ಐಆರ್‌ಬಿ ಮೇಲೆ ಕೊಲೆ ಕೇಸ್ ದಾಖಲಿಸಿ: ಪ್ರಣವಾನಂದ ಸ್ವಾಮೀಜಿ

| Published : Jul 24 2024, 12:15 AM IST

ಸಾರಾಂಶ

ಶಿರೂರು ಬಳಿ ಭೀಕರ ಗುಡ್ಡ ಕುಸಿತದಿಂದ ಹಲವಾರು ಜನ ಪ್ರಾಣ ಕಳೆದುಕೊಂಡಿದ್ದು, ಮೃತರ ಕುಟುಂಬಕ್ಕೆ ಒಂದು ಕೋಟಿ ರು. ಪರಿಹಾರ ನೀಡಬೇಕು.

ಅಂಕೋಲಾ: ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಶಿರೂರು ಗುಡ್ಡ ಕುಸಿತ ದುರ್ಘಟನೆ ನಡೆದಿದ್ದು, ಈ ದುರ್ಘಟನೆಗೆ ಕಾರಣವಾದ ಐಆರ್‌ಬಿ ಕಂಪನಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರ ಮೇಲೆ ಕೊಲೆ ಕೇಸ್ ದಾಖಲಿಸಿ ಅವರನ್ನು ಬಂಧಿಸುವಂತೆ ಬ್ರಹ್ಮರ್ಷಿ ನಾರಾಯಣ ಗುರುಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದರು.

ಮಂಗಳವಾರ ತಾಲೂಕಿನ ಶಿರೂರಿನ ಗುಡ್ಡ ಕುಸಿತದಿಂದ ಮೃತಪಟ್ಟವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಿರೂರು ಬಳಿ ಭೀಕರ ಗುಡ್ಡ ಕುಸಿತದಿಂದ ಹಲವಾರು ಜನ ಪ್ರಾಣ ಕಳೆದುಕೊಂಡಿದ್ದು, ಮೃತರ ಕುಟುಂಬಕ್ಕೆ ಒಂದು ಕೋಟಿ ರು. ಪರಿಹಾರ ನೀಡಬೇಕು. ಜತೆಗೆ ಮೃತರ ಸಂಬಂಧಿಗೆ ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಉದ್ಯೋಗ ದೊರಕಿಸಿಕೊಡಬೇಕು. ದುರಂತದಲ್ಲಿ ಸಾವಿಗೀಡಾದ ಇತರ ಸಮುದಾಯದ ಜನರಿಗೂ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಜಿಲ್ಲಾ ಅಧ್ಯಕ್ಷ ದೇವರಾಜ ನಾಯ್ಕ ಬಾರ್ಷಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕೊಂಡಳ್ಳಿ, ರಾಜ್ಯ ಉಪಾಧ್ಯಕ್ಷ ಸಂತೋಷ ನಾಯ್ಕ ಗಂಗಾವಳಿ, ಭಟ್ಕಳ ತಾಲೂಕಾಧ್ಯಕ್ಷ ಶ್ರೀಧರ್ ನಾಯ್ಕ, ಹೊನ್ನಾವರ ತಾಲೂಕಾಧ್ಯಕ್ಷ ಸಚಿನ ನಾಯ್ಕ, ಯುವ ಘಟಕ ಕಾರ್ಯದರ್ಶಿ ರಾಜೇಶ ಎನ್. ನಾಯ್ಕ, ಅಂಕೋಲಾ ತಾಲೂಕಾಧ್ಯಕ್ಷ ದಾಮೋದರ ಜಿ. ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗರಾಜ ಮಂಜಗುಣಿ, ರಾಜ್ಯ ಮಹಿಳಾ ಉಪಾಧ್ಯಕ್ಷೆ ಮಂಜುಳಾ ನಾಯ್ಕ ಸೇರಿದಂತೆ ಸಮುದಾಯದ ಇತರ ಇದ್ದರು.