ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು: ಮಾಜಿ ಸಚಿವ ರಾಜೂಗೌಡ ಆಕ್ರೋಶ

| Published : Feb 13 2024, 12:46 AM IST

ಸಾರಾಂಶ

ಭಾಗವಾಧ್ವಜಗಳನ್ನು ಪುರಸಭೆಯ ಸಿಬ್ಬಂದಿ ಕಸ ವಿಲೇವಾರಿ ವಾಹನದಲ್ಲಿ ಸಾಗಿಸುತ್ತಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನೀಯ: ಮಾಜಿ ಶಾಸಕ ರಾಜೂಗೌಡ

ಕನ್ನಡಪ್ರಭ ವಾರ್ತೆ ಹುಣಸಗಿ

ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಅಂಗವಾಗಿ, ಪಟ್ಟಣದ ವಿವಿಧೆಡೆ ಅಳವಡಿಸಲಾಗಿದ್ದ ಭಾಗವಾಧ್ವಜಗಳನ್ನು ಮರುದಿನ ಪುರಸಭೆಯ ಸಿಬ್ಬಂದಿ ಕಸ ವಿಲೇವಾರಿ ವಾಹನದಲ್ಲಿ ಸಾಗಿಸುತ್ತಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿರುವುದರ ಹಿಂದೆ ರಾಜಕೀಯ ಕೈವಾಡ ಇದೆ ಎಂದು ಮಾಜಿ ಸಚಿವ ನರಸಿಂಹ ನಾಯಕ್‌ (ರಾಜೂಗೌಡ) ಆಕ್ರೋಶ ವ್ಯಕ್ತಪಡಿಸಿದ್ದು, ಹಿಂಪಡೆಯದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಈ ಕುರಿತು ಸೋಮವಾರ ಸಂಜೆ ಹುಣಸಗಿ ಪೊಲೀಸ್ ಠಾಣೆ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.30 ರಂದು ಭಾಗವಾಧ್ವಜಗಳನ್ನು ಕಸ ವಿಲೇವಾರಿ ವಾಹನದಲ್ಲಿ ತೆರವುಗೊಳಿಸುತ್ತಿರುವುದನ್ನು ಖಂಡಿಸಿ, ವಿಶ್ವ ಹಿಂದೂ ಪರಿಷತ್ತು ಸದಸ್ಯರು ಪಟ್ಟಣದ ಪ್ರಮುಖ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ನಂತರ ಪ್ರಮಾದ ಅರಿತ ಅಧಿಕಾರಿಗಳು ಎಲ್ಲರ ಮನವೊಲೈಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದ್ದರು.

ಆದರೆ, ಅಂದಿನ ಪಿಎಸ್ಐ ದೂರಿನ ಮೇರೆಗೆ ಹುಣಸಗಿ ತಹಸೀಲ್ದಾರರು 10 ಜನರ ಮೇಲೆ 107 ಸೆಕ್ಷನ್‌ ಪ್ರಕರಣ ದಾಖಲಿಸಿಕೊಂಡಿದ್ದು, ಇದು ಹಿಂದೂ ಕಾರ್ಯಕರ್ತರ ತಾಳ್ಮೆ ಪರೀಕ್ಷೆ ಮಾಡಿದಂತಿದೆ ಎಂದು ರಾಜೂಗೌಡ ಕಿಡಿ ಕಾರಿದರು.

ರಾಮಮಂದಿರ ಲೋಕಾರ್ಪಣೆ ಇಡೀ ದೇಶವೇ ಸಂಭ್ರಮಿಸಿ ಎಲ್ಲೆಂದರಲ್ಲಿ ಕೇಸರಿ ಧ್ವಜ, ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಲಾಗಿದೆ, ಅದೇ ರೀತಿಯಲ್ಲಿ, ಹುಣಸಗಿ ಪಟ್ಟಣವೂ ಮದುವಣಗಿತ್ತಿಯಂತೆ ಸಿಂಗಾರಗೊಂಡು ಎಲ್ಲೆಂದರಲ್ಲಿ ಕೇಸರಿ ಧ್ವಜ ರಾರಾಜಿಸುತ್ತಿದ್ದವು. ರಾಮ ಮಂದಿರ ಲೋಕಾರ್ಪಣೆಗೊಂಡ ಮರುದಿನವೇ ಹುಣಸಗಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಅಂದಿನ ಪಿಎಸ್ಐ ನೋಟಿಸ್ ನೀಡಿ ಕೇಸರಿ ಧ್ವಜ ತೆರವುಗೊಳಿಸಲು ಆದೇಶ ನೀಡಿದ್ದರಿಂದ ಪಟ್ಟಣ ಪಂಚಾಯ್ತಿ ಸಿಬ್ಬಂದಿಗಳು ಕಸ ವಿಲೇವಾರಿ ವಾಹನದಲ್ಲಿ ಕೇಸರಿ ಧ್ವಜವನ್ನು ತೆರವುಗೊಳಿಸಿ ಸಾಗಿಸುತ್ತಿರುವ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತು ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ತಹಸೀಲ್ದಾರ್ ಪ್ರಕರಣ ದಾಖಲಿಸಿಕೊಂಡಿರುವುದು ಸರಿಯಾದ ಕ್ರಮವಲ್ಲ ಎಂದರು.

ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದೆ, ಆಗಿರುವ ಅನ್ಯಾಯಕ್ಕೆ ನ್ಯಾಯ ಕೇಳಲು ಪ್ರತಿಭಟಿಸಿದ್ದನ್ನು ಮುಂದಿಟ್ಟುಕೊಂಡು 10 ಜ‌ನ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿರುವುದು ರಾಜಕೀಯ ಪ್ರೇರಿತವಾಗಿದೆ. ತಕ್ಷಣ ಈ ಪ್ರಕರಣವನ್ನು ಕೈ ಬಿಡಬೇಕು. ಇಲ್ಲದಿದ್ದರೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜೇಯಂದ್ರ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮುಖಂಡ ವಿರೇಶ ಚಿಂಚೋಳಿ, ಬಿಜೆಪಿ ಅಧ್ಯಕ್ಷ ಮೇಲಪ್ಪ ಗುಳಗಿ, ಬಸವರಾಜ ಸ್ಥಾವರಮಠ, ಪಪಂ ಸದಸ್ಯ ಮಲ್ಲು ಹೆಬ್ಬಾಳ, ಸಾಮಾಜಿಕ ಕಾರ್ಯಕರ್ತ ಬಸವರಾಜ ಮೇಲಿಮನಿ, ಬಸವರಾಜ ವೈಲಿ ಸೇರಿದಂತೆ ಇತರರಿದ್ದರು.