ಸಾರಾಂಶ
ಕನ್ನಡಪ್ರಭವಾರ್ತೆ ಬೆಂಗಳೂರು
‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಮೂಲಕ ಖ್ಯಾತರಾಗಿದ್ದ ಚಿತ್ರನಟ, ಬಿಜೆಪಿ ಮುಖಂಡ, ನಿವೃತ್ತ ಐಎಎಸ್ ಅಧಿಕಾರಿ ಕೆ ಶಿವರಾಮ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ.
ತಕ್ಷಣ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
71 ವರ್ಷದ ಕೆ. ಶಿವರಾಮ್ ಅವರು ಕೆಲವು ದಿನಗಳ ಹಿಂದೆ ರಕ್ತದೊತ್ತಡದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಅದಾದ ಬಳಿಕ ಇದೀಗ ಹೃದಯಾಘಾತಕ್ಕೆ ಒಳಗಾಗಿದ್ದು, ಅವರ ಮಿದುಳು ನಿಷ್ಕ್ರಿಯಗೊಂಡಿದೆ ಎನ್ನಲಾಗಿದ್ದು, ಆರೋಗ್ಯ ಸ್ಥಿತಿ ಸಂಕೀರ್ಣವಾಗಿದೆ ಎನ್ನಲಾಗಿದೆ.
ಮೂಲತಃ ರಾಮನಗರದವರಾದ ಕೆ ಶಿವರಾಮ್ ಕನ್ನಡ ಭಾಷೆಯಲ್ಲಿ ಐಎಎಸ್ ಪರೀಕ್ಷೆ ಬರೆದು ತೇರ್ಗಡೆಯಾದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಬಳಿಕ ನಿವೃತ್ತಿ ಪಡೆದು ರಾಜಕೀಯಕ್ಕಿಳಿದಿದ್ದರು.
ಜೆಡಿಎಸ್ ಪಕ್ಷದ ಮೂಲಕ ಬಿಜಾಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಕೊನೆಗೆ ಬಿಜೆಪಿ ಪಕ್ಷಕ್ಕೆ ಸೇರಿದ್ದರು.
ಕಳೆದ ಹಲವು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದರು. ಛಲವಾದಿ ಮಹಾಸಭೆಯ ಮುಖಂಡರೂ ಆಗಿದ್ದರು. 1993ರಲ್ಲಿ ತೆರೆಗೆ ಬಂದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಇವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.