೆಇಆರ್‌ಸಿ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಿದ್ದು, ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಆಕ್ಷೇಪಣೆ ಸಲ್ಲಿಸಲಿ. ರಾಜ್ಯವ್ಯಾಪಿ ರೈತ ಸಂಘಟನೆಗಳು ಹೋರಾಟ ನಡೆಸಲು ಸಜ್ಜಾಗಿದ್ದು, ಆಳುವ ಸರ್ಕಾರಗಳು ರೈತರ ಬೆನ್ನಿಗೆ ನಿಲ್ಲುವಂತ ರೈತ ಮತ್ತು ಕೃಷಿ ಪರ ನೀತಿ ತರಬೇಕೆ ಹೊರತು, ಒಕ್ಕಲುತನಕ್ಕೆ ಮಾರಕ ಆಗುವಂತಹ ಕೆಲಸಗಳನ್ನು ಮಾಡಬಾರದು ಎಂದರು.

ಒಕ್ಕೂಟದ ಮುಖಂಡರಾದ ನಿಟುವಳ್ಳಿ ಅಂಜಿನಪ್ಪ ಪೂಜಾರ, ಹೆಬ್ಬಾಳ್ ರಾಜಯೋಗಿ, ಬಲ್ಲೂರು ಪರಶುರಾಮ ರೆಡ್ಡಿ, ಹೊನ್ನಾಳಿ ಕೆ.ಸಿ.ಬಸಪ್ಪ ಮೇಷ್ಟ್ರು, ಸೋಮಗೊಂಡು, ಬಾಡದ ಹನುಮಂತಪ್ಪ ಇತರರು ಇದ್ದರು.

- - -

(ಬಾಕ್ಸ್‌)

* ರೈತರಷ್ಟೇ ಅಲ್ಲ, ಎಲ್ಲ ಗ್ರಾಹಕರಿಗೂ ಅನ್ಯಾಯ ರೈತರಿಗಷ್ಟೇ ವಿದ್ಯುತ್ ಖಾಸಗೀಕರಣದಿಂದ ಅನ್ಯಾಯ ಆಗುವುದಿಲ್ಲ. ಗೃಹ ಬಳಕೆದಾರರು, ಸಣ್ಣ ಸಣ್ಣ ಕೈಗಾರಿಕೆಗಳು, ಸಣ್ಣ ಉದ್ದಿಮೆಗಳು, ಹೋಟೆಲ್ ಮಾಲೀಕರು ಹೀಗೆ ವಿದ್ಯುತ್ ಬಳಕೆ ಮಾಡುವ ಪ್ರತಿಯೊಬ್ಬರಿಗೂ ಸಂಕಷ್ಟ ತಪ್ಪಿದ್ದಲ್ಲ. ಸರ್ಕಾರ ವಿದ್ಯುತ್ ಖಾಸಗೀಕರಣಕ್ಕೆ ಆಕ್ಷೇಪಣೆ, ತಕರಾರು ಸಲ್ಲಿಸಲು ಜೂ.23ರವರೆಗೆ ಕಾಲಾವಕಾಶ ನೀಡಿದೆ. ಆಕ್ಷೇಪಣೆ ಸಲ್ಲಿಸದಿದ್ದರೆ ಜೂ.26ರಂದು ವಿದ್ಯುತ್ ಖಾಸಗೀಕರಣಕ್ಕೆ ಅನುಮೋದನೆ ನೀಡಲು ಹೊರಟಿದೆ. ವಾಸ್ತವ ಅರಿತು ಸರ್ಕಾರವು ವಿದ್ಯುತ್ ಖಾಸಗೀಕರಣ ಉದ್ದೇಶ ಕೈಬಿಡಲಿ ಎಂದು ರವಿಕುಮಾರ ಬಲ್ಲೂರು ತಾಕೀತು ಮಾಡಿದರು.

- - -

(ಕೋಟ್‌) ವಿದ್ಯುತ್ ಖಾಸಗೀಕರಣವಾದರೆ ಆಹಾರ ಭದ್ರತೆಗೆ ಕಂಟಕ, ಅಪಾಯ ತಪ್ಪಿದ್ದಲ್ಲ. ಈಗಾಗಲೇ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ನೇತೃತ್ವದಲ್ಲಿ ಕೆಇಆರ್‌ಸಿಗೆ ನಿವೇದನೆ ಸಲ್ಲಿಸಲಾಗಿದೆ. ಅದನ್ನೂ ಮೀರಿ ಸರ್ಕಾರ ವಿದ್ಯುತ್ ಖಾಸಗೀಕರಣಕ್ಕೆ ಮುಂದಾದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು. - ನ್ಯಾಮತಿ ಕರಿಬಸಪ್ಪ ಗೌಡ, ರೈತ ಮುಖಂಡ.

- - -

-16ಕೆಡಿವಿಜಿ1: ದಾವಣಗೆರೆಯಲ್ಲಿ ಮಂಗಳವಾರ ರಾಜ್ಯ ರೈತ ಸಂಘಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.