ಧಾರವಾಡ:

ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಅವರು ಮಂಗಳವಾರ ಇಲ್ಲಿಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಆವರಣದಲ್ಲಿರುವ ಜಿಲ್ಲಾ ಪಶು ಆಸ್ಪತ್ರೆ (ಪಾಲಿಕ್ಲಿನಿಕ್)ಗೆ ಭೇಟಿ ನೀಡಿ ಜಾನುವಾರುಗಳಿಗೆ ಆಸ್ಪತ್ರೆಯಲ್ಲಿ ದೊರೆಯುವ ಚಿಕಿತ್ಸಾ ಸೌಲಭ್ಯಗಳನ್ನು ವೀಕ್ಷಿಸಿದರು. ಆಸ್ಪತ್ರೆಗೆ ಮಂಜೂರಾಗಿರುವ ನಾಲ್ಕು ಡಿ-ದರ್ಜೆ ಹುದ್ದೆಗಳು ಖಾಲಿ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿರುವ ಎಲ್ಲ ಪಶುವೈದ್ಯಕೀಯ ಚಿಕಿತ್ಸಾ ಕೇಂದ್ರಗಳಲ್ಲಿ ಖಾಲಿಯಿರುವ ಡಿ-ದರ್ಜೆ ನೌಕರರ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಇಲಾಖೆಯ ಉಪನಿರ್ದೇಶಕ ಡಾ. ಎಸ್.ವ್ಹಿ. ಸಂತಿ ಅವರಿಗೆ ಸೂಚಿಸಿದರು.

ಜಿಲ್ಲೆಯಲ್ಲಿರುವ ಪಶು ವೈದ್ಯಕೀಯ ಚಿಕಿತ್ಸಾ ಕೇಂದ್ರಗಳ ಕಟ್ಟಡಗಳ ನಿರ್ಮಾಣ, ರಿಪೇರಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಲು ಸಹ ಇದೇ ಸಂದರ್ಭದಲ್ಲಿ ಸೂಚಿಸಿದರು. ಕಚೇರಿಯಲ್ಲಿ ಇ-ಆಫೀಸ್ ತಂತ್ರಾಂಶ ಅಳವಡಿಸಿಕೊಳ್ಳಲು ಕ್ರಮವಹಿಸಲು ತಿಳಿಸಿದರು.

ಪಾಲಿಕ್ಲಿನಿಕ್‌ಗೆ ಅವಶ್ಯವಿರುವ ದೊಡ್ಡ ಪ್ರಾಣಿಗಳ ಹೈಡ್ರಾಲಿಕ್ ಶಸ್ತ್ರಚಿಕಿತ್ಸಾ ಟೇಬಲ್ ಹಾಗೂ ಇತರೆ ಅವಶ್ಯ ಉಪಕರಣಗಳ ಸರಬರಾಜಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪಾಲಿಕ್ಲಿನಿಕ್‌ ಉಪನಿರ್ದೇಶಕ ಡಾ. ಆರ್.ಡಿ. ಪಾಟೀಲಗೆ ತಿಳಿಸಿದರು.


ಕೃಷಿ ವಿವಿ ಆವರಣದಲ್ಲಿರುವ ಪಶುಪಾಲನಾ ಇಲಾಖೆಯ ಘನೀಕೃತ ವೀರ್ಯನಳಿಕೆ ಉತ್ಪಾದನಾ ಕೇಂದ್ರಕ್ಕೂ ಭೇಟಿ ನೀಡಿದ ಸಿಇಒ, ಹೋರಿಗಳ ಪಾಲನೆ, ವೀರ್ಯನಳಿಕೆಗಳ ಉತ್ಪಾದನೆ ಹಾಗೂ ಗುಣಮಟ್ಟ ನಿರ್ವಹಣೆ ಪ್ರಕ್ರಿಯೆ ವೀಕ್ಷಿಸಿ, ಕೇಂದ್ರದ ಕಾರ್ಯನಿರ್ವಹಣೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಗರಗ ಗ್ರಾಮದ ಪಶುಚಿಕಿತ್ಸಾಲಯಕ್ಕೆ ಭೇಟಿ ನೀಡಿದರು. ಸದರಿ ಪಶುಚಿಕಿತ್ಸಾಲಯದಲ್ಲಿ ಕೃತಕ ಗರ್ಭಧಾರಣೆಯ ಉತ್ತಮ ಫಲಿತಾಂಶಕ್ಕಾಗಿ ಅಳವಡಿಸಿರುವ, ಜಾನುವಾರುಗಳನ್ನು ತಂಪಾಗಿಸುವ ಫಾಗರ್ ಸೌಲಭ್ಯ ಪರಿಶೀಲಿಸಿ, ಜಿಲ್ಲೆಯ ಉಳಿದ ಪಶುಚಿಕಿತ್ಸಾಲಯಗಳಲ್ಲಿ ಇದೇ ಮಾದರಿಯ ಸೌಲಭ್ಯ ಒದಗಿಸಲು ಸೂಚಿಸಿದರು. ಉತ್ಕೃಷ್ಟ ತಳಿಯ ಹೋರಿಗಳ ವೀರ್ಯನಳಿಕೆಯಿಂದ ಜನಿಸಿರುವ ಕರುಗಳನ್ನು ಕಂಡು ಸಂತೋಷ ವ್ಯಕ್ತಪಡಿಸಿದರು.

ಪಶುಪಾಲನಾ ಇಲಾಖೆಯ ಡಾ. ನಾಗರಾಜ, ಡಾ. ಪ್ರಮೋದ ಮೂಡಲಗಿ ಇದ್ದರು.