ರಾಮನಗರ: ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಹೆಚ್ಚಾಗಿ ಬೋರ್‌ವೆಲ್‌ಗಳಿಗೆ ನೀರು ಲಭಿಸಲಿದೆ, ಆ ಮೂಲಕ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದಾಗಿದೆ. ಆದ್ದರಿಂದ ಕೆರೆ ತುಂಬಿಸುವ ಯೋಜನೆ ಕಾರ್ಯಗತಗೊಳಿಸಬೇಕು ಎಂದು ಸಂಸದ ಡಾ. ಸಿ.ಎನ್.ಮಂಜುನಾಥ್ ಅಧಿಕಾರಿಗಳಿಗೆ ಸಲಹೆ ನೀಡಿದರು
ರಾಮನಗರ: ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಹೆಚ್ಚಾಗಿ ಬೋರ್‌ವೆಲ್‌ಗಳಿಗೆ ನೀರು ಲಭಿಸಲಿದೆ, ಆ ಮೂಲಕ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದಾಗಿದೆ. ಆದ್ದರಿಂದ ಕೆರೆ ತುಂಬಿಸುವ ಯೋಜನೆ ಕಾರ್ಯಗತಗೊಳಿಸಬೇಕು ಎಂದು ಸಂಸದ ಡಾ. ಸಿ.ಎನ್.ಮಂಜುನಾಥ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಲ್ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳು ತ್ವರಿತ ಗತಿಯಲ್ಲಿ ಪೂರ್ಣಗೊಳ್ಳಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕಾಮಗಾರಿಗಳನ್ನು ಪೂರ್ಣಗೊಳಿಸದ ಗುತ್ತಿಗೆದಾರರಿಗೆ ಇದುವರೆಗೂ 65 ಲಕ್ಷ ರು. ದಂಡ ವಿಧಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರು ಸಭೆಗೆ ಮಾಹಿತಿ ನೀಡಿದಾಗ ಜೆಜೆಎಂ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಸಂಸದರು ಕಟ್ಟುನಿಟ್ಟಿನ ಸೂಚನೆ ನೀಡಿದರು.ನರೇಗಾ ಯೋಜನೆಯಡಿ ಕೆಲವೆಡೆ ಇಂಗುಗುಂಡಿಗಳನ್ನು ತೋಡಲಾಗುತ್ತದೆ. ನಂತರದ ಕೆಲವೇ ದಿನಗಳಲ್ಲಿ ಅವುಗಳನ್ನು ಮುಚ್ಚಲಾಗುತ್ತಿದೆ. ಭೂಮಿಗೆ ನೀರು ಬಸಿದು ಅಂತರ್ಜಲ ಹೆಚ್ಚಳವಾಗುವಲ್ಲಿ ಇಂಗುಗುಂಡಿಗಳು ಹಾಗೂ ಚೆಕ್ ಡ್ಯಾಂಗಳ ಪಾತ್ರ ಮಹತ್ವದ್ದಾಗಿದೆ. ಇಂತಹ ಕಾರ್ಯಗಳಲ್ಲಿ ಸರ್ಕಾರದ ಜವಾಬ್ದಾರಿಯೊಂದಿಗೆ ಸಾರ್ವಜನಿಕರ ಜವಾಬ್ದಾರಿಯೂ ಮುಖ್ಯ. ನೀರನ್ನು ಭೂಮಿಗೆ ಇಂಗಿಸುವ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ರಸ್ತೆ ಮೇಲೆ ಬಿದ್ದ ಮಳೆ ನೀರು ವ್ಯರ್ಥವಾಗದಂತೆ ಮಳೆ ನೀರು ಕೊಯ್ಲಿಗೆ ಕ್ರಮ ವಹಿಸುವ ಮೂಲಕ ಕೆರೆಗಳನ್ನು ತುಂಬಿಸಬೇಕು. ಬೋರ್‌ವೆಲ್‌ಗಳು ಬತ್ತದಂತೆ ನೋಡಿಕೊಳ್ಳಬೇಕು. ಕೃಷಿ ಹೊಂಡಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಕೆರೆ ನಾಲೆಗಳನ್ನು ಶುಚಿಗೊಳಿಸಬೇಕು. ಈ ಮೂಲಕ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಅಗತ್ಯ ಕ್ರಮ ವಹಿಸಿ ಎಂದು ಮಂಜುನಾಥ್ ಹೇಳಿದರು.ಜಿಲ್ಲೆಯ ಕೆರೆಗಳ ಒತ್ತುವರಿಯಾಗಿರುವ ಬಗ್ಗೆ ದಿಶಾ ಸಮಿತಿ ಸದಸ್ಯರು ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಎಲ್ಲಾ ಕೆರೆಗಳ ಜಾಗ ಸಮೀಕ್ಷೆ ನಡೆಸಲಾಗಿದ್ದು ಒಟ್ಟು 1,700 ಎಕರೆ ಕೆರೆ ಭೂಮಿ ಒತ್ತುವರಿಯಾಗಿದೆ, ಮುಂದಿನ ದಿನಗಳಲ್ಲಿ ಒತ್ತುವರಿ ತೆರವು ಕಾರ್ಯ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ದೇಶದಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕೆರೆಗಳನ್ನು ಡ್ರೋಣ್ ಮೂಲಕ ಸಮೀಕ್ಷೆ ಮಾಡಲಾಗಿದೆ. ಅಧಿಕಾರಿಗಳು ತಮ್ಮ ಕಾರ್ಯ ಕ್ಷೇತ್ರದ ಜವಾಬ್ದಾರಿಯನ್ನರಿತು ಸೇವಾ ಮನೋಭಾವದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಆಡಳಿತಯಂತ್ರ ಚುರುಕಾಗಾಬೇಕು. ಜನಪರ ಸೇವೆ ಮಾಡಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.ಚನ್ನಪಟ್ಟಣ ತಾಲೂಕು ಆಸ್ಪತ್ರೆ ಕಿರಿದಾಗಿದ್ದು ಅದನ್ನು ವಿಸ್ತರಿಸಲು ಸಾಧ್ಯವಿಲ್ಲ. ಹೊಸ ಜಾಗ ಗುರುತಿಸಿ 200 ಹಾಸಿಗೆಗಳಿರುವ ಹೊಸ ಆಸ್ಪತ್ರೆ ನಿರ್ಮಿಸುವುದು ಮಾತ್ರವಲ್ಲದೇ ಅಗತ್ಯವಿರುವ ವೈದ್ಯರು ಸೇರಿದಂತೆ ಸಿಬ್ಬಂದಿಗಳನ್ನು ಒದಗಿಸಲು ಕ್ರಮವಹಿಸಲಾಗುವುದು. ರಾಮನಗರದ ಅರ್ಚಕರಹಳ್ಳಿಯಲ್ಲಿ ನಿರ್ಮಿಸುತ್ತಿರುವ ರಾಜೀವ್ ಗಾಂಧಿ ಮೆಡಿಕಲ್ ಕಾಲೇಜಿನಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರು ಹಾಗೂ ಕಾರ್ಯದರ್ಶಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸಂಸದರು ಹೇಳಿದರು.
ಸಿಎಸ್‌ಆರ್ ನಿಧಿಯಡಿ ಕನಕಪುರ ತಾಲೂಕು ಆಸ್ಪತ್ರೆಗೆ ಅಗತ್ಯವಿರುವ 31 ಲಕ್ಷ ರು. ಮೌಲ್ಯದ ಶಸ್ತ್ರಚಿಕಿತ್ಸೆ ಪರಿಕರಗಳನ್ನು ಶ್ರೀಘ್ರವಾಗಿ ನೀಡಲಾಗುವುದು. ಬಿಸಿಲಿನ ತಾಪಮಾನದಿಂದ ತಪ್ಪಿಸಿಕೊಳ್ಳಲು ಅನುಸರಿಸಬೇಕಾದ ಅಗತ್ಯ ಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕೆಂದು ಸೂಚಿಸಿದರು.ಚನ್ನಪಟ್ಟಣದಲ್ಲಿ ಹಾವು ಕಚ್ಚಿ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ. ಚನ್ನಪಟ್ಟಣದ ಆಸ್ಪತ್ರೆಯಲ್ಲಿ ಔಷಧಿ ಕೊರತೆ ಇಲ್ಲ. ಆದರೂ ವೈದ್ಯಧಿಕಾರಿಗಳ ನಿರ್ಲಕ್ಷ್ಯದಿಂದ ಬಾಲಕ ಮೃತಪಟ್ಟಿದ್ದಾನೆ. ಕೂಡಲೆ ಸಂಬಂಧಿಸಿದ ವೈದ್ಯಾಧಿಕಾರಿಗಳನ್ನು ಕೆಲಸದಿಂದ ಅಮಾನತುಗೊಳಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 24 ಪಶು ವೈದ್ಯರ ಹುದ್ದೆ ಖಾಲಿ ಇದೆ. ವೈದ್ಯರ ಹಾಗೂ ಔಷಧಿಗಳ ಕೊರತೆ ನಿವಾರಣೆಗೆ ಸಂಬಂಧಿಸಿದ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆಯಲಾಗುವುದು ಎಂದರು. ಆನೆಗಳ ಹಾವಳಿ ತಪ್ಪಿಸಲು ತಡೆಗೋಡೆ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾ ಅರಣ್ಯಾಧಿಕಾರಿಗೆ ತಿಳಿಸಿದರು.ಪ್ರವಾಸೋದ್ಯಮ ಇಲಾಖೆ ವತಿಯಿಂದ ರಾಮನಗರದ ರಂಗರಾಯರದೊಡ್ಡಿ ಹಾಗೂ ನಲ್ಲಿಗುಡ್ಡೆ ಕರೆಗಳಲ್ಲಿ ಬೋಟಿಂಗ್ ಮಾಡಲಾಗಿದ್ದು, ಪ್ರವಾಸಿಗರ ಸುರಕ್ಷತೆಯ ದೃಷ್ಠಿಯಿಂದ ಕೆರೆಯಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ತೆರವುಗೊಳಿಸುವಂತೆ ಮಂಜುನಾಥ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿಪಂ ಸಿಇಒ ಅನ್ಮೋಲ್ ಜೈನ್, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಡಿವೈಎಸ್ಪಿ ರಾಜೇಂದ್ರ, ದಿಶಾ ಸಮಿತಿಯ ನಾಮನಿರ್ದೇಶನ ಸದಸ್ಯರಾದ ನರಸಿಂಹಮೂರ್ತಿ, ರಾಜೇಶ್, ಶಿವಣ್ಣ, ರೇಖಾ, ಶೋಭಾ, ಸಿದ್ಧರಾಮ, ಶ್ರೀನಿವಾಸ್ ಉಪಸ್ಥಿತರಿದ್ದರು.(ಫೋಟೋ ಕ್ಯಾಫ್ಷನ್)
ರಾಮನಗರದಲ್ಲಿ ಸಂಸದ ಡಾ.ಮಂಜುನಾಥ್ ಅಧ್ಯಕ್ಷತೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು.