ತುಂಗಭದ್ರೆಯಿಂದ ಸಂಡೂರು ತಾಲೂಕಿನ ಕೆರೆ ತುಂಬಿಸಿ: ಚಾಮರಸ

| Published : Feb 27 2024, 01:35 AM IST

ತುಂಗಭದ್ರೆಯಿಂದ ಸಂಡೂರು ತಾಲೂಕಿನ ಕೆರೆ ತುಂಬಿಸಿ: ಚಾಮರಸ
Share this Article
  • FB
  • TW
  • Linkdin
  • Email

ಸಾರಾಂಶ

ಬಗರ್‌ಹುಕುಂ ಹಾಗೂ ಅರಣ್ಯ ಜಮೀನುಗಳ ಉಳುಮೆದಾರರಿಗೆ ಪಟ್ಟಾ ನೀಡುವವರೆಗೆ ನಮ್ಮ ಹೋರಾಟ ನಿಲ್ಲದು

ಸಂಡೂರು: ಗಣಿಯಿಂದ ಸಂಗ್ರಹಿಸಿರುವ ಹಣದಲ್ಲಿ ತಾಲೂಕಿನಲ್ಲಿರುವ ಕೆರೆಗಳನ್ನು ತುಂಗಭದ್ರಾ ನದಿ ನೀರಿನಿಂದ ತುಂಬಿಸಬೇಕು, ಬಗರ್‌ಹುಕುಂ, ಅರಣ್ಯ ಜಮೀನು ಸಾಗುವಳಿದಾರರಿಗೆ ಪಟ್ಟಾ ನೀಡಬೇಕು, ರೈತರಿಗೆ ಧೂಳಿನ ಪರಿಹಾರ ನೀಡಬೇಕು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ರೈತ ಸಂಘದ ತಾಲೂಕು ಘಟಕದ ವತಿಯಿಂದ ಪಟ್ಟಣದ ಯಶವಂತ ವಿಹಾರ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತರ ಪ್ರತಿಭಟನಾ ಸಮಾವೇಶದಲ್ಲಿ ಸರ್ಕಾರವನ್ನು ಒತ್ತಾಯಿಸಲಾಯಿತು.

ಸಮಾವೇಶದಲ್ಲಿ ಸಂಘದ ರಾಜ್ಯ ಸಮಿತಿಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಕೃಷಿ ಕಾರ್ಮಿಕರು ಕೆಲಸ ಅರಸಿ ವಲಸೆ ಹೋರಟಿದ್ದಾರೆ. ಮೇವಿನ ಕೊರತೆಯಿಂದ ರೈತರು ತಮ್ಮ ಜಾನುವಾರುಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡುವಂತಾಗಿದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಂಡು ಪರಸ್ಪರ ದೂಷಣೆ ಮಾಡುತ್ತಾ ದಿನ ದೂಡುತ್ತಿವೆ. ಕೇಂದ್ರ ಇಲ್ಲಿಯವರೆಗೆ ನಯಾಪೈಸೆ ನೀಡಿಲ್ಲ. ರಾಜ್ಯ ನೀಡುವ ೨ ಸಾವಿರದಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಬಗರ್‌ಹುಕುಂ ಹಾಗೂ ಅರಣ್ಯ ಜಮೀನುಗಳ ಉಳುಮೆದಾರರಿಗೆ ಪಟ್ಟಾ ನೀಡುವವರೆಗೆ ನಮ್ಮ ಹೋರಾಟ ನಿಲ್ಲದು. ತುಂಗಭದ್ರಾ ಜಲಾಶಯದಲ್ಲಿನ ಹೂಳನ್ನು ಎತ್ತುವ ಕುರಿತು ಪಾದಯಾತ್ರೆ ಮಾಡಿದ್ದ ಶ್ರೀರಾಮುಲು ಅವರು ನಂತರ ಅದರ ಕುರಿತು ಬಿಜೆಪಿ ಸರ್ಕಾರವಿದ್ದಾಗ ಚಕಾರ ಎತ್ತಲಿಲ್ಲ. ಜಲಾಶಯ, ಕೆರೆಗಳಲ್ಲಿನ ಹೂಳನ್ನು ಎತ್ತಿ ನೀರು ತುಂಬಿಸಿದರೆ, ಅಂತರ್ಜಲ ಹೆಚ್ಚಿ, ರೈತರಿಗೆ ಜನತೆಗೆ ಅನುಕೂಲವಾಗಲಿದೆ ಎಂದರು. ಗಣಿ ಪರಿಸರ ಪುನಶ್ಚೇತನಕ್ಕಾಗಿ ಸಂಗ್ರಹಿಸಿರುವ ಹಣದಲ್ಲಿ ಶೇ. ೫೦ರಷ್ಟು ಹಣವನ್ನು ಸಂಡೂರು ತಾಲೂಕಿನಲ್ಲಿಯ ೬೬ ಕೆರೆಗಳನ್ನು ಹಾಗೂ ನಾರಿಹಳ್ಳ ಜಲಾಶಯವನ್ನು ತುಂಗಭದ್ರಾ ನದಿ ನೀರಿನಿಂದ ತುಂಬಿಸಲು ಬಳಸಬೇಕು. ರೈತರ ಆರ್ಥಿಕ ಮಟ್ಟ ಸುಧಾರಿಸುವ ಕ್ರಮ ಹಾಗೂ ಕೃಷಿಗೆ ಪೂರಕ ಕಾರ್ಯಗಳಿಗೆ ಬಳಸಬೇಕು. ಅದನ್ನು ಬಿಟ್ಟು ರಸ್ತೆ, ಬ್ರಿಡ್ಜ್ ಸೇರಿದಂತೆ ಅನ್ಯ ಕಾರ್ಯಗಳಿಗೆ ಬಳಸಿದರೆ, ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.

ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಮಾತನಾಡಿ, ತಾಲೂಕಿನಲ್ಲಿಯ ಖನಿಜ ಸಂಪತ್ತು ಒಂದು ರೀತಿಯಲ್ಲಿ ವರವಾಗಿದ್ದರೆ, ಇನ್ನೊಂದು ರೀತಿಯಲ್ಲಿ ಶಾಪವಾಗಿದೆ. ರೈತರ ಪಾಲಿಗೆ ಇದು ಶಾಪವಾಗಿ ಪರಿಣಮಿಸಿದೆ. ಗಣಿ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಇಲ್ಲಿ ರೈತರು ಉಳುಮೆ ಮಾಡುತ್ತಿದ್ದ ಬಗರ್‌ಹುಕುಂ ಮುಂತಾದ ಜಮೀನುಗಳನ್ನು ಕರಾಬು ಎಂದು ವರದಿ ನೀಡಲಾಗುತ್ತಿದೆ. ಯಾವ ಕ್ಷಣದಲ್ಲಾದರೂ ಇಂತಹ ಜಮೀನುಗಳನ್ನು ಕಬಳಿಸಬಹುದು. ಇದಕ್ಕೆ ಅವಕಾಶ ನೀಡಬಾರದು. ಬಳ್ಳಾರಿ ಜಿಲ್ಲೆಯ ಕಾಶ್ಮೀರದಂತಿದ್ದ ತಾಲೂಕು ಇದೀಗ ಧೂಳಿನಿಂದ ತುಂಬಿಹೋಗಿದೆ. ಜಲಮೂಲಗಳು ಕಲುಷಿತವಾಗಿವೆ. ಗಣಿಗಳಿಂದ ಸಂಗ್ರಹಿಸಿರುವ ಹಣದಲ್ಲಿ ಶೇ. ೫೦ಕ್ಕೂ ಹೆಚ್ಚು ಹಣವನ್ನು ತಾಲೂಕಿಗೆ ಅದರಲ್ಲೂ, ಇಲ್ಲಿನ ಕೆರೆಗಳಿಗೆ ನದಿ ನೀರಿನಿಂದ ತುಂಬಿಸಲು ಕ್ರಮ ಕೈಗೊಳ್ಳಬೇಕು. ಅರಣ್ಯ ಜಮೀನುಗಳ ಉಳುಮೆದಾರರನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿದರು. ಸಂಘದ ರಾಜ್ಯ ಸಮಿತಿಯ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎಂ.ಎಲ್.ಕೆ. ನಾಯ್ಡು, ವಿಭಾಗೀಯ ಕಾರ್ಯದರ್ಶಿ ಗೋಣಿಬಸಪ್ಪ, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಎಸ್. ಅಕ್ಕಿ, ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ ಮೇಟಿ ರೈತರ ಬೇಡಿಕೆಗಳ ಕುರಿತು ಮಾತನಾಡಿದರು. ಸಮಾವೇಶದಲ್ಲಿ ಜನ ಸಂಗ್ರಾಮ ಪರಿಷತ್ ಮುಖಂಡರಾದ ಟಿ.ಎಂ. ಶಿವಕುಮಾರ್, ಶ್ರೀಶೈಲ ಆಲ್ದಳ್ಳಿ, ನಾಗರಾಜ್, ರಾಜಣ್ಣ, ಪರಮೇಶ್ವರಪ್ಪ ಸೇರಿದಂತೆ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.