ಫಿಗ್ಮಿ ಹಣ ಮರು ಪಾವತಿಸುವಂತೆ ಫಿಗ್ಮಿ ಏಟೆಂಟರ್‌ ಉಪವಾಸ ಸತ್ಯಾಗ್ರಹ

| Published : Feb 12 2025, 12:34 AM IST / Updated: Feb 12 2025, 12:35 AM IST

ಫಿಗ್ಮಿ ಹಣ ಮರು ಪಾವತಿಸುವಂತೆ ಫಿಗ್ಮಿ ಏಟೆಂಟರ್‌ ಉಪವಾಸ ಸತ್ಯಾಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸಂಕಷ್ಟದ ನಡುವೆ ಫಿಗ್ಮಿ ಕಟ್ಟಿದ್ದ ಜನರಿಗೆ ಆಡಳಿತ ಮಂಡಳಿ ಮತ್ತು ನೌಕರರ ವಂಚನೆ ಮಾಡುತ್ತಿದ್ದಾರೆ. ಇದರಿಂದ ಫಿಗ್ಮಿದಾರರು ಹಣ ಹಿಂದಿರುಗಿಸುವಂತೆ ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ. ಕೂಡಲೇ ವಸೂಲಿ ಮಾಡಿ ಸಂಘಕ್ಕೆ ಕಟ್ಟಿರುವ ಹಣವನ್ನು ಮರುಪಾವರಿಸಲು ಸೂಚಿಸುವಂತೆ ಶಾಸಕರಿಗೆ ಮನವಿ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕಸಬಾ ಸಹಕಾರ ಸಂಘದಲ್ಲಿ ದುರ್ಬಳಕೆ ಮಾಡಿಕೊಂಡಿರುವ ಫಿಗ್ಮಿ ಹಣವನ್ನು ಮರು ಪಾವತಿಗೆ ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಫಿಗ್ಮಿ ಏಜೆಂಟರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಮನವಿ ಮೇರೆಗೆ ಸತ್ಯಾಗ್ರಹ ಕೈಬಿಟ್ಟರು.

ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ಈ ಹಿಂದೆ ಸಿಇಒ ಆಗಿದ್ದ ಎಚ್.ಸಂದೇಶ್, ಹಿಂದಿನ ಕ್ಯಾಷಿಯರ್ ಹಾಗೂ ಈಗ ಸಿಇಒ ಆಗಿರುವ ಕಿರಣ್‌ಕುಮಾರ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಮೇಶ್, ಲೆಕ್ಕ ಪರಿಶೋಧಕ ಪ್ರವೀಣ್‌ಕುಮಾರ್ ಸೇರಿದಂತೆ ಸಂಘದ ನೌಕರರು, ಗ್ರಾಹಕರ ಫಿಗ್ಮಿ ಹಣ ಒಂದೂವರೆ ಕೋಟಿ ಜತೆಗೆ ಇನ್ನಿತರ ಮೂಲಗಳಿಂದ ಸಂಗ್ರಹವಾಗಿದ್ದ 7 ಕೋಟಿಗೂ ಅಧಿಕ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಸಂಕಷ್ಟದ ನಡುವೆ ಫಿಗ್ಮಿ ಕಟ್ಟಿದ್ದ ಜನರಿಗೆ ಆಡಳಿತ ಮಂಡಳಿ ಮತ್ತು ನೌಕರರ ವಂಚನೆ ಮಾಡುತ್ತಿದ್ದಾರೆ. ಇದರಿಂದ ಫಿಗ್ಮಿದಾರರು ಹಣ ಹಿಂದಿರುಗಿಸುವಂತೆ ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ. ಕೂಡಲೇ ವಸೂಲಿ ಮಾಡಿ ಸಂಘಕ್ಕೆ ಕಟ್ಟಿರುವ ಹಣವನ್ನು ಮರುಪಾವರಿಸಲು ಸೂಚಿಸುವಂತೆ ಶಾಸಕರಿಗೆ ಮನವಿ ಮಾಡಿದರು.

ಸಂಘದ ಷೇರುದಾರ ಎಚ್.ಡಿ.ಶ್ರೀಧರ್ ಮಾತನಾಡಿ, ಸಂಘದಲ್ಲಿ ನಡೆದಿರುವ ಕೋಟಿಗಟ್ಟಲೇ ಅವ್ಯವಹಾರಕ್ಕೆ ಸಂಘದ ಆಡಳಿತ ಮಂಡಳಿ ಮತ್ತು ನೌಕರ ವರ್ಗವೇ ನೇರ ಕಾರಣ. ಜತೆಗೆ ಡಿಸಿಸಿ ಬ್ಯಾಂಕ್, ಸಹಕಾರ ಸಂಘಗಳ ನಿಬಂಧಕ ನಾಗಭೂಷಣ್, ಸಂಘದ ಲೆಕ್ಕ ಪರಿಶೋಧಕ ಪ್ರವೀಣ್ ಕುಮಾರ್ ಅವರ ಕೈವಾಡದಿಂದಲೇ ಕೋಟಿಗಟ್ಟಲೇ ಹಣವನ್ನು ದುರುಪಯೋಗವಾಗಿದೆ ಎಂದು ಆರೋಪಿಸಿದರು.

ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಎಲ್ಲರ ಬಳಿ ದುರ್ಬಳಕೆಯಾದ ಹಣವನ್ನು ವಸೂಲಿ ಮಾಡುವ ಜೊತೆಗೆ ತಪ್ಪಿತಸ್ಥರ ವಿರುದ್ಧ ಸಾರ್ವಜನಿಕರ ಹಣ ದುರ್ಬಳಕೆ, ವಂಚನೆ, ದ್ರೋಹಗಳಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ರೀತಿ ಕ್ರಮ ಜರುಗಿಸ ಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಸಂಘದಲ್ಲಿ ನಡೆದಿರುವ ಅವ್ಯವಹಾರ ದೊಡ್ಡ ಮಟ್ಟದಲ್ಲಿದೆ. ಈಗಾಗಲೇ ಹಣ ವಸೂಲಿ ಮಾಡಲು ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಲಾಗಿದೆ. ಆದರೆ, ಅದನ್ನು ಬಹಿರಂಗಪಡಿಸುವಂತಿಲ್ಲ. ಫಿಗ್ಮಿ ಸಂಗ್ರಹಗಾರರ ಸಮಸ್ಯೆ ನಮಗೆ ಅರ್ಥವಾಗುತ್ತದೆ. ಈ ಸಮಸ್ಯೆ ಬಗೆಹರಿಸಲು ತಿಂಗಳುಗಟ್ಟಲೇ ಸಮಯ ಬೇಕು. ಎಲ್ಲವನ್ನು ಕಾನೂನು ರೀತಿಯಲ್ಲಿ ವಸೂಲಿ ಮಾಡಲಾಗುವುದು ಎಂದರು.

ಆಡಳಿತ ಮಂಡಳಿಯ ಈ ಹಿಂದಿನ ಎಲ್ಲಾ ಅಧ್ಯಕ್ಷರು ಮತ್ತು ನಿರ್ದೇಶಕರು, ಸಂಘದ ಈ ಹಿಂದಿನ ಸಿಇಒ, ಹಾಲಿ ಸಿಇಒ, ನೌಕರರು ಮತ್ತು ಅಧಿಕಾರಿ ವರ್ಗ ಎಲ್ಲರು ಇಲ್ಲಿ ಪಾಲುದಾರರೆ ಆಗಿದ್ದಾರೆ. ಎಲ್ಲರಿಂದಲೂ 1 ರು. ಬಿಡದಂತೆ ವಸೂಲಿ ಮಾಡಲಾಗುವುದು. ಅಲ್ಲಿವರೆಗೆ ಉಪವಾಸ ಸತ್ಯಾಗ್ರಹ ಕೈಬಿಡಬೇಕು ಎಂದು ಮನವಿ ಮಾಡಿದರು. ಶಾಸಕ ಮನವಿ ಮೇರೆಗೆ ಫಿಗ್ಮಿದಾರರು ಉಪವಾಸ ಸತ್ಯಾಗ್ರಹ ಕೈಬಿಟ್ಟರು.

ಈ ವೇಳೆ ಸಂಘದ ಅಧ್ಯಕ್ಷ ಬೇವಿನಕುಪ್ಪೆ ಬಿ.ಎನ್.ಯೋಗೇಶ್, ಮಾಜಿ ಅಧ್ಯಕ್ಷ ಶಿವರಾಮು, ಎಚ್.ಡಿ.ಶ್ರೀಧರ, ಬಾಲಗಂಗಾಧರ, ಶಾಂತಿಪ್ರಸಾದ್, ಪುರಸಭೆ ಉಪಾಧ್ಯಕ್ಷ ಎಲ್.ಅಶೋಕ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಲ್.ಆನಂದ್, ಫಿಗ್ಮಿ ಏಜೆಂಟರಾದ ನಿಂಗೇಗೌಡ, ಅನಿಲಕುಮಾರ್, ಪ್ರಕಾಶ್ ಇತರರು ಇದ್ದರು.