ಸುರೇಶ್‌ಗೌಡ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲು

| Published : Apr 12 2024, 01:11 AM IST / Updated: Apr 12 2024, 12:04 PM IST

ಸುರೇಶ್‌ಗೌಡ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಆಧಾರ ರಹಿತ, ಮನಸೋ ಇಚ್ಛೆ ಆರೋಪಗಳನ್ನು ಮಾಡಿ, ಏಕವಚನದಲ್ಲಿ ನಿಂದಿಸಿದ್ದ ಮಾಜಿ ಶಾಸಕ ಕೆ.ಸುರೇಶ್‌ಗೌಡರ ವಿರುದ್ಧ ಚಲುವರಾಯಸ್ವಾಮಿ ಅವರು ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದಾರೆ

 ಮಂಡ್ಯ ; ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಆಧಾರ ರಹಿತ, ಮನಸೋ ಇಚ್ಛೆ ಆರೋಪಗಳನ್ನು ಮಾಡಿ, ಏಕವಚನದಲ್ಲಿ ನಿಂದಿಸಿದ್ದ ಮಾಜಿ ಶಾಸಕ ಕೆ.ಸುರೇಶ್‌ಗೌಡರ ವಿರುದ್ಧ ಚಲುವರಾಯಸ್ವಾಮಿ ಅವರು ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಟಿ.ಎಸ್.ಸತ್ಯಾನಂದ ತಿಳಿಸಿದರು.

ಈ ಪ್ರಕರಣವನ್ನು ಪುರಸ್ಕರಿಸಿರುವ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕಳೆದ ಆಗಸ್ಟ್ ೨೦೨೩ರಲ್ಲಿ ನಾಗಮಂಗಲದ ತಮ್ಮ ಬೆಂಬಲಿಗರ ಸಭೆ ಹಾಗೂ ಸುದ್ದಿಗೋಷ್ಠಿಯಲ್ಲಿ ಚಲುವರಾಯಸ್ವಾಮಿ ವಿರುದ್ಧ ಹಲವು ಆರೋಪಗಳನ್ನು ಮಾಡಿ ಸುರೇಶ್‌ಗೌಡ ಅವರು ಚಲುವರಾಯಸ್ವಾಮಿ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಲೂಟಿ ಹೊಡೆದಿದ್ದಾರೆ. 300 ರಿಂದ 400 ಕೋಟಿ ರು. ಹಣ ಲೂಟಿ ಮಾಡಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಹಣವನ್ನು ಏರ್‌ಲಿಫ್ಟ್ ಮಾಡಿದ್ದಾರೆಂದು ಹಲವು ಆಧಾರರಹಿತ ಆರೋಪ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡದೆ ಕಾನೂನಿನ ಮೂಲಕ ಸೂಕ್ತ ಉತ್ತರ ನೀಡಲು ತೀರ್ಮಾನಿಸಿದ ಸಚಿವ ಎನ್.ಚಲುವರಾ ಯಸ್ವಾಮಿ ಬೆಂಗಳೂರು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸೂಕ್ತ ಪರಿಹಾರ ಮತ್ತು ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದರು.

ಚಲುವರಾಯಸ್ವಾಮಿ ಸಲ್ಲಿಸಿದ ದೂರು ಮತ್ತು ಅದರೊಂದಿಗೆ ಸಲ್ಲಿಸಿದ ದಾಖಲಾತಿಗಳು, ಪತ್ರಿಕಾ ಹೇಳಿಕೆಗಳನ್ನು ಕೂಲಂಕುಷವಾಗಿ ಪರಿಶೀಲಲಿಸಿದ ನ್ಯಾಯಾಲಯ ದೂರಿನ ಗಂಭೀರತೆಯನ್ನು ಪರಿಗಣಿಸಿ ಪ್ರಕರಣದಲ್ಲಿ ಮಾನಿಹಾನಿಕಾರಕ ಅಂಶಗಳು ಕಂಡುಬಂದಿರುವುದರಿಂದ ಆರೋಪಿ ಸುರೇಶ್‌ಗೌಡ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಲು ಆದೇಶಿಸಿದೆ. 

ಸುರೇಶ್‌ಗೌಡರಿಗೆ ಸಮನ್ಸ್ ಜಾರಿ ಮಾಡಿರುವ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮೇ ೨೧ಕ್ಕೆ ಮುಂದೂಡಿದೆ ಎಂದು ತಿಳಿಸಿದರು.ಇನ್ನು ಮುಂದೆ ಸಾರ್ವಜನಿಕವಾಗಿ ಆಧಾರವಿಲ್ಲದೆ ಸುಳ್ಳು ಆರೋಪಗಳನ್ನು ಮಾಡುತ್ತಾ ಸಚಿವರೂ ಸೇರಿದಂತೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಮಾನಹಾನಿಕಾರಕ ಹೇಳಿಕೆಗಳನ್ನು ನೀಡುವ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಮಾಹಿತಿ ಹರಡುವ ವ್ಯಕ್ತಿಗಳ ವಿರುದ್ಧ ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಮೊಕದ್ದಮೆಗಳನ್ನು ದಾಖಲಿಸಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಯಾವುದೇ ಪಕ್ಷದವರಾಗಿರಲಿ ಟೀಕೆಗಳು ಆರೋಗ್ಯಕರವಾಗಿರಬೇಕು. ವೈಯಕ್ತಿಕ ತೇಜೋವಧೆ ಮಾಡುವ ಮಟ್ಟಕ್ಕೆ ಇಳಿಯಬಾರದು. ಮಂಡ್ಯ ಜಿಲ್ಲೆಯ ನಾಯಕರ ಮಾತಿಗೆ ತನ್ನದೇ ಆದ ಗತ್ತು ಗೌರವವಿದೆ. ಜಿಲ್ಲಾ ನಾಯಕರ ಮಾತುಗಳಿಗೆ ಕೇಂದ್ರದ ನಾಯಕರು ಮರುಮಾತನಾಡದೆ ಗೌರವ ನೀಡಿದ ನಿದರ್ಶನಗಳಿವೆ. ಆ ಪರಂಪಪರೆಗೆ ಕೊಳ್ಳಿ ಇಡುವ ಕೆಲಸ ಮಾಡಬಾರದು ಎಂದು ಹೇಳಿದರು.