ಸಾರಾಂಶ
- ಬಿಜೆಪಿ ಹೇಳಿಕೆ ಬಗ್ಗೆ ತನಿಖೆಗೆ ಮನೋಹರ್ ಒತ್ತಾಯ
- - - ಕನ್ನಡಪ್ರಭ ವಾರ್ತೆ, ದಾವಣಗೆರೆರಾಜ್ಯ ಸರ್ಕಾರವನ್ನು ಕೆಡವಲು ಕೆಲವು ನಾಯಕರು ₹1 ಸಾವಿರ ಕೋಟಿ ಹಣ ಸಂಗ್ರಹಿಸಿಕೊಂಡಿದ್ದು, ಸರ್ಕಾರ ಪತನಗೊಳಿಸಿ, ಮುಖ್ಯಮಂತ್ರಿಯಾಗಲು ಸಂಚು ರೂಪಿಸಿದ್ದಾರೆಂಬ ಹೇಳಿಕೆ ನೀಡಿರುವ ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಬಿಜೆಪಿ ಸಂಚು ರೂಪಿಸಿರುವುದು, ಪಕ್ಷಗಳ ಮಧ್ಯೆ ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿ ನಗರದ ಗಾಂಧಿ ನಗರ ಪೊಲೀಸ್ ಠಾಣೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದೂರು ನೀಡಿದ್ದಾರೆ.
ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ರಾಜಾಜಿ ನಗರ ನಿವಾಸಿ ಎಸ್.ಮನೋಹರ ಅವರು ಅಲ್ಲಿನ ಹೈಗ್ರೌಂಡ್ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡಿರುವ ಕಡತವನ್ನು ಅ.14ರಂದು ದಾವಣಗೆರೆ ಗಾಂಧಿ ನಗರ ಪೊಲೀಸ್ ಠಾಣೆ ಅಧಿಕಾರಿಗಳು ಸ್ವೀಕರಿಸಿದ್ದಾರೆ. ಪಿರ್ಯಾದಿ ಎಸ್.ಮನೋಹರ ಗಾಂಧಿ ನಗರ ಠಾಣೆಗೆ ಹಾಜರಾಗಿ, ಯತ್ನಾಳ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.ಬಿಜೆಪಿ ಹಿರಿಯ ನಾಯಕರಾದ ಬಸವನಗೌಡ ಪಾಟೀಲ್ ಯತ್ನಾಳ, ಮಾಜಿ ಸಂಸದರಾದ ಜಿ.ಎಂ.ಸಿದ್ದೇಶ್ವರ, ಪ್ರತಾಪ ಸಿಂಹ, ಶಾಸಕ ಬಿ.ಪಿ.ಹರೀಶ ಇತರೆ ಮುಖಂಡರು ದಾವಣಗೆರೆ ಜಿಎಂಐಟಿ ಅತಿಥಿ ಗೃಹದಲ್ಲಿ ಸಭೆ ಮಾಡಿ, ರಾಜ್ಯದ ಅನೇಕ ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವನಗೌಡ ಪಾಟೀಲ ಯತ್ನಾಳ್, ಪಿರ್ಯಾದುದಾರ ಪಕ್ಷದ ಕೆಲ ನಾಯಕರ ₹1000 ಕೋಟಿ ಹಣ ಸಂಗ್ರಹಿಸಿಕೊಂಡಿದ್ದು, ಅದನ್ನು ಬಳಸಿ ಹಾಲಿ ಇರುವ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಿ, ತಾವು ಮುಖ್ಯಮಂತ್ರಿಯಾಗಲು ಸಂಚು ರೂಪಿಸಿದ್ದಾರೆಂಬ ಹೇಳಿಕೆ ನೀಡಿರುವ ಬಗ್ಗೆ ಮನೋಹರ ದೂರಿನಲ್ಲಿ ವಿವರಿಸಿದ್ದಾರೆ.
ಅದೇ ಹಣದಿಂದ ಕಾಂಗ್ರೆಸ್ ಶಾಸಕರನ್ನು ಖರೀದಿಸಿ, ಸರ್ಕಾರ ಪತನಗೊಳಿಸುವ ಸಂಚು ರೂಪಿಸಿರುವ ಬಗ್ಗೆ ಯತ್ನಾಳ್ ಹೇಳಿದ್ದಾರೆ. ಡಿಸೆಂಬರ್-2024ಕ್ಕೆ ರಾಜಕೀಯ ಕ್ರಾಂತಿ ಉಂಟಾಗಿ, ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದಿದ್ದಾರೆ. ₹1000 ಕೋಟಿ ಸಂಗ್ರಹಿಸಿಟ್ಟವರು ಯಾರೆಂಬ ಪ್ರಶ್ನೆಗೆ ನೀವೇ ಊಹೆ ಮಾಡಿ ಎಂದಿದ್ದಾರೆ. ಅಲ್ಲದೇ, ಹಣ ಸಂಗ್ರಹಿಸಿರುವ ನಾಯಕರ ಮನೆಯಲ್ಲಿ ನೋಟು ಎಣಿಸುವ ಮೆಷಿನ್ ಪತ್ತೆಯಾಗಿತ್ತು ಅಂತಲೂ ಹೇಳಿದ್ದಾರೆ. ಆ ಸಭೆ ನಂತರ ಯತ್ನಾಳ ಹೇಳಿಕೆ ನೋಡಿದರೆ ಈ ವಿಚಾರ ಸಭೆಯಲ್ಲಿದ್ದ ಎಲ್ಲರಿಗೂ ಗೊತ್ತಿದೆ. ಚರ್ಚೆ ಮಾಡಿ, ಮಾಧ್ಯಮಗಳಿಗೆ ತಿಳಿಸಲು ಸಹಮತ ವ್ಯಕ್ತಪಡಿಸಿರುವುದು ಕಾಣುತ್ತಿದೆ ಎಂದು ಮನೋಹರ್ ತಿಳಿಸಿದ್ದಾರೆ.ದೃಶ್ಯ ಮಾಧ್ಯಮಗಳು ದಿನಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳಲ್ಲೂ ಈ ವಿಚಾರ ಪ್ರಚುರಗೊಂಡಿದೆ. ರಾಜ್ಯದ ಜನತೆ 135 ಸ್ಥಾನಗಳನ್ನು ನೀಡಿ, 5 ವರ್ಷ ಸರ್ಕಾರ ನಡೆಸಲು ಜನಾದೇಶವಾಗಿದೆ. ಅದರಂತೆ ರಾಜ್ಯದಲ್ಲಿ ಜನಪರ ಸರ್ಕಾರವನ್ನು ಕಾಂಗ್ರೆಸ್ ನೀಡುತ್ತಿದೆ. ಅಧಿಕಾರವಿಲ್ಲದೇ, ಹತಾಶರಾದ ಬಿಜೆಪಿಯ ಕೆಲ ನಾಯಕರು ಸಾವಿರ ಕೋಟಿ ಭ್ರಷ್ಟ ಹಣವನ್ನು ಅಕ್ರಮವಾಗಿ ಸಂಗ್ರಹಿಸಿ, ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ಸಂಚು ರೂಪಿಸಿರುವುದು ಯತ್ನಾಳ್ ಹೇಳಿಕೆಯಿಂದಲೇ ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಒಂದು ಕಡೆ ಜನಾದೇಶಕ್ಕೆ ಅಪಚಾರ ಮಾಡಿ, ಮತ್ತೊಂದು ಕಡೆ ಭ್ರಷ್ಟ ಹಾಗೂ ಅಕ್ರಮ ಹಣ ವರ್ಗಾವಣೆ ನಡೆಯುತ್ತಿದೆ. ಸಮಾಜದಲ್ಲಿ ಈ ರೀತಿಯಾಗಿ ಹೇಳಿಕೆ ನೀಡಿ, ಪಕ್ಷ ಪಕ್ಷಗಳ ಕಾರ್ಯಕರ್ತರ ಮಧ್ಯೆ ಕೋಮುಭಾವನೆ ಸೃಷ್ಟಿಸಿ, ಸಮಾಜದಲ್ಲೆ ಗಲಭೆಗಳು ಉಂಟಾಗುವಂತೆ ಹೇಳಿಕೆ ನೀಡುತ್ತಿರುವ ಯತ್ನಾಳ್‌ರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಎಸ್.ಮನೋಹರ ದಾವಣಗೆರೆ ಗಾಂಧಿ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.