ಮಂಚೇನಹಳ್ಳಿ ಶೂಟೌಟ್ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ಹೋರಾಟ: ಎಸ್.ಆರ್.ಹಿರೇಮಠ್

| Published : May 09 2025, 12:33 AM IST

ಮಂಚೇನಹಳ್ಳಿ ಶೂಟೌಟ್ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ಹೋರಾಟ: ಎಸ್.ಆರ್.ಹಿರೇಮಠ್
Share this Article
  • FB
  • TW
  • Linkdin
  • Email

ಸಾರಾಂಶ

ಶೂಟೌಟ್ ಪ್ರಕರಣಗಳು ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ನಡೆಯುತ್ತಿತ್ತು. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಗೂ ಇದು ವಕ್ಕರಿಸಿರುವುದು ಅತ್ಯಂತ ದುರಾದೃಷ್ಟಕರವಾದುದು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಕನಗಾನಕೊಪ್ಪ ಗ್ರಾಮದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯಲು ಮೂಲ ಕಾರಣ ಕಂದಾಯ ಇಲಾಖೆ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ವೈಫಲ್ಯವಾಗಿದೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರೈತನ ಮೇಲೆ ಶೂಟೌಟ್ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ಪರಿವರ್ತನಾ ಸಮುದಾಯದ ಸ್ಥಾಪಕ ಎಸ್.ಆರ್.ಹಿರೇಮಠ್ ತಿಳಿಸಿದರು.

ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಇಂತಹ ಶೂಟೌಟ್ ಪ್ರಕರಣಗಳು ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ನಡೆಯುತ್ತಿತ್ತು. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಗೂ ಇದು ವಕ್ಕರಿಸಿರುವುದು ಅತ್ಯಂತ ದುರಾದೃಷ್ಟಕರವಾದುದು. ಕಾನೂನು ಕೈಗೆ ತೆಗದುಕೊಂಡು ಅಕ್ರಮವಾಗಿ ಗಣಿಗಾರಿಕೆಗೆ ಪ್ರಯತ್ನಿಸಿರುವುದು ಮತ್ತು ಇದಕ್ಕೆ ಅಡ್ಡಿಬಂದ ರೈತನ ಮೇಲೆ ಶೂಟೌಟ್ ಮಾಡಿ ಗಾಯಗೊಳಿಸಿರುವುದು ರಾಜ್ಯ ಮತ್ತು ದೇಶದಲ್ಲಿ ಸುದ್ದಿಯಾಗಬೇಕು.

ಯಾವ ಕಾಣದ ಶಕ್ತಿಗಳು ಈ ಪ್ರಕರಣದಲ್ಲಿ ಭಾಗಿಯಾಗಿವೆಯೋ ಅವರಿಗೆ ಶಿಕ್ಷ ಯಾಗಬೇಕು. ಪ್ರಕರಣವನ್ನು ಆಮೂಲಾಗ್ರವಾಗಿ ತನಿಖೆ ನಡೆಸಿ, ನಿರ್ದಿಷ್ಟ ಆರೋಪದಡಿ ಬಂದಿಖಾನೆಯಲ್ಲಿರುವ ಆರೋಪಿ ಸಕಲೇಶ್ ಕುಮಾರ್‌ಗೆ ಯಾವ ಮಟ್ಟದ ಶಿಕ್ಷೆ ಆಗುತ್ತದೆಯೋ ಅದೇ ಮಟ್ಟದ ಶಿಕ್ಷೆ ಆತನಿಗೆ ಕಾನೂನಿನ ಅಡಿಯಲ್ಲಿ ಅವಕಾಶ ಮಾಡಿಕೊಟ್ಟ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆಯ ನೌಕರರಿಗೂ ಆಗಬೇಕು. ಇದರೊಂದಿಗೆ ಗಣಿಗಾರಿಕೆಗೆ ಅನುಮತಿ ನೀಡಲು ಆದೇಶಿಸಿರುವ ಕಾಣದ ಕೈ ಯಾರೆಂದು ಪತ್ತೆ ಮಾಡಿ ಅವರಿಗೂ ಉಗರವಾದ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ಇದು ಕೇವಲ ಇಲ್ಲಿಗೆ ಅಲ್ಲ ಎಲ್ಲೆಲ್ಲಿ ನಡೆಯುತ್ತಿದೆಯೋ ಅಲ್ಲಿ ಸಂವಿಧಾನ ನಮ್ಮನ್ನು ಮಾಲಿಕರನ್ನಾಗಿ ಮಾಡಿದೆಯೋ ನಾವೇ ಹೋರಾಟ ಮಾಡಬೇಕು. ನಮ್ಮ ಸೇವಕರಾದ ಸಂಸದರು, ಶಾಸಕರು ಮತ್ತು ಸಚಿವರು ಇವನ್ನು ತಡೆಯುವಂತ ಶಕ್ತಿ ಪಡೆದಿದ್ದರೂ ನಿಲ್ಲಿಸದೇ ಹಣ ಸೇರಿದಂತೆ ಯಾವುದೋ ಲಾಭಿಗೆ ಮಣಿದು ದುಷ್ಟರ ಕೆಲಸ ಮಾಡುತ್ತಿದ್ದಾರೆ. ಇದನ್ನು ತಡೆಯುವ ಶಕ್ತಿ ಪಡೆಯಲು ನಾವು ಸಂಘಟಿತರಾಗಿ ಹೋರಾಡಬೇಕು. ನನ್ನ ನಿರಂತರ ಹೋರಾಟ ಏನಿದ್ದರೂ ಅಧಿಕೃತವಾಗಿ ದಾಖಲೆಗಳು ಇದ್ದರೆ ಮಾತ್ರ ದಾಖಲೆಗಳನ್ನು ಹಿಡಿದುಕೊಂಡು ಹೋರಾಟ ಮಾಡುತ್ತೇನೆ.

ಮಾಡಿದ ಹೋರಾಟದಲ್ಲಿ ಇಲ್ಲಿಯವರೆಗೂ ನಾನು ಹಿನ್ನಡೆ ಪಡೆದಿಲ್ಲ. ನನ್ನ ಹೋರಾಟದ ಫಲವಾಗಿ ರಾಜ್ಯದಲ್ಲಿ ಗಣಿ ಧಣಿ ಎನಿಸಿಕೊಂಡಿದ್ದ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಪ್ರಕರಣ ದಾಖಲಾದ 16 ವರ್ಷಗಳ ನಂತರ ಜೈಲು ಸೇರುವಂತಾಯಿತು. ಅವನಿಗೆ ಬಂದ ಗತಿಯೇ ಇಲ್ಲಿ ಶೂಟ್ ಔಟ್ ಪ್ರಕರಣ ನಡೆಸಿರುವ ಅಖಿಲೇಶ್ ಮತ್ತು ಘಟನೆಯ ಹಿಂದಿರುವ ಕಾಣದ ಕೈ ಗೂ ಬರಬೇಕು ಎಂದರು.

ಸುಪ್ರೀಂ ಕೋರ್ಟ್ ತನ್ನ ಪರಮಾಧಿಕಾರವಾದ ಕಲಂ143 ಬಳಸಿ 51 ಗಣಿಗಾರಿಕೆಗಳನ್ನು ಮುಚ್ಚಿಸಿದೆ. ಇದೇ ರೀತಿ ನಮ್ಮ ಜನ, ಪಶು, ಪಕ್ಷಿ, ಪ್ರಾಣಿಗಳಿಗೆ ಆಹಾರ, ನೀರು, ಮೇವು, ನರಳು ನೀಡುವ ಜಾಗೆಗಳಲ್ಲಿ ಗಣಿಗಾರಿಕೆ ಮಾಡುತ್ತಿರುವ ಎಲ್ಲಾ ಗಣಿಗಾರಿಕೆಗಳನ್ನು ಮುಚ್ಚಿ ನಮ್ಮ ಪರಿಸರ ನಾಶವಾಗದಂತೆ ಉಳಿಸಲು ಆದೇಶಿಸಬೇಕು ಎಂದು ಮನವಿ ಮಾಡಿದರು. ಮಂಚೇನಹಳ್ಳಿ ತಾಲೂಕು ರೈತ ಮುಖಂಡ ಹಾಗೂ ವಕೀಲ ಎನ್,ಆರ್.ಲಕ್ಷ್ಮೀನಾರಾಯಣ ಮಾತನಾಡಿ, ಮಂಚೇನಹಳ್ಳಿಯ ಕನಕನ ಕೊಪ್ಪ ಪ್ರಕರಣದ ಪ್ರತ್ಯಕ್ಷ ಸಾಕ್ಷಿ ನಾನು ನನ್ನ ಎದೆಗೂ ಸಕಲೇಶ್ ಪಿಸ್ತೂಲು ಗುರಿ ಇಟ್ಟು ಹೆದರಿಸಿದ್ದನು. ಮಾತುಕತೆ ಆಡಿ ಬಗೆಹರಿಸೋಣ. ಇಂತಹ ದುಂಡಾವರ್ತಿ ಬೇಡ ಎಂದರೆ ನನ್ನ ಮಾತೆ ಅವನು ಕೇಳಲಿಲ್ಲ. ನಾವು ನಿರಂತರವಾಗಿ ಪ್ರಕೃತಿಯ ಹಾಳು ಮಾಡುವವರನ್ನು ವಿರೋಧಿಸುತ್ತಾ ಬಂದಿದ್ದೇವೆ. ಮಂಚೇನಹಳ್ಳಿ ವ್ಯಾಪ್ತಿಯಲ್ಲಿ ಮುಂದೆ ಈ ತರಹ ಘಟನೆ ನಡೆದಂತೆ ರೈತ ಸಂಘ ಹೋರಾಟ ಮಾಡುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಪರಿವರ್ತನಾ ಸಮುದಾಯದ ಸಿ.ಎನ್.ದೀಪಕ್, ರೈತ ಸಂಘದ ರಾಜಣ್ಣ , ಲೋಕೇಶ್ ಗೌಡ, ಕೆ.ಎನ್.ನರಸಿಂಹಮೂರ್ತಿ ಇದ್ದರು.ಸಿಕೆಬಿ-1 ಸುದ್ದಿಗೋಷ್ಟಿಯಲ್ಲಿ ಎಸ್.ಆರ್.ಹಿರೇಮಠ್ ಮಾತನಾಡಿದರು