ಅನ್ಯಾಯಕ್ಕೆ ಒಳಗಾದವರ ಪರ ಹೋರಾಟ ಅನಿವಾರ್ಯ

| Published : Sep 29 2025, 01:03 AM IST

ಸಾರಾಂಶ

ಯಾರು ಸಮಾಜದಲ್ಲಿ ಶೋಷಣೆಗೆ ಒಳಗಾಗಿದ್ದಾರೋ, ಅನ್ಯಾಯಕ್ಕೆ ಒಳಗಾಗಿದ್ದಾರೋ ಅಂತಹವರ ಪರವಾಗಿ ಹೋರಾಟ ರೂಪಿಸುವ ಅನಿವಾರ್ಯತೆ ಇಂದು ಎದುರಾಗಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.

ಭದ್ರಾವತಿ: ಯಾರು ಸಮಾಜದಲ್ಲಿ ಶೋಷಣೆಗೆ ಒಳಗಾಗಿದ್ದಾರೋ, ಅನ್ಯಾಯಕ್ಕೆ ಒಳಗಾಗಿದ್ದಾರೋ ಅಂತಹವರ ಪರವಾಗಿ ಹೋರಾಟ ರೂಪಿಸುವ ಅನಿವಾರ್ಯತೆ ಇಂದು ಎದುರಾಗಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.

ಭಾನುವಾರ ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ದಲಿತ ಸಮನ್ವಯ ಸಮಿತಿ ಕೇಂದ್ರ ಕಾರ್ಯಾಲಯ ಉದ್ಘಾಟನೆ ಹಾಗೂ ರಾಜ್ಯ ಪದಾಧಿಕಾರಿಗಳ ಪದಗ್ರಹಣ ಮತ್ತು ನಾಮಫಲಕ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಕೇವಲ ದಲಿತ ಸಮುದಾಯದವರು ಮಾತ್ರ ಶೋಷಣೆಗೆ ಒಳಗಾಗಿಲ್ಲ. ಎಲ್ಲಾ ಧರ್ಮ, ಜಾತಿ, ಸಮುದಾಯಗಳಲ್ಲೂ ಶೋಷಣೆ, ಅನ್ಯಾಯಕ್ಕೆ ಒಳಗಾದವರು ಇದ್ದಾರೆ. ಇಂತಹವರ ಪರವಾಗಿ ಹೋರಾಟ ರೂಪಿಸುವ ಮೂಲಕ ಅವರಿಗೆ ನ್ಯಾಯ ಕಲ್ಪಿಸಿ ಕೊಡಬೇಕಾಗಿದೆ ಎಂದರು. ಪ್ರಸ್ತುತ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ದಲಿತ ಸಮನ್ವಯ ಸಮಿತಿ ಜಗಜ್ಯೋತಿ ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಪ್ರೊ.ಬಿ.ಕೃಷ್ಣಪ್ಪನವರ ಆಶಯಗಳಂತೆ ಮುನ್ನಡೆಯುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಎಲ್ಲಾ ಧರ್ಮ, ಜಾತಿ, ಸಮುದಾಯಗಳ ಶೋಷಿತರ ಧ್ವನಿಯಾಗಿ ಮಾನವ ಧರ್ಮ ಎತ್ತಿ ಹಿಡಿಯುವಂತಾಗಲಿ. ಇಂತಹ ಕಾರ್ಯಕ್ಕೆ ನಾನು ಹಾಗೂ ನನ್ನ ಕುಟುಂಬ ವರ್ಗದವರು ಸಂಪೂರ್ಣವಾಗಿ ಸಹಕಾರ ನೀಡಲು ಬದ್ಧರಾಗಿದ್ದೇವೆ ಎಂದರು. ನಗರಸಭೆ ಹಿರಿಯ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಈ ಭೂಮಿ ಮೇಲೆ ಇರುವುದು ಒಂದೇ ಧರ್ಮ. ಮಾನವರಾದ ನಾವೆಲ್ಲರೂ ಒಂದೇ. ಆದರೆ ಸಮಾಜದಲ್ಲಿ ಧರ್ಮ, ಜಾತಿ ಮತ್ತು ಸಮುದಾಯಗಳ ನಡುವೆ ವಿಷಬೀಜ ಬಿತ್ತುವ ಮೂಲಕ ಸಂಘರ್ಷ ಉಂಟು ಮಾಡಲಾಗುತ್ತಿದೆ. ಇದರ ವಿರುದ್ಧ ಹೋರಾಟ ನಡೆಸುವುದು ಅಗತ್ಯವಾಗಿದೆ ಎಂದರು. ಇದೇ ವೇಳೆ ಶಿಕ್ಷಕ, ಜಾನಪದ ಕಲಾವಿದ ಎಂ.ಆರ್.ರೇವಣಪ್ಪ ಅವರಿಗೆ `ಕರ್ನಾಟಕ ಜಾನಪದ ರತ್ನ'''''''' ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಿಎಸ್‌ಎಸ್ ಸಂಸ್ಥಾಪಕ ಸದಸ್ಯ, ನಿವೃತ್ತ ಮುಖ್ಯ ಶಿಕ್ಷಕ ಡಿ.ಕರಿಯಪ್ಪ, ಶಿಕ್ಷಕರಾದ ಎಚ್.ಎನ್.ನರಸಿಂಹಮೂರ್ತಿ, ಸಿ.ಚನ್ನಪ್ಪ, ರಾಧಾಬಾಯಿ ಹಾಜ್ಯನಾಯ್ಕ್, ಶಾರದ ಪ್ರೇಮ್ ಕುಮಾರ್, ಎಸ್.ಭಾರತಿ ಅವರನ್ನು ಸನ್ಮಾನಿಸಲಾಯಿತು.

ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ವಿ.ವಿನೋದ್ ಅಧ್ಯಕ್ಷತೆ ವಹಿಸಿದ್ದರು.

ನಗರಸಭೆ ಉಪಾಧ್ಯಕ್ಷ ಎಂ.ಮಣಿ ಎಎನ್‌ಎಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ರಾಜ್ಯ ಪದಾಧಿಕಾರಿ ಭಾರತಿ ಗೋವಿಂದಸ್ವಾಮಿ, ಗಂಗಾಮತಸ್ಥ ಸಮಾಜದ ಪ್ರಧಾನ ಕಾರ್ಯದರ್ಶಿ ಬಿ.ಆರ್.ಯಲ್ಲಪ್ಪ, ಶಿಕ್ಷಕರ ಸಂಘದ ಮುಖಂಡ ಬಸವಂತರಾವ್ ದಾಳೆ, ಕೆಡಿಪಿ ಸದಸ್ಯ ರಾಜೇಂದ್ರ, ಸಮನ್ವಯ ಸಮಿತಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಇತರರಿದ್ದರು. ಕಾರ್ಯಕ್ರಮಕ್ಕೂ ಮೊದಲು ನಗರದ ಬಿ.ಎಚ್.ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ಪ್ರತಿಮೆ ಮಾಲಾರ್ಪಣೆ ಮಾಡಲಾಯಿತು. ಹೊಸನಗರ ಮಾದಾಪುರ ಶ್ರೀ ಶನಿಪರಮೇಶ್ವರ ಯುವಕರ ಸಂಘದ ಅಂತಾರಾಷ್ಟ್ರೀಯ ಜಾನಪದ ಕಲಾವಿದರು, ಗಿರೀಶ್‌ಕುಮಾರ್ ಮತ್ತು ಸಂಗಡಿಗರಿಂದ ಡೊಳ್ಳು ಕುಣಿತ, ಸುಗ್ಗಿ ಕುಣಿತ ಮತ್ತು ಕೋಲಾಟದೊಂದಿಗೆ ಮೆರವಣಿಗೆ ನಡೆಯಿತು.