ಸುಟ್ಟ ಪರಿವರ್ತಕ ಬದಲಿಸದಿದ್ದರೆ ಹೋರಾಟ

| Published : Sep 19 2025, 01:00 AM IST

ಸಾರಾಂಶ

ಹಿರಿಯೂರು ನಗರದ ಬೆಸ್ಕಾಂ ಕಚೇರಿ ಮುಂಭಾಗ ರೈತರ ಸುಟ್ಟ ಪರಿವರ್ತಕಗಳನ್ನು ಬದಲಾಯಿಸುವಲ್ಲಿ ಬೆಸ್ಕಾಂ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ರೈತರ ಸುಟ್ಟ ಪರಿವರ್ತಕಗಳನ್ನು ಬದಲಾಯಿಸುವಲ್ಲಿ ಬೆಸ್ಕಾo ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಆರೋಪಿಸಲಾಯಿತು.

ನಗರದ ಬೆಸ್ಕಾಂ ಕಚೇರಿಗೆ ರೈತ ಸಂಘದ ಮುಖಂಡರು ಮನವಿ ಸಲ್ಲಿಸಿದ ನಂತರ ಸಂಘದ ರಾಜ್ಯ ವಿಭಾಗೀಯ ಅಧ್ಯಕ್ಷ ಕೆ.ಸಿ.ಹೊರಕೇರಪ್ಪ ಮಾತನಾಡಿ, ತಾಲೂಕಿನಲ್ಲಿ ರೈತರ ಜಮೀನುಗಳಿಗೆ ಅಳವಡಿಸಿರುವ ಪರಿವರ್ತಕಗಳು ತಾಂತ್ರಿಕ ತೊಂದರೆಯಿಂದಲೋ ಅಥವಾ ಮತ್ತ್ಯಾವುದೋ ಕಾರಣಕ್ಕೆ ಸುಟ್ಟು ಹೋದಲ್ಲಿ ಸರ್ಕಾರದ ಸುತ್ತೋಲೆ ಪ್ರಕಾರ 72 ಗಂಟೆಯೊಳಗಾಗಿ ಬದಲಾಯಿಸಿಕೊಡಬೇಕು ಎಂಬ ಆದೇಶವಿದೆ. ಆದರೆ ಇಲ್ಲಿನ ಅಧಿಕಾರಿಗಳು 15-20 ದಿನವಾದರೂ ಸಹ ಪರಿವರ್ತಕಗಳನ್ನು ಬದಲಿಸಿ ಕೊಡದೇ ಇಲ್ಲಸಲ್ಲದ ಸಬೂಬು ಹೇಳಿ ರೈತರನ್ನು ಕಚೇರಿಗೆ ಅಲೆದಾಡಿಸುತ್ತಾರೆ. ರೈತರ ಬೆಳೆ ಒಣಗುತ್ತಿದ್ದು ಕೊನೆಗೆ ಕುಡಿಯುವ ನೀರಿಗೂ ತೊಂದರೆಯಾಗುತ್ತಿದ್ದರು ಸಹ ಅಧಿಕಾರಿಗಳ ನಿರ್ಲಕ್ಷ್ಯ ಹಾಗೆಯೇ ಮುಂದುವರಿದಿದೆ. ಹಾಗಾಗಿ ರೈತರ ಸುಟ್ಟ ಪರಿವರ್ತಕಗಳನ್ನು ನಿಯಮದ ಪ್ರಕಾರ ಬದಲಿಸಿಕೊಡದಿದ್ದರೆ ರೈತ ಸಂಘದ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಎಇಇ ಪೀರ್ ಸಾಬ್, ರೈತ ಸಂಘದ ತಾಲೂಕು ಅಧ್ಯಕ್ಷ ಬಿ.ಒ.ಶಿವಕುಮಾರ್, ಯುವ ಘಟಕದ ಅಧ್ಯಕ್ಷ ಚೇತನ್ ಯಳನಾಡು,ಬಿ.ಡಿ ಶ್ರೀನಿವಾಸ್, ರಂಗಸ್ವಾಮಿ, ಲೋಕೇಶ್, ತಿಪ್ಪೇರುದ್ರಪ್ಪ, ನಾಗರಾಜ್, ಅನುಸೂಯಮ್ಮ, ತಿಪ್ಪೇಸ್ವಾಮಿ, ಮರದಮುತ್ತು, ರುದ್ರಪ್ಪ ಮುಂತಾದವರು ಹಾಜರಿದ್ದರು.