ಚಲನಚಿತ್ರ ನಟ ಶಂಕರ್‌ನಾಗ್ ದೈತ್ಯ ಪ್ರತಿಭೆ: ವಿನಯ್‌ಕುಮಾರ್

| Published : Nov 14 2025, 01:30 AM IST

ಸಾರಾಂಶ

ಕನ್ನಡ ಚಿತ್ರರಂಗದೊಳಗೆ ಮಿಂಚಿನಂತೆ ಬಂದು ಮರೆಯಾದವರು ಶಂಕರ್‌ನಾಗ್. ಕಡಿಮೆ ಸಮಯದಲ್ಲೇ ಜನಪ್ರಿಯರಾದರು. ಉತ್ತಮ ಚಿತ್ರಗಳಲ್ಲಿ ನಟಿಸಿ, ನಿರ್ಮಾಣ ಮಾಡಿ ಜನಮನ್ನಣೆ ಗಳಿಸಿಕೊಂಡರು. ಬೆಂಗಳೂರಿಗೆ ಮೊದಲ ಬಾರಿಗೆ ಮೆಟ್ರೋ ಕನಸನ್ನು ಕಟ್ಟಿಕೊಟ್ಟರು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಭಿನ್ನ ಆಲೋಚನೆ, ದೂರದೃಷ್ಟಿ, ಕ್ರಿಯಾಶೀಲ ನಡವಳಿಕೆ, ಸದಾ ಚಟುವಟಿಕೆಯಿಂದ ಇರುತ್ತಿದ್ದ ನಟ ಶಂಕರ್‌ನಾಗ್ ದೈತ್ಯ ಪ್ರತಿಭೆಯಾಗಿದ್ದರು. ನಟನಾಗಿ ನಿರ್ದೇಶಕನಾಗಷ್ಟೇ ಹೆಸರುವಾಸಿಯಾಗದೆ ಅಭಿವೃದ್ಧಿಪರ ಚಿಂತನೆಗಳಿಂದಲೂ ಜನಮನ್ನಣೆ ಗಳಿಸಿದ್ದರು ಎಂದು ಎಲ್ಲರೊಳಗೊಂದಾಗು ಮಂಕುತಿಮ್ಮನ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್ ಬಣ್ಣಿಸಿದರು.

ಪರಿಚಯ ಪ್ರಕಾಶನದ ವತಿಯಿಂದ ನಗರದ ಶಿವನಂಜಪ್ಪ ಉದ್ಯಾನದಲ್ಲಿರುವ ದೇವರಕಾಡು ಕಟ್ಟೆ ಮನೆಯಲ್ಲಿ ಚಲನಚಿತ್ರ ನಾಯಕ ದಿ.ಶಂಕರ್‌ನಾಗ್ ಜನ್ಮದಿನದ ಅಂಗವಾಗಿ ನಡೆದೆ ಓದಿನ ಹಾದಿ-೫ ಸಂಚಿಕೆ ಅಭಿಯಾನದಲ್ಲಿ ಶಂಕರ್‌ನಾಗ್ ಸ್ಮರಣೆ ಹಾಗೂ ಅನಂತನಾಗ್ ಬರೆದಿರುವ ನನ್ನ ತಮ್ಮ ಶಂಕರ್ ಮತ್ತು ಮಾಲ್ಗುಡಿ ಡೇಸ್ ಕೃತಿ ಓದುವ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡ ಚಿತ್ರರಂಗದೊಳಗೆ ಮಿಂಚಿನಂತೆ ಬಂದು ಮರೆಯಾದವರು ಶಂಕರ್‌ನಾಗ್. ಕಡಿಮೆ ಸಮಯದಲ್ಲೇ ಜನಪ್ರಿಯರಾದರು. ಉತ್ತಮ ಚಿತ್ರಗಳಲ್ಲಿ ನಟಿಸಿ, ನಿರ್ಮಾಣ ಮಾಡಿ ಜನಮನ್ನಣೆ ಗಳಿಸಿಕೊಂಡರು. ಬೆಂಗಳೂರಿಗೆ ಮೊದಲ ಬಾರಿಗೆ ಮೆಟ್ರೋ ಕನಸನ್ನು ಕಟ್ಟಿಕೊಟ್ಟರು. ಚಾಮುಂಡಿ ಬೆಟ್ಟಕ್ಕೆ ರೋಪ್-ವೇ ನಿರ್ಮಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದರು. ಶಂಕರ್‌ನಾಗ್ ಸಾಮಾಜಿಕ ಕಳಕಳಿಯ ಅಭಿವೃದ್ಧಿಪರ ಚಿಂತನೆಗಳನ್ನು ಒಳಗೊಂಡಿದ್ದ ವ್ಯಕ್ತಿಯಾಗಿದ್ದರು. ಕನ್ನಡ ಚಿತ್ರರಂಗ ಇರುವವರೆಗೂ ಶಂಕರ್‌ನಾಗ್ ಜೀವಂತವಾಗಿರುತ್ತಾರೆ. ಅಟೋ ಚಾಲಕರು, ಅಭಿಮಾನಿಗಳು, ಕನ್ನಡಿಗರು ಸದಾ ಸ್ಮರಿಸಿಕೊಳ್ಳುವ ಪ್ರತಿಭಾವಂತ ನಟರಾಗಿದ್ದರು ಎಂದು ಬಣ್ಣಿಸಿದರು.

ದಿನೇ ದಿನೇ ಪುಸ್ತುಕಗಳನ್ನು ಓದುವ ಹವ್ಯಾಸಿಗರು ಕಡಿಮೆಯಾಗುತ್ತಿದ್ದಾರೆ, ಮೊಬೈಲ್ ನೋಡುವವರು ಹೆಚ್ಚಾಗುತ್ತಾರೆ. ಪರಿಚಯ ಪ್ರಕಾಶನ ತಂಡದವರು ಪುಸ್ತಕ ಓದುವ ಸಂಸ್ಕೃತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಓದಿನ ಹಾದಿ ಆರಂಭಿಸಿ ಪುಸ್ತಕ ಓದುವ ಗೀಳನ್ನು ಹೆಚ್ಚಿಸುವ ವಿಭಿನ್ನ ಅಭಿಯಾನ ಆರಂಭಿಸಿದೆ, ಓದುಗರು-ಕೇಳುಗರು ಒಂದೇ ಕಡೆ ಲಭ್ಯವಾಗುತ್ತಿದ್ದಾರೆ ಎಂದು ನುಡಿದರು.

ಪರ್ತಕರ್ತ ಸಿದ್ದು ಆರ್.ಜೆ.ಹಳ್ಳಿ ಮಾತನಾಡಿ, ಶಂಕರ್‌ನಾಗ್ ಅವರ ಕುರಿತು ಅನಂತ್‌ನಾಗ್ ಬರೆದಿರುವ ನನ್ನ ತಮ್ಮ ಶಂಕರ್ ಕೃತಿ ಕೆಲವು ಪುಟಗಳನ್ನು ಓದಿ, ಜೀವನಚರಿತ್ರೆ ಮತ್ತು ಸಿನಿಮಾ ರಂಗ ಇರುವ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಸಿದರು.

ಇದೇ ಸಂಧರ್ಭದಲ್ಲಿ ಶಂಕರ್‌ನಾಗ್ ಅಭಿನಯ ಚಲನಚಿತ್ರ ಗೀತೆಗಳನ್ನು ಗಾಯಕರು ಹಾಡಿದರು, ಭಾವಚಿತ್ರಕ್ಕೆ ಪುಷ್ಪನಮನ-ದೀಪನಮನ ಸಮರ್ಪಿಸಲಾಯಿತು.

ಪರಿಚಯ ಪ್ರಕಾಶನದ ಶಿವಕುಮಾರ್ ಆರಾಧ್ಯ ಮತ್ತು ತಂಡ, ಪ್ರತಿಭಾಂಜಲಿ ಡೇವಿಡ್ ಹಾಗೂ ಹವ್ಯಾಸಿ ಓದುಗರು-ಕೇಳುಗರು ಸಮಾರಂಭದಲ್ಲಿ ಭಾಗವಹಿಸಿದ್ದರು.